
ಬೆಂಗಳೂರು: ಮಾಲಿವುಡ್‌ನಲ್ಲಿ ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ಚಿತ್ರರಂಗ ಅಲ್ಲೋಲ ಕಲ್ಲೋಲ ಆಗಿದೆ. ಹೇಮಾ ಕಮಿಟಿಯಂತೆ ಮಹಿಳೆಯರ ಸುರಕ್ಷತೆಗಾಗಿ ಸ್ಯಾಂಡಲ್‌ವುಡ್‌ನಲ್ಲಿಯೂ ಸಮಿತಿ ರಚಿಸುವ ಪ್ರಸ್ತಾಪಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ವಿರೋಧ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗವನ್ನು ನಡುಗಿಸಿದೆ. ಮಾಲಿವುಡ್ನ ಕರಾಳ ಮುಖವನ್ನು ಈ ವರದಿ ಬಲಿಗೆಳೆದಿದ್ದು, ಆರೋಪ ಪ್ರತ್ಯಾರೋಪಗಳು ಮುಂದುವರಿದಿದೆ. ಇದರ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲೂ ಸಮಿತಿ ರಚನೆ ಆಗಬೇಕೆಂಬ ಬೇಡಿಕೆಗಳು ಬಂದಿವೆ.
ಕಮಿಟಿ ರಚನೆಗೆ ಇತ್ತೀಚೆಗಷ್ಟೇ 'ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ' (ಫೈರ್) ನಿಯೋಗ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಸೋಮವಾರ ಈ ಬಗ್ಗೆ ಫಿಲ್ಮ್ ಚೇಂಬರ್ನಲ್ಲಿ ಮಹತ್ವದ ಸಭೆ ನಡೆದಿದ್ದು, ಮಂಡಳಿಯ ಹಲವು ಸದಸ್ಯರು ಸಮಿತಿ ರಚನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಸಭೆ ವೇಳೆ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಹಾಗೂ ಮಹಿಳಾ ಆಯೋಗದ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗಲಾಟೆ ಮಾಡುತ್ತಿದ್ದವರ ಮೇಲೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಗರಂ ಆಗಿದ್ದು, ಸಮಾಧಾನದಿಂದ ಇರುವಂತೆ ಎಷ್ಟೇ ಹೇಳಿದರು ಕೆಲ ನಿರ್ಮಾಪಕರು ಕೇಳದ ಹಿನ್ನೆಲೆಯಲ್ಲಿ ಸಭೆ ಮಧ್ಯೆ ಹೊರ ಹೋಗುತ್ತೇನೆಂದು ಎಚ್ಚರಿಕೆ ನೀಡಿದರು ಬಳಿಕ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮೀ ಅವರು ಸಭೆ ಆರಂಭಿಸಿದರು. ಬಳಿಕ ನಟಿ ತಾರಾ ಸಭೆಯಿಂದ ಎದ್ದು ಹೊರ ಹೋದರು.
ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರು, ಚಿತ್ರರಂಗ ಮಾತ್ರವಲ್ಲ, ಮಹಿಳೆಯರು ಕೆಲಸ ಮಾಡುವ ಯಾವುದೇ ಕ್ಷೇತ್ರದಲ್ಲಿ ಮಹಿಳೆಯರ ರಕ್ಷಣೆಗಾಗಿ ಒಂದು ಆಂತರಿಕ ಸಮಿತಿ ರಚಿಸಬೇಕೆಂದು ಸರ್ಕಾರವೇ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಕಡ್ಡಾಯವಾಗಿ ಪಾಶ್ ಕಮಿಟಿ ರಚನೆ ಮಾಡಬೇಕು. ಇದೂವರೆಗೂ ಯಾಕೆ ಸಮಿತಿ ಮಾಡಿಲ್ಲ ಎಂಬುದು ಗೊತ್ತಿಲ್ಲ. ಹೆಣ್ಣುಮಕ್ಕಳು ಚಿತ್ರರಂಕಕ್ಕೆ ಹೋಗುತ್ತೇವೆಂದಾಗ ಪೋಷಕರೇ ಧೈರ್ಯವಾಗಿ ಕಳುಹಿಸಿ ಕೊಡಬೇಕು. ಅಂತಹ ವಾತಾವರಣ ನಿರ್ಮಾಣಕ್ಕೆ ಆಂತರಿಕ ಸಮಿತಿ ರಚನೆ ಆಗಬೇಕೆಂದು ಹೇಳಿದರು.
