ಬೆಂಗಳೂರು: ಬಿಬಿಎಂಪಿ ವಿಜಯನಗರದಲ್ಲಿ ನಿರ್ಮಿಸಿರುವ ಮೊಟ್ಟಮೊದಲ ಹವಾನಿಯಂತ್ರಿತ ಭೂಗತ ಮಾರುಕಟ್ಟೆ ಪಾಲಿಕೆ ಬಜಾರ್‌ಗೆ ತೆರಳುವವರ ಸಂಖ್ಯೆ ಕಡಿಮೆಯಿದೆ.
ತಳ್ಳುವ ಗಾಡಿ, ತಾತ್ಕಾಲಿಕ ಶೆಡ್ ಮತ್ತು ರಸ್ತೆಯ ಪಕ್ಕದಲ್ಲಿ ಟೆಂಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರಾಟಗಾರರು ವ್ಯಾಪಾರ ಕಳೆದುಕೊಳ್ಳುವ ಭಯದಿಂದ ಹವಾನಿಯಂತ್ರಿತ ಸ್ಥಳಕ್ಕೆ ತೆರಳಲು ಮನಸ್ಸಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ತಂಪಾದ ವಾತಾವರಣವನ್ನು ನಾಗರಿಕರು, ವಿಶೇಷವಾಗಿ ವಿದ್ಯಾರ್ಥಿಗಳು ಬಯಸುತ್ತಾರೆ.
ಬಿಬಿಎಂಪಿಯು ವಿಜಯನಗರ ಮೆಟ್ರೋ ನಿಲ್ದಾಣದ ಬಳಿ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಭೂಗತ ಮಾರುಕಟ್ಟೆ ಪ್ರದೇಶದಲ್ಲಿ 79 ಮಳಿಗೆಗಳಿವೆ. 2017 ರಲ್ಲಿ ಪ್ರಾರಂಭವಾದ ಕಾಮಗಾರಿ 2024 ರಲ್ಲಿ ಪೂರ್ಣಗೊಂಡಿತು. ಇದನ್ನು ಆಗಸ್ಟ್ 25 ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಆದರೆ ಇದುವರೆಗೆ ಕೇವಲ ಮೂರು ಮಾರಾಟಗಾರರು ಮಾತ್ರ ಅಲ್ಲಿಗೆ ಸ್ಥಳಾಂತರಗೊಂಡಿದ್ದಾರೆ. ಆದರೆ ವ್ಯಾಪಾರ ಕುಸಿತದ ಕಾರಣದಿಂದ ಅವರು ಕೂಡಾ ಪಶ್ಚಾತ್ತಾಪ ಪಡುತ್ತಿದ್ದಾರೆ.
ಮತ್ತೆ ತಳ್ಳುಗಾಡಿ ವ್ಯಾಪಾರ ಮಾಡುತ್ತೇನೆ. ಹಬ್ಬ ಹರಿದಿನಗಳಲ್ಲಿ ನಷ್ಟ ಅನುಭವಿಸುವುದು ನನಗಿಷ್ಟವಿಲ್ಲ. ಕಟ್ಟಡ ಹವಾನಿಯಂತ್ರಿತವಾಗಿದೆ, ಆದರೆ ಟ್ಯೂಬ್ಲೈಟ್ ಹೊರತುಪಡಿಸಿ, ನಮಗೆ ನೀಡಿರುವ ಅಂಗಡಿಯಲ್ಲಿ ಬೇರೇನೂ ಇಲ್ಲ. ಬಜಾರ್ ಪ್ರಾರಂಭವಾದ ಒಂದು ವಾರದೊಳಗೆ ಗೋಡೆಗಳಲ್ಲಿ ನೀರು ಸೋರಿಕೆಯಾಗಿದೆ. ರಾತ್ರಿ ಸಮಯದಲ್ಲಿ ರಸ್ತೆ ಬದಿಯ ತಾತ್ಕಾಲಿಕ ಶೆಡ್‌ನಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು ತರಕಾರಿ ಮಾರಾಟಗಾರ ಬಸವರಾಜ ಹೇಳಿದರು.
ಪೂಜೆ ಸಾಮಾಗ್ರಿ ಮಾರುವ ಕಲ್ಲಮ್ಮನ ಪ್ರತಿಕ್ರಿಯೆಯೂ ಇದೇ ಆಗಿತ್ತು. ಇಲ್ಲಿಗೆ ಸ್ಥಳಾಂತರಗೊಂಡಾಗಿನಿಂದ, ಮಾರಾಟ ನಡೆಯುತ್ತಿಲ್ಲ. ಬೇಗನೆ ಸ್ಥಳಾಂತರಗೊಳ್ಳಲು ಹೇಳಿದ್ದರಿಂದ ಹಾಗೆ ಮಾಡಿದ್ದೆ. ಆದರೆ ಈಗ ತಳ್ಳುವ ಗಾಡಿಯನ್ನು ಬಾಡಿಗೆಗೆ ತೆಗೆದುಕೊಳ್ಳುತ್ತೇನೆ ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಅಧಿಕಾರಿಯೊಬ್ಬರು, ಹೊಸ ಪ್ರದೇಶವಾಗಿರುವುದರಿಂದ ಕಡಿಮೆ ವ್ಯಾಪಾರವಾಗುತ್ತಿದೆ. ಜತೆಗೆ ಮಳಿಗೆಗಳ ಹಂಚಿಕೆ ಇನ್ನೂ ಆಗಬೇಕಿದೆ. ವಿದ್ಯುತ್ ಮೀಟರ್‌ಗಳನ್ನು ಸರಿಪಡಿಸಬೇಕಾಗಿದೆ. ಮಾರಾಟಗಾರರನ್ನು ಬಜಾರ್‌ಗೆ ಸ್ಥಳಾಂತರಿಸಲು ಮುಂದುವರಿಸುತ್ತೇವೆ. ಬಜಾರ್ ಪ್ರಾರಂಭವಾದ ನಂತರ ರಸ್ತೆಯ ಪಕ್ಕದಲ್ಲಿ ವ್ಯಾಪಾರ ಮುಂದುವರಿಸಲು ಅನುಮತಿ ನೀಡುವುದಿಲ್ಲ ಎಂದು ಹೇಳಿದರು.
Advertisement