ನನಸಾಯ್ತು ತುಳವರ ಕನಸು: ತುಳು ಲಿಪಿಗೆ ಯೂನಿಕೋಡ್ ಮಾನ್ಯತೆ!

ಯೂನಿಕೋಡ್ ನ 16ನೇ ಆವೃತ್ತಿಯಾಗಿ ತುಳು ಲಿಪಿ ಸೇರ್ಪಡೆಯಾಗಿದ್ದು, ಒಟ್ಟು 80 ಅಕ್ಷರಗಳನ್ನು ಸೇರ್ಪಡೆಗೊಳಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ತುಳು ಭಾಷೆ ಇದೀಗ ಯೂನಿಕೋಡ್‌ಗೆ ಸೇರ್ಪಡೆಗೊಂಡಿದ್ದು, ಈ ಮೂಲಕ ಹಲವು ವರ್ಷಗಳ ತುಳುವರ ಕನಸು ನನಸಾದಂತಾಗಿದೆ.

ಯೂನಿಕೋಡ್ ನ 16ನೇ ಆವೃತ್ತಿಯಾಗಿ ತುಳು ಲಿಪಿ ಸೇರ್ಪಡೆಯಾಗಿದ್ದು, ಒಟ್ಟು 80 ಅಕ್ಷರಗಳನ್ನು ಸೇರ್ಪಡೆಗೊಳಿಸಲಾಗಿದೆ. ಯುನಿಕೋಡ್‌ನಲ್ಲಿ ತುಳು ಲಿಪಿ ಲಭ್ಯವಾಗಿರುವ ಕಾರಣ ಮುಂದಿನ ದಿನಗಳಲ್ಲಿ ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್, ಟೆಕ್ಸ್ಟ್ ಟು ಸ್ಪೀಚ್​, ಸ್ಪೀಚ್​ ಟು ಟೆಕ್ಸ್ಟ್ ​ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಇವೆಲ್ಲವನ್ನೂ ಮಾಡಲು ಸಾಧ್ಯವಾಗಲಿದೆ.

2017ರಲ್ಲಿ ಯೂನಿಕೋಡ್​ ಅಗತ್ಯದ ಹಿನ್ನೆಲೆಯಲ್ಲಿ ತುಳು ಸಾಹಿತ್ಯ ಅಕಾಡೆಮಿಯು ತುಳು ಅಕ್ಷರಗಳನ್ನು ಅಂತಿಮಗೊಳಿಸಲು ಒಂದು ಸಮಿತಿ ರಚಿಸಿತ್ತು. ಮಾಹಿತಿ ತಂತ್ರಜ್ಞಾನ ತಜ್ಞರಾದ ಯು.ಬಿ.ಪವನಜ ತಾಂತ್ರಿಕ ಸಲಹೆ ನೀಡಿದ್ದರು. ಇದರಂತೆ ತುಳು ಅಕ್ಷರಗಳ ಪಟ್ಟಿ ಮಾಡಲಾಗಿತ್ತು. 80 ಪುಟಗಳ ಪಟ್ಟಿಯನ್ನು ಯುನಿಕೋಡ್‌ಗೆ ಕಳುಹಿಸಲಾಗಿತ್ತು. ಇದೇ ಸಂದರ್ಭ 'ತಿಗಳಾರಿ ಲಿಪಿ' ಎಂದು ಪ್ರತ್ಯೇಕ ಪ್ರಸ್ತಾವನೆ ಕೂಡ ಸಲ್ಲಿಸಲಾಗಿತ್ತು.

