ಬೆಂಗಳೂರು: ಹೀಲಳಿಗೆ ಕೆರೆಯೊಳಗೆ ಸುಮಾರು 150 ಮೀಟರ್ ಉದ್ದದ 9 ಇಂಚು ದಪ್ಪ, 40 ಅಡಿ ಅಗಲದ ಕಾಂಕ್ರೀಟ್ ರಸ್ತೆ ಹಾಗೂ ಅಕ್ರಮ ಗ್ಯಾಸ್ ಸಿಲಿಂಡರ್ ಗೋದಾಮು ತಲೆ ಎತ್ತಿದೆ.
ರಿಯಲ್ ಎಸ್ಟೇಟ್ ಕಂಪನಿಯೊಂದಕ್ಕೆ ಸಹಾಯ ಮಾಡುವ ಉದ್ದೇಶದಿಂದ ಕೆರೆ ಪಕ್ಕದಲ್ಲಿರುವ ಸ್ಮಶಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ನೆಪದಲ್ಲಿ ಅಧಿಕಾರಿಗಳು 30 ಲಕ್ಷ ರೂ.ವೆಚ್ಚದಲ್ಲಿ ಕೆರೆಯೊಳಗೆ ರಸ್ತೆ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕೆರೆ ಚಂದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು, ಬೊಮ್ಮಸಂದ್ರ ಪಂಚಾಯಿತಿಯಿಂದ ರಸ್ತೆ ಹಾಕಲಾಗಿದೆ, ಅಧಿಕಾರಿಗಳು ಬಿಲ್ಡರ್ ಗಳ ಜೊತೆ ಕೈಜೋಡಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಕೆರೆ ಹೋರಾಟಗಾರ ಕಾರ್ಯಕರ್ತರು ಆರೋಪಿಸಿದ್ದಾರೆ.
ದಿಶಾಂಕ್ ಸಾಫ್ಟ್ ವೇರ್ ನಲ್ಲಿ ಕೂಡ ನಿಯಮ ಉಲ್ಲಂಘಿಸಿ ಅತಿಕ್ರಮಣ ಮಾಡಿರುವುದು ತಿಳಿದುಬರುತ್ತಿದೆ ಎಂದು ಬೆಂಗಳೂರಿನ ಹೊರವಲಯದಲ್ಲಿರುವ 30 ಕ್ಕೂ ಹೆಚ್ಚು ಕೆರೆಗಳನ್ನು ಪುನರುಜ್ಜೀವನಗೊಳಿಸಿರುವ ಹಾಗೂ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮತ್ತು ಭಾರತದ ಇತರ ಭಾಗಗಳಲ್ಲಿ ಜಲಮೂಲಗಳನ್ನು ಪುನರುಜ್ಜೀವನಗೊಳಿಸಿ ‘ಲೇಕ್ ಮ್ಯಾನ್ ಆಫ್ ಇಂಡಿಯಾ’ ಎಂದು ಗುರುತಿಸಲ್ಪಟ್ಟಿರುವ ಆನಂದ್ ಮಲ್ಲಿಗವಾಡ್ ತಿಳಿಸಿದ್ದಾರೆ.
"ಅಧಿಕಾರಿಗಳು ಕುಂಟು ನೆಪಗಳನ್ನು ನೀಡಬಹುದು, ಆದರೆ ನನಗೆ ತಿಳಿದಿರುವ ಪ್ರಕಾರ, ಅರಣ್ಯ ಭೂಮಿ ಮತ್ತು ಕೆರೆ ಭೂಮಿ ಹಾಗೆಯೇ ಉಳಿಯಬೇಕು. 28 ಎಕರೆ ವಿಸ್ತೀರ್ಣದ ಹೀಲಳಿಗೆ ಕೆರೆಯು ಕೆಲವು ರಿಯಲ್ ಎಸ್ಟೇಟ್ ಸಂಸ್ಥೆಗಳ ದುರಾಸೆಗೆ ತುತ್ತಾಗಿದೆ. ಕೆರೆಯ ಸಮೀಪವಿರುವ ಬಡಾವಣೆಗಳಿಗೆ ಜಮೀನುಗಳನ್ನು ಸಮತಟ್ಟು ಮಾಡಲು ಟ್ರಕ್‌ಗಳು ಆಗಾಗ್ಗೆ ಬರುತ್ತಿವೆ. ಇದರ ಹಿಂದೆ ಲ್ಯಾಂಡ್ ಡೆವಲಪರ್‌ಗಳು ಇರಬಹುದೆಂದು ತೋರುತ್ತಿದೆ ಎಂದು ಮಲ್ಲಿಗವಾಡ್ ಹೇಳಿದರು. 