ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಅ್ಯಂಡ್ ಗ್ಯಾಂಗ್ ವಿರುದ್ಧ 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಅವರ ಗ್ಯಾಂಗ್ ವಿರುದ್ಧ 3,991 ಪುಟಗಳ ದೋಷಾರೋಪ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಬುಧವಾರ ಸಲ್ಲಿಕೆ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಆರೋಪಿಗಳು
ರೇಣುಕಾಸ್ವಾಮಿ ಕೊಲೆ ಆರೋಪಿಗಳು
Updated on

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಅವರ ಗ್ಯಾಂಗ್ ವಿರುದ್ಧ 3,991 ಪುಟಗಳ ದೋಷಾರೋಪ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಬುಧವಾರ ಸಲ್ಲಿಕೆ ಮಾಡಿದ್ದಾರೆ.

ಬೆಂಗಳೂರು ಪೊಲೀಸರು 24ನೇ ಎಸಿಎಂಎಂ ಕೋರ್ಟ್‌ಗೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳ ವಿರುದ್ಧ 3,991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆಂದು ತಿಳಿದುಬಂದಿದೆ.

ಕಾಮಾಕ್ಷಿಪಾಳ್ಯ ಇನ್‌ಸ್ಪೆಕ್ಟರ್‌, ರೇಣುಕಾಸ್ವಾಮಿ ಕೊಲೆ ಕೇಸ್ ತನಿಖಾಧಿಕಾರಿ ಎಸಿಪಿ ಚಂದನ್‌ ಕುಮಾರ್‌ ನೇತೃತ್ವದಲ್ಲಿ ಕೋರ್ಟ್‌ಗೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.

ದೋಷಾರೋಪ ಪಟ್ಟಿಯಲ್ಲಿ ದರ್ಶನ್ ಅವರನ್ನು 2ನೇ ಆರೋಪಿ ಎಂದೇ ದಾಖಲಿಸಲಾಗಿದ್ದು, ಪವಿತ್ರಾ 1ನೇ ಆರೋಪಿಯಾಗಿದ್ದಾರೆಂದು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

17 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗಿದ್ದು, 3 ಪ್ರತ್ಯಕ್ಷ ಸಾಕ್ಷಿಗಳು, ಎಫ್​ಎಸ್​ಎಲ್​ ಮತ್ತು ಸಿಎಫ್​ಎಸ್​ಎಲ್​ನಿಂದ 8 ವರದಿಗಳಿದ್ದು, ಈ ಪ್ರಕರಣದಲ್ಲಿ ಒಟ್ಟು 231 ಸಾಕ್ಷಿಗಳಿರುವುದಾಗಿ ತಿಳಿಸಲಾಗಿದೆ.

ಪ್ರಕರಣ ತನಿಖೆ ಪೂರ್ಣಗೊಂಡಿಲ್ಲದಿರುವುದರಿಂದ ಸಿಆರ್​ಪಿಸಿ 173(8) ಅಡಿಯಲ್ಲಿ ಪ್ರಿಲಿಮಿನರಿ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ರೇಣುಕಾಸ್ವಾಮಿ ಕೊಲೆ ಆರೋಪಿಗಳು
ರೇಣುಕಾಸ್ವಾಮಿ ಹತ್ಯೆ ಪ್ರಕರಣ: ತನಿಖೆ ಅಂತಿಮ ಘಟ್ಟಕ್ಕೆ; ಇದೇ ವಾರ ದರ್ಶನ್‌ ಆ್ಯಂಡ್ ಗ್ಯಾಂಗ್ ವಿರುದ್ಧ ಚಾರ್ಜ್'ಶೀಟ್ ಸಲ್ಲಿಕೆ!

ಈ ನಡುವೆ ಅಪಹರಣ ಹಾಗೂ ಹಲ್ಲೆ ಮಾಡಿಸಿದ್ದು, ಕೊಲೆ ನಂತರ ಪ್ರಕರಣ ಮುಚ್ಚಿಹಾಕಲು ಹಣ ನೀಡಿದ್ದು ದರ್ಶನ್ ಎನ್ನುವುದು, ಹತ್ಯೆಗೆ ಮೂಲ ಕಾರಣ ಪವಿತ್ರಾ ಗೌಡ ಅನ್ನುವುದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಆಗಿದೆ.

ರೇಣುಕಾಸ್ವಾಮಿ ಹತ್ಯೆಗೆ ಪವಿತ್ರಾ ಗೌಡ ಮೂಲಕ ಕಾರಣವಾಗಿರುವ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಪವಿತ್ರಾ ಗೌಡ ಅವರು A1 ಆಗಿದ್ದಾರೆ. ಅಲ್ಲದೆ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಯುತ್ತಿದ್ದ ಸ್ಥಳದಲ್ಲಿ ಹಾಜರಿದ್ದು, ಚಪ್ಪಲಿಯಲ್ಲಿ ಅವರೂ ಹೊಡೆದಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಕೃತ್ಯ ನಡೆದ ಸಮಯದಲ್ಲಿ ಪವಿತ್ರ ಗೌಡ ಅಲ್ಲೇ ಇರುವುದರ ಕುರಿತು ಸಾಕ್ಷಿ ಸಿಕ್ಕಿದ್ದು, ಪವಿತ್ರ ಗೌಡ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆಕ್ಟೀವ್ ಆಗಿತ್ತು ಎಂದು ತಿಳಿಸಲಾಗಿದೆ.