ಆಯೋಗಕ್ಕೆ ಇದೂವರೆಗೂ ಯಾವೊಬ್ಬ ನಟಿಯರೂ ದೂರು ನೀಡಿಲ್ಲ. ಜನಪ್ರಿಯತೆ ಕಾರಣಕ್ಕೆ ನಟಿಯಲು ತಮ್ಮ ಮೇಲಾದ ದೌರ್ಜನ್ಯವನ್ನು ಮುಕ್ತವಾಗಿ ಹೇಳಿಕೊಳ್ಳುವುದಕ್ಕೆ ಆಗದೆ ಇರಬಹುದು. ಹೀಗಾಗಿ ಇಂತಹ ಆಂತರಿಕ ಸಮಿತಿಗಳನ್ನು ಮಾಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಫೈರ್ (FIRE - Film Industry for Rights and Equality)ನ ಅಧ್ಯಕ್ಷೆ ಕವಿತಾ ಲಂಕೇಶ್ ಅವರು ಮಾತನಾಡಿ, ಈ ಸಭೆಯ ನಿರ್ಧಾರದಿಂದ ಅಸಮಾಧಾನವಾಗಿದೆ. ನಮಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ. ಮಹಿಳೆಯರಿಗೆ ಸಿನಿಮಾ ರಂಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆದ್ರೆ ಆ ಕಾಲದಲ್ಲಿ ಯಾವ ನಟಿಯರೂ ತಮಗಾದ ಸಮಸ್ಯೆಯನ್ನ ಹೇಳಿಕೊಂಡಿರಲಿಲ್ಲ. ಈಗ ನಟಿಯರು ಮುಂದೆ ಬರುತ್ತಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು ಯಾರಿಗೂ ತಿಳಿಯದಂತೆ (ನಟಿಯರ ಹೆಸರು ಬಹಿರಂಗಪಡಿಸದೇ) ಸರ್ವೇ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದು ಒಳ್ಳೆಯ ವಿಚಾರ. ಆದರೆ, ಕೆಲ ನಿರ್ಮಾಪಕರು ಇಂದಿನ ಸಭೆಯಲ್ಲಿ ಯಾವುದೇ ರೀತಿಯ ಶೋಷಣೆ ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಕಮಿಟಿ ರಚನೆ ಆಗಲೇಬೇಕು. ಇಂದಿನ ಸಭೆಯಲ್ಲಿ ಸರಿಯಾಗಿ ಚರ್ಚೆ ಮಾಡಲು ಆಗಲಿಲ್ಲ. ಸಭೆಯಲ್ಲಿ ಕೆಲ ನಿರ್ಮಾಪಕರು ಮಹಿಳೆಯರಿಗೆ ಒಳ್ಳೆ ಸಂಭಾವನೆ ಹಾಗೂ ಸೂಕ್ತ ಸೌಲಭ್ಯ ನೀಡುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ, ಮಹಿಳೆಯರಿಗಾದ ಸಮಸ್ಯೆಗಳನ್ನು ನಿರ್ಮಾಪಕರ ಹತ್ತಿರ ಚರ್ಚೆ ಮಾಡೋದಕ್ಕೆ ಆಗುತ್ತಾ ಹೇಳಿ. ಅಲ್ಲದೇ, ಮಹಿಳೆಯರಿಲ್ಲದೇ ಸಿನಿಮಾ ಮಾಡುತ್ತೇನೆ ಅಂತಿದ್ದಾರೆ, ಇಲ್ಲೂ ಮಹಿಳೆಯರನ್ನು ಹತ್ತಿಕ್ಕುವ ಕೆಲಸ ಆಗುತ್ತಿದೆ. ಇದು ಸರಿಯಲ್ಲ. ಕಮಿಟಿ ಮಾಡುವುದರಿಂದ ಮುಂದೆ ಬರುವ ಎಲ್ಲಾ ನಟಿಯರಿಗೆ ಸುರಕ್ಷತೆ ಸಿಗುತ್ತದೆ. ಆದರೆ, ಕಮಿಟಿ ಬೇಡ ಎಂದರೆ ಹೇಗೆ? ಈಗಾಗಲೇ ಫೈರ್ ಕಮಿಟಿಯಿಂದ ದೂರು ನೀಡುವುದರ ಬಗ್ಗೆ ಹೆಲ್ಪ್ ಲೈನ್ ಮಾಡುತ್ತಿದ್ದೇವೆ. ನಮ್ಮ ಫೈರ್ ಕಮಿಟಿಗೆ ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ಇದು ಸರ್ಕಾರದಿಂದ ರಚನೆ ಆದಾಗ ಕಾನೂನು ರೀತಿಯಲ್ಲಿ ಹೋರಾಟ ಮಾಡುಬಹುದು ಎಂದು ತಿಳಿಸಿದರು.