13-ಗುಂಟೆಯಿರುವ ಸ್ಮಶಾನವನ್ನು ತಲುಪಲು ಕೆರೆ ದಂಡೆಯನ್ನು ಬಳಸಲಾಗುತ್ತಿದೆ, ಆದರೆ 2021ರಲ್ಲಿ ಅಧಿಕಾರಿಗಳು ಸುಮಾರು 200 ಮೀಟರ್ ಗೆ 40 ಅಡಿ ಅಗಲದ ರಸ್ತೆಯನ್ನು ನಿರ್ಮಿಸಿದ್ದಾರೆ. ಇಲ್ಲಿ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ. ಕೆರೆಯು ಚಂದಾಪುರ ಪುರಸಭೆ ವ್ಯಾಪ್ತಿಗೆ ಒಳಪಡುತ್ತದೆ, ಆದರೆ ರಸ್ತೆ ಹಾಕಲು ಬೊಮ್ಮಸಂದ್ರ ಪುರಸಭೆಯಿಂದ ಅನುಮತಿ ನೀಡಲಾಗಿದೆ. ಇಲ್ಲಿ ಏನೋ ಪಿತೂರಿ ನಡೆಯುತ್ತಿದೆ ಈ ಬಗ್ಗೆ ತನಿಖೆಯಾಗಬೇಕು ಎಂದು ಮಲ್ಲಿಗವಾಡ ಒತ್ತಾಯಿಸಿದರು.
ಈ ಸಂಬಂಧ ಆನೇಕಲ್ ತಹಸೀಲ್ದಾರ್ ಶಶಿಧರ್ ಮಾಡ್ಯಾಳ್ ಅವರನ್ನು ಸಂಪರ್ಕಿಸಿದಾಗ, ಅತ್ತಿಬೆಲೆ ಹೋಬಳಿಯ ಹೀಲಳಿಗೆ ಗ್ರಾಮದ ಸರ್ವೆ ನಂ.197 ಮೂಲ ಕೆರೆ ಪ್ರದೇಶವಾಗಿದ್ದು, ಬೊಮ್ಮಸಂದ್ರ ಗ್ರಾಮದ ಸರ್ವೆ ನಂ.137 ಸರಕಾರಿ ಸ್ಮಶಾನ ಭೂಮಿಯಾಗಿದೆ. ದಿಶಾಂಕ್ ಸಾಫ್ಟ್‌ವೇರ್‌ನಲ್ಲಿ ಪರಿಶೀಲಿಸಿದಾಗ, ಅತಿಕ್ರಮಣವಾಗಿದೆ ಎಂದು ತೋರುತ್ತಿದೆ. ಸಂಬಂಧಪಟ್ಟ ಉಪ ತಹಸೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿ ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು’ ಎಂದು ಮಾಡ್ಯಾಳ್ ತಿಳಿಸಿದರು. ಬೊಮ್ಮಸಂದ್ರ ಟೌನ್ ಪುರಸಭೆಯ ಅಧಿಕಾರಿಯೊಬ್ಬರು ಮಾತನಾಡಿ, ಎಸ್‌ಸಿ/ಎಸ್‌ಟಿ ಸಮುದಾಯದ ಜನರು ಸ್ಮಶಾನಕ್ಕೆ ದಾರಿ ಕೋರಿ ತಮ್ಮನ್ನು ಸಂಪರ್ಕಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಮಟ್ಟದಲ್ಲಿ ಅನುಮತಿ ನೀಡಿ ಎಲ್ಲ ವಿಧಿವಿಧಾನಗಳನ್ನು ಅನುಸರಿಸಿ ರಸ್ತೆ ನಿರ್ಮಿಸಲು ಆದೇಶ ಹೊರಡಿಸಲಾಗಿದೆ.
ಈ ಜಾಗವು ಬೊಮ್ಮಸಂದ್ರದ ಮಿತಿಯಲ್ಲಿ ಬರುವುದಿಲ್ಲ ಎಂದು ನಮಗೆ ತಿಳಿದಿದೆ. ಆದ್ದರಿಂದ, ಗುತ್ತಿಗೆದಾರರಿಗೆ ನಾವು ಬಿಲ್ ಹಣ ಪಾವತಿ ಮಾಡಿಲ್ಲ, ಅವರು ಈಗ ಹಣಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ ಎಂದರು.
Advertisement