ನಾಗಮಂಗಲ ಈಗ ಬೂದಿ ಮುಚ್ಚಿದ ಕೆಂಡ: 46 ಮಂದಿ ಬಂಧನ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸರ್ಕಾರ

ಪರಿಸ್ಥಿತಿ ಈಗ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ. ಸೆಕ್ಷನ್‌ 144 ಕೂಡ ಜಾರಿಯಲ್ಲಿದೆ. ಯಾವುದೇ ಆಸ್ತಿ ನಷ್ಟ, ಪ್ರಾಣಹಾನಿಯಾಗದಂತೆ ನೋಡಿಕೊಳ್ಳಿ. ಪರಿಸ್ಥಿತಿ ನಿಯಂತ್ರಣಕ್ಕೆ ಸೂಚನೆ ಕೊಟ್ಟಿದ್ದೇವೆ.
ನಾಗಮಂಗಲ ಗಣೇಶ ಮೆರವಣಿಗೆ.
ನಾಗಮಂಗಲ ಗಣೇಶ ಮೆರವಣಿಗೆ.
Updated on

ಮಂಡ್ಯ: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕೋಮುಗಲಭೆ ಉಂಟಾಗಿ, ನಲುಗಿ ಹೋಗಿರುವ ನಾಗಮಂಗಲದಲ್ಲಿ ಪ್ರಸ್ತುತದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪ್ರಕರಣ ಸಂಬಂಧ ಈ ವರೆಗೂ 46 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಚೆಲುವರಾಯಸ್ವಾಮಿಯವರು, ನಮ್ಮ ನಾಗಮಂಗಲ ಶಾಂತಿ, ಸೌಹಾರ್ದತೆಯ ನೆಲೆ. ಇಲ್ಲಿ ಅಶಾಂತಿ ಮೂಡಿಸುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ. ತಪ್ಪು ಮಾಡಿರುವವರ ವಿರುದ್ಧ ಕ್ರಮ ಆಗುತ್ತದೆ. ಸಾರ್ವಜನಿಕರು ಯಾವುದೇ ವದಂತಿ ಪ್ರೇರಣೆಗಳಿಗೆ ಕಿವಿಗೊಡದೆ ಶಾಂತಿ ಮರುಸ್ಥಾಪನೆಗೆ ಸಹಕರಿಸಬೇಕೆಂದು ಕೋರುತ್ತೇನೆ. ಘಟನೆ ತಿಳಿದ ತಕ್ಷಣವೇ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಮಾತನಾಡಿ, ವರದಿ ಪಡೆದಿದ್ದೇನೆ. ಎಲ್ಲಾ ತಪ್ಪಿತಸ್ಥರ ಬಂಧನಕ್ಕೆ ಸೂಚಿಸಿದ್ದು ಶಾಂತಿ‌ ಮರುಸ್ಥಾಪನೆಗೆ ಅಗತ್ಯವಿರುವ ತುರ್ತು ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.

ಪರಿಸ್ಥಿತಿ ಈಗ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ. ಸೆಕ್ಷನ್‌ 144 ಕೂಡ ಜಾರಿಯಲ್ಲಿದೆ. ಯಾವುದೇ ಆಸ್ತಿ ನಷ್ಟ, ಪ್ರಾಣಹಾನಿಯಾಗದಂತೆ ನೋಡಿಕೊಳ್ಳಿ. ಪರಿಸ್ಥಿತಿ ನಿಯಂತ್ರಣಕ್ಕೆ ಸೂಚನೆ ಕೊಟ್ಟಿದ್ದೇವೆ. ಆ ಕೆಲಸ ಆಗುತ್ತಿದೆ ಎಂದು ತಿಳಿಸಿದರು.

