
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಯಾವುದೇ ಕೆರೆಗಳ ನೀರು ಸಂಸ್ಕರಿಸಿದ ನಂತರವೂ ಬಳಕೆಗೆ ಯೋಗ್ಯವಾಗಿಲ್ಲ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್‌ಪಿಸಿಬಿ) ವರದಿ ತಿಳಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಗರದಲ್ಲಿನ 110 ಕೆರೆಗಳನ್ನು ಮಂಡಳಿ ಅಧ್ಯಯನ ಮಾಡಿದ್ದು, ಎಲ್ಲ ಕೆರೆಗಳು ಡಿ ಮತ್ತು ಇ ಕೆಟಗರಿಗಳ ಅಡಿಯಲ್ಲಿ ಬಂದಿದ್ದು, ಯಾವುದೂ ಎ, ಬಿ ಅಥವಾ ಸಿ ಕೆಟಗರಿಯಲ್ಲಿಲ್ಲ ಎಂದು ಹೇಳಿದೆ.
ಹಲಸೂರು, ಮಡಿವಾಳ, ಯಡಿಯೂರು, ಸ್ಯಾಂಕಿ ಟ್ಯಾಂಕಿ, ವರ್ತೂರು, ಬೆಳ್ಳಂದೂರು, ಹೆಬ್ಬಾಳ, ಪುಟ್ಟೇನಹಳ್ಳಿ ಮತ್ತು ಮಹದೇವಪುರದಂತಹ ಪ್ರಮುಖ ಕೆರೆಗಳು ಡಿ ವರ್ಗದ ಅಡಿಯಲ್ಲಿ ಬರುತ್ತಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗೆ ಲಭ್ಯವಿರುವ ಲೇಕ್ ಡೇಟಾ ತೋರಿಸಿದೆ.
ಎಲೆಮಲ್ಲಪ ಶೆಟ್ಟಿ, ಕೈಕೊಂಡನಹಳ್ಳಿ, ಸಿಂಗಸಂದ್ರ, ರಾಂಪುರ, ಅಂಜನಾಪುರ, ಕೂಡ್ಲು, ಬಸವನಪುರ, ಶೆಟ್ಟಿಹಳ್ಳಿ, ಸೀಗೇಹಳ್ಳಿ ಮುಂತಾದ ಕೆರೆಗಳಲ್ಲಿನ ನೀರಿನ ಗುಣಮಟ್ಟ ಇ ವರ್ಗದಲ್ಲಿದೆ.
ಸಂಸ್ಕರಿಸಿದ ನಂತರವೂ ಕೆರೆಯ ನೀರು ಬಳಕೆಗೆ ಯೋಗ್ಯವಾಗಿಲ್ಲ. ''ನಗರದ ಬಹುತೇಕ ಕೆರೆಗಳು ಕೊಳಚೆ ನೀರಿನಿಂದ ತುಂಬಿವೆ. ಒಳಚರಂಡಿ ಮಾರ್ಗಗಳು ಸರಿಯಾಗಿ ಸಂಪರ್ಕ ಹೊಂದಿಲ್ಲ ಮತ್ತು ಔಟ್ಲೆಟ್ಗಳನ್ನು ಪರಿಶೀಲಿಸಲಾಗಿಲ್ಲ. ಈ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ರಾಜ್ಯ ಸರ್ಕಾರಿ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿದ್ದರೂ ಕೆರೆಗಳನ್ನು ಸುಧಾರಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ಜನವರಿಯಿಂದ ಜುಲೈ ವರೆಗಿನ ಅಂಕಿಅಂಶಗಳನ್ನು ಮೌಲ್ಯಮಾಪನ ಮಾಡಿದ ಕೆಎಸ್‌ಪಿಸಿಬಿ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಇದಕ್ಕೆ ಕೆಎಸ್‌ಪಿಸಿಬಿ ಕೂಡ ಹೊಣೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿರುಗೇಟು ನೀಡಿದ್ದಾರೆ. "ನಾಗರಿಕ ಸಂಸ್ಥೆಗಳು ಮತ್ತು ಪಂಚಾಯತ್‌ಗಳಿಗೆ ನೋಟಿಸ್‌ಗಳನ್ನು ನೀಡುವ ಬದಲು, ಅವರು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೂ ನೋಟಿಸ್ ನೀಡಬೇಕು ಎಂದಿದ್ದಾರೆ.
KSPCB ಮಾಲಿನ್ಯಕಾರಕ ಕೈಗಾರಿಕೆಗಳು, ಅಪಾರ್ಟ್‌ಮೆಂಟ್ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ಬಂದ್ ಮಾಡಬೇಕು. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ವಿಳಂಬವಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಬಿಎಂಪಿಯಲ್ಲಿ 183 ಜೀವಂತ ಕೆರೆಗಳಿದ್ದು, 136 ಕೆರೆಗಳಿಗೆ ಕಾಯಕಲ್ಪ ನೀಡಲಾಗಿದೆ,'' ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಫ್ರೆಂಡ್ಸ್ ಆಫ್ ಲೇಕ್ಸ್‌ನ ರಾಮ್ ಪ್ರಸಾದ್ ಮಾತನಾಡಿ, ''ಕೆರೆಗಳ ಸ್ಥಿತಿ ಸುಧಾರಿಸಿಲ್ಲ. ಹೆಚ್ಚಿನ ಕೆರೆಗಳು E ಯಿಂದ D ವರ್ಗಕ್ಕೆ ಸ್ಥಳಾಂತರಗೊಂಡಿಲ್ಲ. ಕೆರೆಗಳಲ್ಲಿ ಕರಗಿದ ಆಮ್ಲಜನಕದ ಮಟ್ಟವು ಕಡಿಮೆಯಾಗಿದೆ. ಕೆಎಸ್‌ಪಿಸಿಬಿ ನೋಟಿಸ್‌ಗಳನ್ನು ನೀಡುತ್ತದೆ ಮತ್ತು ವಿಷಯ ಅಲ್ಲಿಗೆ ಕೊನೆಗೊಳ್ಳುತ್ತದೆ ಎಂದಿದ್ದಾರೆ.
Advertisement