
ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಹಾಗೂ ಮೆಟ್ರೋ ರೈಲು ನಿಲ್ದಾಣದಲ್ಲಿ ಕೆಲವು ಕಿಡಿಗೇಡಿಗಳಿಂದ ಪದೇ ಪದೇ ಏನಾದರೊಂದು ಸಮಸ್ಯೆ ಉದ್ಭವಿಸುತ್ತಿರುತ್ತದೆ. ಮಂಗಳವಾರ ಇದೇ ರೀತಿ ಎರಡು ಘಟನೆಗಳು ನಡೆದು ಕೆಲ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು.
ಮೊದಲನೆ ಘಟನೆಯಲ್ಲಿ, ಯುವಕನೊಬ್ಬ ಎಂಜಿ ರೋಡ್ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ತುರ್ತು ಗುಂಡಿಯನ್ನು ಒತ್ತಿದ್ದಾನೆ, ಪರ್ಪಲ್ ಲೈನ್‌ನ ಈ ಸ್ಟ್ರೆಚ್‌ನಲ್ಲಿ ಸುಮಾರು 7 ನಿಮಿಷಗಳ ಕಾಲ ರೈಲು ಸಂತಾರ ಸ್ಥಗಿತಗೊಂಡಿತ್ತು.
21 ವರ್ಷದ ಆರ್ ಹೇಮಂತ್ ಕುಮಾರ್ ಎಂಬಾತನ ವಿರುದ್ಧ ಮೆಟ್ರೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ನಿಲ್ದಾಣದ ನಿಯಂತ್ರಕರು ಆತನಿಗೆ 5,000 ರೂ. ದಂಡ ವಿಧಿಸಿದ್ದಾರೆ. ಈತ ಮಾಡಿದ ತಪ್ಪಿಗೆ ಪೋಷಕರು ದಂಡ ತೆತ್ತಿದ್ದಾರೆ. ಕುಮಾರ್ ಠಾಣೆಗೆ ಧಾವಿಸಿ ದಂಡವನ್ನು ಪಾವತಿಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಮಂಗಳವಾರ ಎಂಜಿ ರಸ್ತೆಯಲ್ಲಿರುವ ಪ್ಲಾಟ್‌ಫಾರ್ಮ್ 2ರಲ್ಲಿ ಸಂಜೆ 4.36ಕ್ಕೆ ಕುಮಾರ್ ತುರ್ತು ಟ್ರಿಪ್ ಸಿಸ್ಟಮ್ (ಇಟಿಎಸ್) ಬಟನ್ ಒತ್ತಿದ್ದಾನೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಮೂಲಗಳು ತಿಳಿಸಿವೆ.ಪ್ಯಾನಿಕ್ ಬಟನ್ ಒತ್ತಲು ಸಣ್ಣ ಗಾಜಿನ ಕಿಟಕಿಯನ್ನು ಮುರಿಯಬೇಕಾಗಿತ್ತು, ಗಾಜಿನ ಕಿಟಕಿಯನ್ನು ಮುರಿದು ಆತ ಬಟನ್ ಒತ್ತಿದ್ದ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಬೈಯಪ್ಪನಹಳ್ಳಿಯಲ್ಲಿರುವ ಕಾರ್ಯಾಚರಣೆ ನಿಯಂತ್ರಣ ಕೇಂದ್ರಕ್ಕೆ ತಕ್ಷಣ ಎಚ್ಚರಿಕೆ ನೀಡಿದರು ಹೀಗಾಗಿ ಹತ್ತಿರದ ನಿಲ್ದಾಣಗಳಲ್ಲಿ ರೈಲುಗಳನ್ನು ತಕ್ಷಣವೇ ನಿಲ್ಲಿಸಲಾಯಿತು.
ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇದು ಅಜಾಗರೂಕ ಕೃತ್ಯ ಎಂದು ಅವರಿಗೆ ಅರ್ಥವಯಿತು. ಅಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಎರಡು ಬಾರಿ ಪರಿಶೀಲಿಸಿದ ನಂತರ, ರೈಲು ಕಾರ್ಯಾಚರಣೆಗೆ ಅವಕಾಶ ನೀಡಲಾಯಿತು. ರೈಲು ಚಲಿಸಲು ಪ್ರಾರಂಭಿಸಿದಾಗ ಕುಮಾರ್ ಕೂಡ ರೈಲು ಹತ್ತಿದ್ದಾನೆ. ಭದ್ರತಾ ಸಿಬ್ಬಂದಿ ಮತ್ತು ಮೆಟ್ರೋ ಸಿಬ್ಬಂದಿ ಕೂಡ ರೈಲು ಹೊರಡುವ ಮೊದಲು ಹತ್ತಿದರು. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ತಲುಪಿದ ಬಳಿಕ ಸಿಬ್ಬಂದಿ ಆತನನ್ನು ಹಿಡಿದು ಕೆಳಗಿಳಿಸಿದರು. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ರಾತ್ರಿ ಸಂಭವಿಸಿದ ಎರಡನೇ ಘಟನೆಯಲ್ಲಿ, 23 ವರ್ಷದ ಪುಟ್ಟಣ್ಣ ಎಂಬ ವ್ಯಕ್ತಿ ರೈಲಿನಿಂದ ಇಳಿದ ನಂತರ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಸ್ವಯಂಚಾಲಿತ ಶುಲ್ಕ ಸಂಗ್ರಹ (ಎಎಫ್‌ಸಿ) ಗೇಟ್‌ನಲ್ಲಿ ಗಾಜಿನ ಬ್ಯಾರಿಕೇಡ್ ಜಂಪ್ ಮಾಡಿದ್ದಾರೆ. ಆತನ ಜೇಬಿನಲ್ಲಿ ಪ್ರಯಾಣದ ಟೋಕನ್ ಇದ್ದರೂ ಪುಟ್ಟಣ್ಣ ತಮಾಷೆಗಾಗಿ ಬ್ಯಾರಿಕೇಡ್ ಜಂಪ್ ಮಾಡಿದ್ದ ಎಂದು ತಿಳಿದು ಬಂದಿದೆ. ರಾತ್ರಿ 9.05ಕ್ಕೆ ಈ ಘಟನೆ ನಡೆದಿದ್ದು ಭದ್ರತಾ ಸಿಬ್ಬಂದಿ ಆತನನ್ನು ಠಾಣೆಯ ನಿಯಂತ್ರಕರಿಗೆ ಒಪ್ಪಿಸಿದ್ದಾರೆ. 250 ರೂಪಾಯಿ ದಂಡ ವಿಧಿಸಿ ಹೋಗಲು ಅನುಮತಿ ನೀಡಲಾಯಿತು. ಮೆಟ್ರೋ ಕಾಯಿದೆಯ ಸೆಕ್ಷನ್ 64 (ಕಾನೂನುಬಾಹಿರ ನಿರ್ಗಮನ) ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Advertisement