ಬೆಂಗಳೂರು: ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮಹಿಳೆ, ಮಗು ಸೇರಿ ನಾಲ್ವರು ಗಾಯಗೊಂಡು, 12 ಮನೆಗಳಿಗೆ ಹಾನಿಯಾಗಿರುವ ಘಟನೆ ಹಳೇ ಬೈಯಪ್ಪನಹಳ್ಳಿ ರಸ್ತೆಯ ಸಂಜಯ್ ಗಾಂಧಿ ನಗರದ 2ನೇ ಕ್ರಾಸ್‌ನಲ್ಲಿ ಸೋಮವಾರ ನಡೆದಿದೆ.
ಘಟನೆಯಲ್ಲಿ ಅಣ್ಣಾದೊರೈ (40) ಬಿಂದರ್ಶ್ (40), ಅವರ ಪತ್ನಿ ರೇಖಾ (30) ಮತ್ತು 10 ವರ್ಷದ ಮಗುವಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿಲ್ಲ.
ಅಣ್ಣಾದೊರೈ ಅವರ ಮನೆಯಲ್ಲಿ ಬೆಳಗ್ಗೆ 6.50ಕ್ಕೆ ಸ್ಫೋಟ ಸಂಭವಿಸಿದ್ದು, ಅವರಿಗೆ ಮತ್ತು ಅವರ ನೆರೆಯ ಮನೆಯವರಿಗೆ ಗಾಯಗಳಾಗಿವೆ.
ಸ್ಫೋಟದಿಂದ ಅಕ್ಕಪಕ್ಕದ ನಾಲ್ಕು ಮನೆಗಳಿಗೂ ತೀವ್ರ ಹಾನಿಯಾಗಿದ್ದು, ಎಂಟು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮನೆಯೊಳಗಿನ ವಸ್ತುಗಳು ಮತ್ತು ನಿಲ್ಲಿಸಿದ್ದ ವಾಹನಕ್ಕೂ ಹಾನಿಯಾಗಿದೆ. ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಘಟನೆ ನಂತರ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ಮತ್ತು ತುರ್ತು ಸೇವೆಗಳಿಗೆ ಮಾಹಿತಿ ನೀಡಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಬೆಂಕಿ ನಂದಿಸಿದರು.
ಘಟನೆ ಬಳಿಕ ಬೈಯಪ್ಪನಹಳ್ಳಿ ಪೊಲೀಸರು ಅಣ್ಣಾದೊರೈ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
Advertisement