ಬೆಂಗಳೂರು: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೌಖಿಕ ಸೂಚನೆ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಶ್ರೀರಂಗಪಟ್ಟಣ, ವರುಣಾ ಕ್ಷೇತ್ರದಲ್ಲಿ 387 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಕೈಗೊಂಡಿರುವ ಕುರಿತಂತೆ ವಿಸ್ತೃತ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚಿಸಿದ್ದಾರೆ.
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ಮೂಲದ ಪಿಎಸ್ ನಟರಾಜ್ ಎಂಬವರು ಆಗಸ್ಟ್ 27ರಂದು ರಾಜ್ಯಪಾಲರಿಗೆ ದೂರು ನೀಡಿದ್ದು ಸೆಕ್ಷನ್ 15 ಮತ್ತು 25 ಉಲ್ಲಂಘಿಸಿ ಮುಡಾ 387 ಕೋಟಿ ರೂ.ಗಳ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಪ್ರಾಧಿಕಾರದಲ್ಲಿ ಹಣ ಇಲ್ಲದಿದ್ದರೂ ಮುಖ್ಯಮಂತ್ರಿಗಳ ಮೌಖಿಕ ಸೂಚನೆ ಮೇರೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಪ್ರಾಧಿಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು. ಹೀಗಾಗಿ ಸಿಬಿಐ ತನಿಖೆಗೆ ಸೂಚಿಸುವಂತೆ ಪತ್ರದಲ್ಲಿ ಬರೆದಿದ್ದಾರೆ.
ಈ ಆರೋಪವು ಗಂಭೀರ ಸ್ವರೂಪದ್ದಾಗಿದ್ದು ಈ ವಿಷಯವನ್ನು ಪರಿಶೀಲಿಸಲು ಮತ್ತು ವಿವರವಾದ ವರದಿಯನ್ನು ದಾಖಲೆಗಳೊಂದಿಗೆ ಶೀಘ್ರವಾಗಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರ್ದೇಶಿಸಿದ್ದಾರೆ.
ಇನ್ನು ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧದ ತನಿಖೆಗೆ ರಾಜ್ಯಪಾಲ ಗೆಹ್ಲೋಟ್‌ರ ಅನುಮತಿಯನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೆ.12ರಂದು ಹೈಕೋರ್ಟ್ ಪೂರ್ಣಗೊಳಿಸಿ, ಆದೇಶಗಳನ್ನು ಕಾಯ್ದಿರಿಸಿದೆ. ಆಗಸ್ಟ್ 19ರಂದು ರಾಜ್ಯಪಾಲರ ಆದೇಶದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರಿಗೆ ಮುಡಾ ಸ್ವಾಧೀನಪಡಿಸಿಕೊಂಡಿರುವ ನಿವೇಶನಕ್ಕಿಂತ ಹೆಚ್ಚಿನ ಆಸ್ತಿ ಮೌಲ್ಯದ ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮುಡಾ ಪಾರ್ವತಿ ಅವರಿಗೆ 50:50 ಅನುಪಾತದ ಯೋಜನೆಯಡಿ ಅವರ 3.16 ಎಕರೆ ಜಮೀನಿಗೆ ಬದಲಾಗಿ 14 ನಿವೇಶನಗಳನ್ನು ಮಂಜೂರು ಮಾಡಿತ್ತು.
Advertisement