ಬಳಿಕ ಎರಡೂ ಕಡೆ ಹಲವು ಪತ್ರ ವ್ಯವಹಾರಗಳು ನಡೆದು ಅಂತಿಮವಾಗಿ 'ತುಳು-ತಿಗಳಾರಿ' ಹೆಸರಿನಲ್ಲಿ ಲಿಪಿಯನ್ನು ಯೂನಿಕೋಡ್‌ಗೆ ಸೇರಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ತಜ್ಞ ಯು.ಬಿ.ಪವನಜ‌ ಅವರು 2001ರಲ್ಲಿ ಯೂನಿಕೋಡ್​ ಕನ್ಸೋರ್ಶಿಯಂಗೆ ಹೋಗಿದ್ದಾಗ ಯೂನಿಕೋಡ್‌ನಲ್ಲಿ ಕನ್ನಡವನ್ನು ಸರಿಪಡಿಸಲು ಸಹಾಯ ಮಾಡಿದ್ದರು. ಆಗ ತುಳುವನ್ನು ಕೂಡ ಸೇರಿಸಬೇಕೆಂದು ಮನವಿ ಮಾಡಿದ್ದರು. ಅದರಂತೆ, ತುಳುವಿಗೆ ಒಂದು ಜಾಗ ಕಾಯ್ದಿಟ್ಟಿದ್ದರು. ತುಳು ಯೂನಿಕೋಡ್ ಲಿಪಿ ಹೇಗಿರಬೇಕು ಎಂಬ ಕಡತ ಕಳುಹಿಸಿ ಎಂದು ಅವರು ಕೇಳಿಕೊಂಡಿದ್ದರು. ತುಳು ಅಕಾಡೆಮಿ ಕಳುಹಿಸಿದ ಅಕ್ಷರಗಳ ಪಟ್ಟಿಗೂ ಈಗ ತುಳು-ತಿಗಲಾರಿ ಹೆಸರಿನಲ್ಲಿ ಯುನಿಕೋಡ್‌ನವರು ಅಂತಿಮಗೊಳಿಸಿದ ಪಟ್ಟಿಗೂ ಸಣ್ಣಪುಟ್ಟ ವ್ಯತ್ಯಾಸಗಳಿವೆ. ಆದರೆ ಬಹುತೇಕ ಅಕ್ಷರಗಳು ಬಂದಿವೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ನೀಡಿದ್ದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಹಾಗೂ ಸಮಸ್ತ ತುಳುವರ ಬಹು ವರ್ಷದ ಕನಸು ಈಡೇರಿದೆ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ತುಳು ಭಾಷೆಯಲ್ಲಿ ಮೊಟ್ಟ ಮೊದಲ ಸಂಶೋಧನಾ ಅಧ್ಯಯನ ಪ್ರಕಟ: ಪಿಹೆಚ್ ಡಿ ಗಳಿಸಿದ ಮಂಗಳೂರಿನ ಡಾ ವಿ ಕೆ ಯಾದವ್

ಹಲವು ತಜ್ಞರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದ ಸಂದರ್ಭದಲ್ಲಿ 2017ರಲ್ಲಿ ಅಂದಿನ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅವರು ವಿಷಯ ಸಮನ್ವಯತೆಗಾಗಿ ತಜ್ಞರ ಸಮಿತಿ ರಚಿಸಿ ಅಕಾಡೆಮಿ ವತಿಯಿಂದ ಸಹಕಾರ ನೀಡಲಾಗಿತ್ತು. ನಂತರದ ದಿನಗಳಲ್ಲಿ ತಜ್ಞರು ನಿರಂತರವಾಗಿ ಈ ವಿಷಯದ ಬಗ್ಗೆ ಸತತ ಮನವಿಯನ್ನು, ಪರಿಷ್ಕರಣೆಗಳನ್ನು ಕಳುಹಿಸಿ ತುಳು ಲಿಪಿಯನ್ನು ಯೂನಿಕೋಡ್ ಅಂಗೀಕರಿಸುವಂತೆ ಮಾಡಿದ್ದಾರೆ. ತುಳು ಲಿಪಿಯನ್ನು ಯೂನಿಕೋಡ್ ಅಂಗೀಕರಿಸುವ ನಿಟ್ಟಿನಲ್ಲಿ ತಜ್ಞರಾದ ಕೆ.ಪಿ.ರಾವ್, ಯು.ಬಿ.ಪವನಜ, ವೈಷ್ಣವಿ ಮೂರ್ತಿ, ಎಸ್.ಎ.ಕೃಷ್ಣಯ್ಯ, ರಾಧಕೃಷ್ಣ ಬೆಳ್ಳೂರು, ಭಾಸ್ಕರ್ ಶೇರಿಗಾರ್, ಎಸ್.ಆರ್.ವಿಘ್ನರಾಜ್, ಆಕಾಶ್ ರಾಜ್ ಸೇರಿದಂತೆ ಅನೇಕರು ಕೊಡುಗೆಗಳನ್ನು ನೀಡಿದ್ದಾರೆ.

ತುಳು ಲಿಪಿಗಿರುವ ಇನ್ನೊಂದು ಹೆಸರಿನ ಜೊತೆಗೆ ತುಳು-ತಿಗಳಾರಿ ಎಂಬುದಾಗಿ ಯೂನಿಕೋಡ್​ ಅಂಗೀಕರಿಸಿದೆ. ಈ ಮೂಲಕ ಜಾಗತಿಕವಾಗಿ ತುಳು ಲಿಪಿಯಲ್ಲಿನ ಪಠ್ಯಗಳು ಓದಲು ತೆರೆದುಕೊಳ್ಳುವ ಅವಕಾಶ ಲಭಿಸಿದೆ. ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ನಿಟ್ಟಿನ ಪ್ರಯತ್ನಕ್ಕೆ ಈಗ ಇನ್ನಷ್ಟು ಹೆಚ್ಚಿನ ಮಹತ್ವ ಬಂದಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com