Mangaluru: ಮನೆ ಕೆಡವುವ ವೇಳೆ ಗೋಡೆ ಕುಸಿತ; ಇಬ್ಬರ ಸಾವು, ಗುತ್ತಿಗೆದಾರನ ವಿರುದ್ಧ ಪ್ರಕರಣ!
ಮಂಗಳೂರು: ಮನೆ ಕೆಡುವವ ವೇಳೆ ಗೋಡೆ ಕುಸಿದು ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ.
ಮಂಗಳೂರಿನ ಕರಂಗಲ್ಪಾಡಿಯ ಸಿಜಿ ಕಾಮತ್ ರಸ್ತೆಯಲ್ಲಿ ಗುರುವಾರ ಹಳೆ ಮನೆ ಕೆಡವುವ ವೇಳೆ ಗೋಡೆ ಕುಸಿದು ಇಬ್ಬರು ಸಜೀವ ಸಮಾಧಿಯಾಗಿದ್ದಾರೆ. ಮಂಗಳೂರಿನ ಜೈಲ್ ರಸ್ತೆಯಲ್ಲಿ ಈ ದುರಂತ ಸಂಭವಿಸಿದ್ದು, ಹಳೆಯ ಮನೆಯನ್ನು ಕೆಡವುತ್ತಿದ್ದ ವೇಳೆ ನೋಡನೋಡುತ್ತಲೇ ಗೋಡೆ ಅಲ್ಲಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಬಿದ್ದಿದೆ.
ಈ ವೇಳೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತಪಟ್ಟವರನ್ನು ಜೇಮ್ಸ್ ಜತ್ತನ್ನ ಮತ್ತು ಅಡ್ವಿನ್ ಜೆರಾಲ್ಡ್ ಮೊಬಿನ್ ಎಂದು ಗುರುತಿಸಲಾಗಿದೆ. ದುರಂತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಿರ್ಲಕ್ಷ್ಯದ ಆರೋಪದ ಮೇಲೆ ಗುತ್ತಿಗೆದಾರರ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ ಜೇಮ್ಸ್ ಜತ್ತನ್ನ ಪೂರ್ವಜರ ಮನೆ ಇದಾಗಿದ್ದು, ಪಾಲಿನಲ್ಲಿ ಅವರಿಗೆ ಈ ಮನೆ ಸಿಕ್ಕಿತ್ತು. ಮನೆಗೆ ತಾಗಿಕೊಂಡಂತೆ ಅಡ್ವಿನ್ ಅವರ ಮನೆ ಕೂಡ ಇದೆ. ಜೇಮ್ಸ್ ಅವರು ತನ್ನ ಹಳೆ ಮನೆಯನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಮನೆ ಕಟ್ಟಲು ಉದ್ದೇಶಿಸಿದ್ದು, ಅದರಂತೆ ಜೆಸಿಬಿ ಮೂಲಕ ಮನೆ ಕೆಡಹುವ ಕಾರ್ಯ ಬುಧವಾರ ಆರಂಭವಾಗಿತ್ತು. ಗುರುವಾರ ಬೆಳಗ್ಗೆ ಮತ್ತೆ ಕೆಲಸ ಆರಂಭವಾಗಿದ್ದು, ಈ ವೇಳೆ ಜೇಮ್ಸ್ ಸ್ಥಳದಲ್ಲೇ ಇದ್ದು ಉಸ್ತುವಾರಿ ನೋಡಿಕೊಂಡಿದ್ದರು.
ಈ ಮನೆಗೆ ತಾಗಿಕೊಂಡೇ ಅಡ್ವಿನ್ ಮನೆ ಇರುವುದರಿಂದ ಕೆಡಹುವ ಸಮಯದಲ್ಲಿ ಅಡ್ವಿನ್, ತಮ್ಮ ಮನೆಗೆ ಹಾನಿಯಾಗಿದೆಯೇ ಎಂಬುದನ್ನು ನೋಡಲು ಜೇಮ್ಸ್ ಮನೆ ಕಂಪೌಂಡಿಗೆ ಬಂದಿದ್ದರು. ಈ ಸಂದರ್ಭ ಜೇಮ್ಸ್ ಅವರು ಪಕ್ಕದ ಇನ್ನೊಂದು ಮನೆಯ ಜಗುಲಿಯಲ್ಲಿದ್ದು, ಅಡ್ವಿನ್ ಕರೆದರೆಂದು ಅಲ್ಲಿಗೆ ತೆರಳಿ ಮಾತುಕತೆ ನಡೆಸುತ್ತಿದ್ದಾಗ ಹಠಾತ್ತನೆ ಕೆಡಹುತ್ತಿದ್ದ ಮನೆಯ ಗೋಡೆ ಸಮೇತ ಬೃಹತ್ ಕಾಂಕ್ರೀಟ್ ಲಿಂಟಲ್ ಇಬ್ಬರ ಮೇಲೂ ಉರುಳಿಬಿತ್ತು. ಭಾರೀ ಗಾತ್ರದ ಲಿಂಟಲ್ ಆಗಿದ್ದರಿಂದ ಇಬ್ಬರೂ ಅದರಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮನೆ ಕಟ್ಟಲು ಬಹರೇನ್‌ನಿಂದ ಬಂದಿದ್ದ ಜೇಮ್ಸ್ ದಂಪತಿ
ಇನ್ನು ಜೇಮ್ಸ್ ತಮ್ಮ ಪತ್ನಿ ಮತ್ತು ಪುತ್ರಿಯೊಂದಿಗೆ ವಾಸವಾಗಿದ್ದರು. ಪೂರ್ವಜರ ಕಾಲದ ಮನೆ ತೀರ ಹಳೆಯದಾಗಿ ಶಿಥಿಲವಾಗಿದ್ದರಿಂದ ನಗರದ ಜ್ಯೋತಿಯಲ್ಲಿ ಫ್ಲಾಟ್‌ನಲ್ಲಿ ವಾಸವಾಗಿದ್ದರು. ಪತ್ನಿ, ಪುತ್ರಿ ಫ್ಲಾಟ್‌ನಲ್ಲಿದ್ದರೆ, ಜೇಮ್ಸ್ ಬಹರೇನ್‌ನಲ್ಲಿ ಉದ್ಯೋಗದಲ್ಲಿದ್ದರು. ಹಳೆ ಮನೆ ಕೆಡವಿ ಹೊಸ ಮನೆ ಕಟ್ಟಲೆಂದೇ ಅವರು ರಜೆ ಹಾಕಿ ಊರಿಗೆ ಮರಳಿದ್ದರು. ಆದರೆ ಅದೇ ಮನೆ ಆವರಣದಲ್ಲಿ ನಡೆದ ದುರಂತದಲ್ಲಿ ಜೇಮ್ಸ್ ಸಾವನ್ನಪ್ಪಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