40 ವರ್ಷಗಳಿಂದ ನಾನು ಶಾಸಕನಾಗಿದ್ದೇನೆ. ಹಿಂದೆ ಬೇರೆ ಕಾರಣಕ್ಕೆ ಹಿಂದೂ-ಮುಸ್ಲಿಂ ಗಲಾಟೆ ಆಗಿತ್ತು. ಆದರೆ, ಈ ರೀತಿ ಘಟನೆ ಆಗಿರಲಿಲ್ಲ. ಬಹಳ ವರ್ಷಗಳಿಂದ ಹೀಗಾಗಿರಲಿಲ್ಲ. ದುರದೃಷ್ಟವಶಾತ್‌ ಈ ಘಟನೆ ಆಗಿದೆ. ಪ್ರಕರಣ ನಿಯಂತ್ರಣಕ್ಕೆ ತರುವ ಕೆಲಸ ಆಗುತ್ತಿದೆ. ಯಾವುದೇ ಅನಾಹುತ ಆಗದಂತೆ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಕ್ರಮವಹಿಸಲಿದೆ ಎಂದರು.

ಮಂಡ್ಯ ಎಸ್'ಪಿ ಮಲ್ಲಿಕಾರ್ಜುನ ಬಾಲದಂಡಿಯವರು ಮಾತನಾಡಿ, ಘಟನೆ ಸಂಬಂಧ ಈ ವರೆಗೂ 46 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದ್ದು, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹೆಚ್'ಡಿ.ಕುಮಾರಸ್ವಾಮಿಯವರು, ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಗಣಪತಿ ದೇವರ ಮೆರವಣಿಗೆಯಲ್ಲಿ ಶಾಂತಿಯುತವಾಗಿ ತೆರಳುತ್ತಿದ್ದ ಭಕ್ತರನ್ನು ಗುರಿ ಮಾಡಿ ಒಂದು ಸಮುದಾಯದ ಪುಂಡರು ಉದ್ದೇಶಪೂರ್ವಕವಾಗಿಯೇ ದಾಂಧಲೆ ಎಬ್ಬಿಸಿ ಸಾರ್ವಜನಿಕರು-ಪೊಲೀಸರ ಮೇಲೆ ಕಲ್ಲು, ಚಪ್ಪಲಿ ಎಸೆದು ಪೆಟ್ರೋಲ್ ಬಾಂಬ್ ಸ್ಫೋಟಿಸಿ ತಲ್ವಾರ್ ಝಳಪಿಸುವ ದುಸ್ಸಾಹಸಕ್ಕೆ ಕೈ ಹಾಕಿರುವುದು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ವೈಫಲ್ಯವಾಗಿರುವುದಕ್ಕೆ ಸಾಕ್ಷಿ.

ಪೊಲೀಸ್ ಠಾಣೆ ಎದುರು ರಕ್ಷಣೆ ಕೊಡಿ ಎಂದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆಯೇ ಆ ಕೋಮಿನ ಪುಂಡರು ದಬ್ಬಾಳಿಕೆ ನಡೆಸುತ್ತಾರೆ ಎಂದರೆ ನಾವು ಎಲ್ಲಿದ್ದೇವೆ ಎನ್ನುವ ಅನುಮಾನ ಬರುತ್ತದೆ. ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ.

ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರಕಾರ ರಾಜಕೀಯ ಸ್ವಾರ್ಥಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡಿದ ಫಲವಾಗಿ ನಾಗಮಂಗಲದಲ್ಲಿ ಈ ಹೇಯ ಘಟನೆ ನಡೆದಿದೆ. ಇಂತಹ ಓಲೈಕೆ, ತುಷ್ಟೀಕರಣ ರಾಜಕಾರಣ ನಿಲ್ಲಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ದಿನಗಳು ದೂರವಿಲ್ಲ. ಸಾರ್ವಜನಿಕರು ಶಾಂತಿ ಕಾಪಾಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ. ತಕ್ಷಣವೇ ಪಟ್ಟಣದಲ್ಲಿ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು. ಅಲ್ಲದೆ; ಈ ಪ್ರಕರಣ ನೆಪದಲ್ಲಿ ವಿರೋಧ ಪಕ್ಷಗಳ ಮುಖಂಡರು, ಕಾರ್ಯಕರ್ತರ ಮೇಲೆ ಪೊಲೀಸರು ದರ್ಪ ತೋರಿದರೆ ಸಹಿಸುವ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.