ಫಿಲಂ ಚೇಂಬರ್ ಅಧ್ಯಕ್ಷ ಎನ್‌ಎಂ ಸುರೇಶ್ ಮಾತನಾಡಿ, ಹೇಮಾ ಸಮಿತಿಯಂತೆಯೇ ಕನ್ನಡ ಚಲನಚಿತ್ರೋದ್ಯಮದಲ್ಲಿ ಪೋಷ್ ಸಮಿತಿ ರಚಿಸಲು ಕೆಎಫ್‌ಸಿಸಿ ಮಾರ್ಗಗಳನ್ನು ಅನ್ವೇಷಿಸುತ್ತದೆ. ಉದ್ಯಮದಲ್ಲಿನ ಲೈಂಗಿಕ ಮತ್ತು ಇತರ ರೀತಿಯ ಶೋಷಣೆಗಳನ್ನು ಪರಿಹರಿಸಲು ಮಹಿಳಾ ಆಯೋಗವು ಪ್ರಸ್ತುತಪಡಿಸಿದ 17 ಅಂಶಗಳ ಕಾರ್ಯಸೂಚಿಯನ್ನು ಪರಿಶೀಲಿಸುತ್ತೇವೆಂದು ಹೇಳಿದರು.
ಸಾರಾ ಗೋವಿಂದು ಅವರು ಮಾತನಾಡಿ, ಕೇರಳ ರೀತಿ ಕನ್ನಡ ಚಿತ್ರರಂಗದಲ್ಲಿ ಸಮಿತಿಯ ಅಗತ್ಯವಿಲ್ಲ. ರಾಜ್ಯ ಮಹಿಳಾ ಆಯೋಗ ಇದೆ. ಯಾವುದೇ ರೀತಿಯ ಸಮಸ್ಯೆಗಳಾದರೆ ಕೂಡಲೇ ನಟಿಯರು ದೂರು ನೀಡಬಹುದು. ವಾಣಿಜ್ಯ ಮಂಡಳಿಗೂ ದೂರು ನೀಡಬಹುದು. ಕೇರಳದಂತೆ ಇಲ್ಲೂ ಸಮಿತಿ ಮಾಡಿದರೆ ಚಿತ್ರರಂಗ ತೊಂದರೆಗೆ ತುತ್ತಾಗಲಿದೆ ಎಂದು ಹೇಳಿದರು.
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡಿ, ಪರ-ವಿರೋಧಕ್ಕೆ ಕಾರಣವೇ ಇಲ್ಲ. ಇದು ಸರ್ಕಾರದ ನಿಯಮ. ನಾವು ಅದನ್ನು ಗೌರವಿಸಬೇಕು ಹಾಗೂ ಪಾಲಿಸಬೇಕು. ಹೇಮಾ ಸಮಿತಿಯ ವರದಿ ಕೆಲ ಒಡಕುಗಳನ್ನು ಮೂಡಿಸಿದೆ. ಆದರೆ, ಇಂತಹ ಚರ್ಚೆಗಳು ಸಾಮಾನ್ಯ. ನಮಗೂ ಕಾಳಜಿಯಿದೆ. ಆದರೆ, ಈ ರೀತಿಯ ಸಮಿತಿ ರಚನೆ ಮಾಡುವುದರಿಂದ ಚಿತ್ರರಂಗದಲ್ಲಿ ವ್ಯಾಪಾರ ಮತ್ತು ವ್ಯವಹಾರಗಳಿಗೆ ತೊಂದರೆಯಾಗಲಿದೆ. ವ್ಯಾವಹಾರಿಕ ಸಮಸ್ಯೆಗಳ ಕಾರಣಕ್ಕಾಗಿ ನಾವು ಈ ರೀತಿಯ ಸಮಿತಿಯ ರಚನೆ ಬೇಡ ಎನ್ನುತ್ತಿದ್ದೇವೆಯೇ ಹೊರತು, ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿದ್ದರೆ ಅವರು ಆಚೆ ಬರುತ್ತವೆ ಎನ್ನುವ ಉದ್ದೇಶದಿಂದಲ್ಲ ಎಂದರು.
Advertisement