ಸಚಿವ ಈಶ್ವರ್ ಖಂಡ್ರೆ
ಸಚಿವ ಈಶ್ವರ್ ಖಂಡ್ರೆ

ತಿಪ್ಪಗೊಂಡನಹಳ್ಳಿ ಜಲಾಶಯದ ನೀರನ್ನು ಕೈಗಾರಿಕೆ ಬಳಕೆಗೆ ನೀಡಿ: ಸಿಎಂಗೆ ಸಚಿವ ಈಶ್ವರ್ ಖಂಡ್ರೆ ಪತ್ರ

ಬೆಂಗಳೂರಿನ ಬಹುಮಹಡಿ ಕಟ್ಟಡಗಳಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕಟ್ಟಡ ನಿರ್ಮಾಣಕ್ಕೆ ಮಾರಾಟ ಮಾಡುವ ಪರಿಸರ ಇಲಾಖೆಯ ಪ್ರಸ್ತಾವನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ ತರುವಾಯ ನೀತಿ ರೂಪಿಸಲಾಗುತ್ತಿದೆ.
Published on

ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯದ ನೀರನ್ನು ಕಟ್ಟಡ ನಿರ್ಮಾಣ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ನೀಡುವಂತೆ ಸಚಿವ ಈಶ್ವರ್ ಬಿ ಖಂಡ್ರೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪ್ರಸ್ತುತ ತ್ಯಾಜ್ಯ ನೀರು ಸೇರ್ಪಡೆಯಾಗಿ ಕಲುಷಿತವಾಗಿರುವ ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಬೆಂಗಳೂರಿನ ವಿವಿಧ ಕೆರೆಗಳ ಬಳಿ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ, ನೀರು ಶುದ್ಧೀಕರಿಸಿ ಕಟ್ಟಡ ನಿರ್ಮಾಣ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ನೀರು ಪೂರೈಕೆ ಮಾಡಿದಲ್ಲಿ ಅದರಿಂದ ಸರಕಾರಕ್ಕೂ ಆದಾಯ ಬರುತ್ತದೆ, ಜೊತೆಗೆ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸುವುದೂ ತಗ್ಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಬಹುಮಹಡಿ ಕಟ್ಟಡಗಳಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕಟ್ಟಡ ನಿರ್ಮಾಣಕ್ಕೆ ಮಾರಾಟ ಮಾಡುವ ಪರಿಸರ ಇಲಾಖೆಯ ಪ್ರಸ್ತಾವನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ ತರುವಾಯ ನೀತಿ ರೂಪಿಸಲಾಗಿದ್ದು, ಈ ನಿರ್ಧಾರಕ್ಕೆ ಉಪ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ರಿಯಲ್ ಎಸ್ಟೇಟ್ ಸಂಸ್ಥೆಗಳ ಸಭೆಯಲ್ಲಿ ಮೆಚ್ಚುಗೆಯೂ ವ್ಯಕ್ತವಾಗಿದೆ.

ಸಚಿವ ಈಶ್ವರ್ ಖಂಡ್ರೆ
ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿಯ ಸಂಪೂರ್ಣ ಅನುಷ್ಠಾನ ಅಸಾಧ್ಯ: ಈಶ್ವರ್ ಖಂಡ್ರೆ

ತ್ಯಾಜ್ಯ ನೀರು ಸಂಸ್ಕರಿಸಿ ಮಾರಾಟ ಮಾಡುತ್ತಿರುವುದರಿಂದ ಬಹುಮಹಡಿ ಕಟ್ಟಡಗಳಿಗೆ ಆದಾಯವೂ ಬರುತ್ತಿದೆ ಜೊತೆಗೆ ಕಟ್ಟಡ ನಿರ್ಮಾಣದಾರರಿಗೆ ನೀರೂ ಲಭ್ಯವಾಗುತ್ತಿದೆ. ತ್ಯಾಜ್ಯ ನೀರು ಕೆರೆ, ನದಿ ಸೇರುವುದೂ ತಪ್ಪುತ್ತದೆ ಜೊತೆಗೆ ಅಂತರ್ಜಲ ಮಟ್ಟ ಕಾಯ್ದುಕೊಳ್ಳಲೂ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.

ಪ್ರಕೃತಿ, ಪರಿಸರ ಉಳಿಸುವ ದೃಷ್ಟಿಯಿಂದ ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಇತರ ಕೆರೆಗಳ ನೀರನ್ನು ಶುದ್ಧೀಕರಿಸಿ ಕೈಗಾರಿಕೆ, ನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲು ಪರಿಸರ, ಜಲ ಸಂಪನ್ಮೂಲ, ಸಣ್ಣ ನೀರಾವರಿ ಸಚಿವರ ಸಭೆ ಕರೆದು ಸಮಾಲೋಚಿಸಲು ಮುಖ್ಯಮಂತ್ರಿಯನ್ನು ಕೋರಿದ್ದಾರೆ.

ಈ ನಡುವೆ ಸಚಿವರ ಈ ನಡೆಯನ್ನು ತಜ್ಞರು ಟೀಕಿಸಿದ್ದಾರೆ. ಕೈಗಾರಿಕೆಗಳಿಗೆ ಸಂಸ್ಕರಿಸಿದ ನೀರು ಪೂರೈುವುದರಿಂದ ನಗರದ ಕುಡಿಯುವ ನೀರಿನ ಸಮಸ್ಯೆ ನೀಗುವುದಿಲ್ಲ. ಪ್ರಾಥಮಿಕ ಸಂಸ್ಕರಿಸಿದ ನೀರನ್ನು ಕೈಗಾರಿಕೆಗಳು ಮತ್ತು ನಿರ್ಮಾಣ ಕಾರ್ಯಗಳಿಗೆ ಬಳಸಬೇಕೇ ಹೊರತು ಜಲಾಶಯಗಳ ನೀರಿನ್ನಲ್ಲ. ಟಿ.ಜಿ.ಹಳ್ಳಿ ಜಲಾಶಯದ ನೀರನ್ನು ಸರ್ಕಾರ ತನ್ನ ನಿಗದಿತ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com