ನಾಗಮಂಗಲ ಗಣೇಶ ಮೆರವಣಿಗೆ.
Mandya: ನಾಗಮಂಗಲದಲ್ಲಿ ಪರಿಸ್ಥಿತಿ ಉದ್ವಿಗ್ನ; ಸೆ.14ರವರೆಗೆ ಸೆಕ್ಷನ್ 144 ಜಾರಿ, ಇಂದು ಶಾಲಾ-ಕಾಲೇಜಿಗೆ ರಜೆ!

ಏನಿದು ಪ್ರಕರಣ?

ನಾಗಮಂಗಲ ಪಟ್ಟಣದ ಬದರಿಕೊಪ್ಪಲಿನಲ್ಲಿ ಕಳೆದ 5 ದಿನಗಳ ಹಿಂದೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಬುಧವಾರ ಸಂಜೆ ಅದ್ಧೂರಿಯಾಗಿ ವಿಸರ್ಜನಾ ಮೆರವಣಿಗೆ ಹಮ್ಮಿಕೊಂಡಿದ್ದರು. ಪಟಾಕಿ ಸಿಡಿಸುತ್ತಾ, ಡೊಳ್ಳು, ತಮಟೆ, ಡಿಜೆ ಸೌಂಡ್‌ನೊಂದಿಗೆ ಹಿಂದೂಗಳು ಗಣೇಶನ ಮೂರ್ತಿ ವಿಸರ್ಜನೆಗೆ ಮೆರವಣಿಗೆ ಹೊರಟಿದ್ದರು.

ಬದರಿಕೊಪ್ಪಲಿನಿಂದ ಹೊರಟ ಗಣೇಶನ ವಿಸರ್ಜನಾ ಮೆರವಣಿಗೆ ಮಂಡ್ಯ ಸರ್ಕಲ್ ಮಾರ್ಗವಾಗಿ ತೆರಳಿತ್ತು. ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದ ರಸ್ತೆಯತ್ತ ಮೆರವಣಿಗೆ ಹೊರಟಿತ್ತು. ಆದರೆ, ನಾಗಮಂಗಲದ ಮಂಡ್ಯ ಸರ್ಕಲ್ ಬಳಿಯೇ ಕೆಲ ಅನ್ಯಕೋಮಿನ ಯುವಕರು ಮೆರವಣಿಗೆಗೆ ತಡೆಯೊಡ್ದಿದ್ದಾರೆ. ಮಸೀದಿ ಮುಂದೆ ಡಿಜೆ ಸೌಂಡ್, ತಮಟೆ, ಡೊಳ್ಳು ಬಾರಿಸದಂತೆ ಕ್ಯಾತೆ ತೆಗಿದ್ದಿದ್ದಾರೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ.

ಅನ್ಯಕೋಮಿನ ಯುವಕರ ಕ್ಯಾತೆಗೆ ಕೇರ್ ಮಾಡದ ಗಣೇಶನ ವಿಸರ್ಜನಾ ತಂಡ, ಮೈಸೂರು ರಸ್ತೆಯಲ್ಲಿರುವ ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದ ರಸ್ತೆಯಲ್ಲಿ ಮೆರವಣಿಗೆ ಹೊರಟಿದೆ. ಡಿಜೆ ಸೌಂಡ್ ಜತೆ ಡೊಳ್ಳು, ತಮಟೆ ಸದ್ದಿನೊಂದಿಗೆ ಪಟಾಕಿ ಸಿಡಿಸುತ್ತಾ ಸಂಭ್ರಮದಿಂದ ಹೆಜ್ಜೆ ಹಾಕಿದೆ. ಇನ್ನೇನು ಮಸೀದಿಯಿಂದ ಸ್ವಲ್ಪ ದೂರ ಇದೆ ಎನ್ನುವಾಗ ಅನ್ಯಕೋಮಿನ ಯುವಕರು ಏಕಾಏಕಿ ಗಣೇಶ ವಿಸರ್ಜನಾ ಮೆರವಣಿಗೆಯತ್ತ ಕಲ್ಲು ತೂರಾಟ ನಡೆಸಿದ್ದಾರೆ. ಕಟ್ಟಡದ ಮೇಲೆ ನಿಂತುಕೊಂಡು ಸಹ ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ.