ಇದಲ್ಲದೆ, ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾಸ್ವಾಮಿ ಅವರ ರಕ್ತ ಇರುವುದು ಪತ್ತೆ ಆಗಿದ್ದು, ಇದರಿಂದ ದರ್ಶನ್ ಹಲ್ಲೆ ಮಾಡಿರುವ ಬಗ್ಗೆ ಮತ್ತು ಕೊಲೆಯಲ್ಲಿ ಭಾಗಿಯಾಗಿರುವುದು ದೃಢವಾಗಿದೆ ಎಂದು ತಿಳಿದುಬಂದಿದೆ.

ರೇಣುಕಾಸ್ವಾಮಿ ಕೊಲೆ ಆರೋಪಿಗಳು
ರೇಣುಕಾಸ್ವಾಮಿ ಹತ್ಯೆ ಪ್ರಕರಣ: 10ನೇ ಆರೋಪಿ ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್

ಚಾರ್ಜ್‌ಶೀಟ್‌ನಲ್ಲೇನಿದೆ?

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 17 ವ್ಯಕ್ತಿಗಳನ್ನು ದಸ್ತಗಿರಿ ಮಾಡಿ, ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ತನಿಖಾಧಿಕಾರಿಗಳು ಇಲ್ಲಿಯವರೆಗಿನ ತನಿಖೆಯಲ್ಲಿನ ಸಂಗ್ರಹಿಸಿರುವ ಪ್ರತ್ಯಕ್ಷ, ಸಾಧರ್ಭಿಕ, ತಾಂತ್ರಿಕ, ವೈಜ್ಞಾನಿಕ ಹಾಗೂ ಇತರೆ ಸಾಕ್ಷ್ಯಾಧಾರಗಳ ಕುರಿತ ದೋಷಾರೋಪಣಾ ಪಟ್ಟಿಯನ್ನು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಈ ದೋಷಾರೋಪಣಾ ಪಟ್ಟಿಯು ಒಟ್ಟು 231 ಸಾಕ್ಷಿದಾರರನ್ನು ಒಳಗೊಂಡಂತೆ ಒಟ್ಟು 3991 ಪುಟಗಳುಳ್ಳ 07 ಸರಿಪುಟಗಳ 10 ಕಡತಗಳನ್ನು ಒಳಗೊಂಡಿರುತ್ತದೆ. ಈ ಪ್ರಕರಣದ ತನಿಖೆಯನ್ನು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ, ಹೆಚ್ಚುವರಿ ಆಯುಕ್ತ ಸತೀಶ್‌ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಎಸ್‌. ಗಿರೀಶ್, ನೇತೃತ್ವದಲ್ಲಿ ವಿಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎನ್‌. ಚಂದನ್‌ ಕುಮಾರ್ ಹಾಗೂ ಅಧಿಕಾರಿ, ಸಿಬ್ಬಂದಿಯನ್ನೊಳಗೊಂಡ ತಂಡ ಭೇದಿಸಿದೆ.

ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ತನಿಖೆಯನ್ನು ಕೈಗೊಂಡು ಸಂಗ್ರಹವಾಗುವ ಸಾಕ್ಷಾಧಾರಗಳನ್ನು ಕಲಂ- 173(8) ಸಿಆರ್‌ಪಿಸಿ ಅಡಿಯಲ್ಲಿ ಘನ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದರ್ಶನ್‌ & ಗ್ಯಾಂಗ್‌ ವಿರುದ್ಧ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಒಟ್ಟು 231 ಸಾಕ್ಷಿಗಳನ್ನು ಕಲೆಹಾಕಲಾಗಿದೆ. ಈ ಪೈಕಿ ಪ್ರತ್ಯಕ್ಷ ಸಾಕ್ಷಿದಾರರು 3, FSL/ಸಿಎಫ್‌ಎಸ್‌ಎಲ್‌ ಸಾಕ್ಷಿಗಳು 8, ಸಿಆರ್‌ಪಿಸಿ ಸೆಕ್ಷನ್‌ 161 ಮತ್ತು 164 ಅಡಿಯಲ್ಲಿ 97 ಸಾಕ್ಷಿಗಳು (ಸಿಆರ್‌ಪಿಸಿ 164 ಅಡಿಯಲ್ಲಿ 27 ಜನ ಸಾಕ್ಷಿದಾರರು ಸೇರಿ), ಪಂಚರು 59, ಇತರೇ ಸರ್ಕಾರಿ ಅಧಿಕಾರಿಗಳು (ತಜಶೀಲ್ದಾರ್‌, ವೈದ್ಯರು, ಆರ್‌ಟಿಒ, ಅಭಿಯಂತರರು) 8 ಹಾಗೂ ಪೊಲೀಸರಿಂದ 56 ಸಾಕ್ಷ್ಯಗಳನ್ನು ಸಂಗ್ರಹಿಸಿರುವುದಾಗಿ ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

ಜೂನ್ 9 ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಜೂನ್ 11 ರಂದು ನಟ ದರ್ಶನ್ ಅವರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು. ಕೊಲೆಯಂತಹ ಘೋರ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದ ನಂತರ ಪೊಲೀಸರು 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸುವುದು ಕಡ್ಡಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com