ಬೆಂಗಳೂರು: ಸುಮಾರು 25,000 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರು ಹೊರವರ್ತುಲ ರಸ್ತೆ ಯೋಜನೆ ಮತ್ತು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಈ ಯೋಜನೆಗೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಈ ಯೋಜನೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅನುಷ್ಠಾನಕ್ಕೆ ತರಲಿದೆ ಎಂದು ಮಾಹಿತಿ ನೀಡಿದರು.
‘ಆರ್ಥಿಕ ಇಲಾಖೆಯ ಅಭಿಪ್ರಾಯದ ಪ್ರಕಾರ ಆರ್‌ಇಸಿ, ಹುಡ್ಕೊ, ಪಿಎಫ್‌ಸಿ ಹಾಗೂ ಇತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಒಪ್ಪಿಗೆ ನೀಡಲಾಯಿತು. ಶೇ 75 ರಷ್ಟು ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ರೀತಿ ಪಡೆಯುವ ಸಾಲದ ಮೊತ್ತಕ್ಕೆ ರಾಜ್ಯ ಸರ್ಕಾರದ ವತಿಯಿಂದ ಭದ್ರತೆ ನೀಡಲು ಮತ್ತು ಬಡ್ಡಿ ಮರುಪಾವತಿಯನ್ನು ಸರ್ಕಾರದ ಅನುದಾನದ ಮೂಲಕ ನೀಡಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲು ಅನುಮತಿ ನೀಡಲಾಗಿದೆ.
ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲದ ಮೊತ್ತಕ್ಕೆ ರಾಜ್ಯ ಸರ್ಕಾರದ ವತಿಯಿಂದ ಭದ್ರತೆ ನೀಡಲು ಮತ್ತು ಆರ್ಥಿಕ ಇಲಾಖೆಯ ಅಭಿಪ್ರಾಯದಂತೆ ಬಡ್ಡಿ ಮೊತ್ತವನ್ನು ಬಿಡಿಎ ಮತ್ತು ರಾಜ್ಯ ಸರ್ಕಾರ ಭರಿಸಬೇಕು ಎಂಬ ಅಂಶಕ್ಕೂ ಒಪ್ಪಿಗೆ ನೀಡಲಾಯಿತು ಎಂದು ಹೇಳಿದರು.
ಅಂತೆಯೇ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಲಿಮಿಟೆಡ್ ಅಧ್ಯಕ್ಷರ ಸ್ಥಾನಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವರ ಬದಲಾಗಿ ಬೇರೊಬ್ಬರನ್ನು ನೇಮಿಸಲೂ ಸಂಪುಟ ಸಭೆ ಅನುಮತಿ ನೀಡಿದೆ ಎಂದು ಸಚಿವರು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ, ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರು PRR ನ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ನವೀನ ಹಣಕಾಸು ಆಯ್ಕೆಗಳನ್ನು ಅನ್ವೇಷಿಸಲು ಬಿಡಿಎಗೆ ನಿರ್ದೇಶನ ನೀಡಿದರು. ಹೊಸ ಪ್ರಸ್ತಾಪದ ಅಡಿಯಲ್ಲಿ, ಬಿಡಿಎ ನಿರ್ಮಾಣ, ಮಾಲೀಕತ್ವ, ನಿರ್ವಹಣೆ ಮತ್ತು ವರ್ಗಾವಣೆ (BOOT) ಮಾದರಿಯನ್ನು ಬಳಸಿಕೊಂಡು ಖಾಸಗಿ ಸಂಸ್ಥೆಗಳಿಗೆ ಯೋಜನೆಯನ್ನು ನಿಯೋಜಿಸುವ ಕುರಿತು ಚರ್ಚೆ ನಡೆಸಿದರು ಎನ್ನಲಾಗಿದೆ.
Advertisement