ಯಾವಾಗ ಮೆರವಣಿಗೆಯತ್ತ ಅನ್ಯಕೋಮಿನವರು ಕಲ್ಲು ತೂರಾಟ ನಡೆಸಲು ಶುರುಮಾಡಿದರೋ, ಆಗ ಗಲಾಟೆ ಶುರುವಾಗಿದೆ. ಹಿಂದೂಗಳು ಮತ್ತು ಅನ್ಯಕೋಮಿನ ಯುವಕರ ನಡುವೆ ವಾಕ್ಸಮರ, ತಳ್ಳಾಟ ನೂಕಾಟ ನಡೆದಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದ್ದಾರೆ. ನಂತರ ಕಲ್ಲುತೂರಾಟ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಹಿಂದೂಗಳು ನಾಗಮಂಗಲ ಪೊಲೀಸ್ ಠಾಣೆ ಮುಂದೆಯೇ ಗಣೇಶನ ವಿಗ್ರಹವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ನಾಗಮಂಗಲ ಪೊಲೀಸ್ ಠಾಣೆ ಮುಂದೆ ಹಿಂದೂಗಳು ಪ್ರತಿಭಟನೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆದರೆ, ಇದಾದ ಸ್ವಲ್ಪಹೊತ್ತಿನಲ್ಲೇ, ಅಂದರೆ ರಾತ್ರಿ 10 ಗಂಟೆ ಸುಮಾರಿಗೆ ನಾಗಮಂಗಲದ ಮಂಡ್ಯ ಸರ್ಕಲ್‌ನಲ್ಲಿ ದುಷ್ಕೃತ್ಯವೇ ನಡೆದುಹೋಗಿದೆ. ಅನ್ಯಕೋಮಿನ ಯುವಕರ ಗುಂಪು ಸಿಕ್ಕಸಿಕ್ಕ ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಪೆಟ್ರೋಲ್ ಬಾಂಬ್‌ಗಳನ್ನು ತೂರಿದೆ. ಗುಜರಿ ಅಂಗಡಿಯೊಂದು ಧಗಧಗಿಸಿ ಉರಿಯಿತು. ಬೈಕ್ ಶೋರೂಂ ಒಂದನ್ನು ಧ್ವಂಸಗೊಳಿಸಲಾಯಿತು. ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದು ಹೊತ್ತಿ ಉರಿದಿವೆ. ಕೆಲ ಕಿಡಿಗೇಡಿಗಳು ರಸ್ತೆಯಲ್ಲೇ ಲಾಂಗು, ರಾಡ್‌, ತಲ್ವಾರ್‌ಗಳನ್ನು ಝಳಪಿಸುತ್ತಾ ಅಟ್ಟಹಾಸ ಪ್ರದರ್ಶಿಸಿದ್ದಾರೆ. ರಸ್ತೆಯಲ್ಲೇ ಬರುತ್ತಿದ್ದ ವಾಹನಗಳ ಮೇಲೆ ದಾಳಿ ಮಾಡಿದ್ದಾರೆ. ಬಳಿಕ ಪೊಲೀಸರು ಕಿಡಿಗೇಡಿಗಳಿಂದ ಲಾಂಗ್‌ ಸೇರಿ ಇತರೆ ಮಾರಕಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬೆಂಕಿ ಹಚ್ಚಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ಮಂಡ್ಯ ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸೆಪ್ಟೆಂಬರ್​ 14ರವರೆಗೆ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಹೇರಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com