ಮಂಗಳೂರು: ಧಾರ್ಮಿಕ ಸ್ಥಳಗಳ ಮೇಲೆ ಕಲ್ಲು ತೂರಾಟ; ಪರಿಸ್ಥಿತಿ ಉದ್ವಿಗ್ನ, 46 ಮಂದಿ ಬಂಧನ

ಮಂಗಳೂರು ತಾಲೂಕಿನ ಕಾಟಿಪಳ್ಳ ಪೇಟೆಯಲ್ಲಿ ನಿನ್ನೆ ಭಾನುವಾರ ತಡರಾತ್ರಿ ಕಲ್ಲು ತೂರಾಟ ನಡೆಯಿತು. ಪೊಲೀಸರ ಕ್ಷಿಪ್ರ ಕ್ರಮದಿಂದಾಗಿ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದ ವರದಿಯಾಗಿಲ್ಲ.
ಮಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಮಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
Updated on

ಮಂಗಳೂರು: ಮುಸಲ್ಮಾನರ ಪವಿತ್ರ ಹಬ್ಬ ಈದ್ ಮಿಲಾದ್ ಮುನ್ನಾದಿನ ಕರಾವಳಿಯ ಮಂಗಳೂರಿನ ಎರಡು ಧಾರ್ಮಿಕ ಸ್ಥಳಗಳ ಮೇಲೆ ಕಲ್ಲು ತೂರಾಟ ಮತ್ತು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ದಕ್ಷಿಣ ಕನ್ನಡ ಜಿಲ್ಲೆಯ ಕಾಟಿಪಳ್ಳ ಪಟ್ಟಣ ಮತ್ತು ಬಿ.ಸಿ.ರೋಡ್‌ನಲ್ಲಿ ಇಂದು ಸೋಮವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಮಂಗಳೂರು ತಾಲೂಕಿನ ಕಾಟಿಪಳ್ಳ ಪೇಟೆಯಲ್ಲಿ ನಿನ್ನೆ ಭಾನುವಾರ ತಡರಾತ್ರಿ ಕಲ್ಲು ತೂರಾಟ ನಡೆಯಿತು. ಪೊಲೀಸರ ಕ್ಷಿಪ್ರ ಕ್ರಮದಿಂದಾಗಿ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದ ವರದಿಯಾಗಿಲ್ಲ. ಧಾರ್ಮಿಕ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕಿಟಕಿ ಗಾಜುಗಳು ಒಡೆದು ಹೋಗಿವೆ.

ಕಲ್ಲು ತೂರಾಟಗಾರರು ನಿನ್ನೆ ರಾತ್ರಿ ಎರಡು ಬೈಕ್‌ಗಳಲ್ಲಿ ಬಂದು ವೇಗವಾಗಿ ಹೋಗಿದ್ದು, ಘಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಎರಡು ಗುಂಪುಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಹೇಳಿಕೆಗಳು ನಡೆದು ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಪೇಟೆಯ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ.

ಇದರ ಬೆನ್ನಲ್ಲೇ ಬಂಟ್ವಾಳದ ಪೂರ್ವ ಭಾಗದ ಉಪ್ಪಿನಂಗಡಿ ಮತ್ತು ಪಶ್ಚಿಮ ಭಾಗದಲ್ಲಿ ಪಾಣೆಮಂಗಳೂರು ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ವಿಹೆಚ್ ಪಿ ಮತ್ತು ಬಜರಂಗದಳ ಮುಖಂಡರಾದ ಶರಣ್ ಪಂಪ್‌ವೆಲ್ ಮತ್ತು ಪುನೀತ್ ಅತ್ತಾವರ್ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ಇಟ್ಟಿರುವ ಮಂಗಳೂರು ಪೊಲೀಸರು ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಕಳೆದ ವಾರ ಮಂಡ್ಯ ಜಿಲ್ಲೆಯಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರದ ನಂತರ ಈ ಘಟನೆಗಳು ನಡೆದಿವೆ.

ಬದರಿಕೊಪ್ಪಲು ಗ್ರಾಮದಿಂದ ಭಕ್ತರು ಗಣೇಶ ಮೂರ್ತಿ ಮೆರವಣಿಗೆ ಪೂಜಾ ಸ್ಥಳಕ್ಕೆ ತಲುಪಿದಾಗ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು, ಇದು ಪರಿಸ್ಥಿತಿ ವಿಕೋಪಕ್ಕೆ ಕಾರಣವಾಯಿತು. ಎರಡು ಗುಂಪುಗಳ ನಡುವಿನ ಘರ್ಷಣೆಯ ನಂತರ, ಕೆಲವು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಪನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಂಡಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದಂತೆ 46 ಜನರನ್ನು ಇದುವರೆಗೆ ಬಂಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com