ಮೈಸೂರು: ನಾಗರಹೊಳೆ ಉದ್ಯಾನದಲ್ಲಿ ಹುಲಿಗಳ ಕಾದಾಟದಲ್ಲಿ ತೀವ್ರ ಗಾಯಗೊಂಡಿದ್ದ ಸುಮಾರು 11 ವರ್ಷದ ಮೂಗ ಎಂಬ ಗಂಡು ಹುಲಿಯನ್ನು ರಕ್ಷಿಸಿ, ಸೂಕ್ತ ಚಿಕಿತ್ಸೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ.
ನಾಗರಹೊಳೆ ವಲಯದ ಕುಂತೂರು ಅರಣ್ಯ ಸಫಾರಿ ಪ್ರದೇಶದಲ್ಲಿ ಪ್ರವಾಸಿಗರ ಆಕರ್ಷಕವಾಗಿದ್ದ ಮೂಗ ಹುಲಿಯೆಂದೇ ಕರೆಯಲ್ಪಡುತ್ತಿದ್ದ ಹುಲಿಯು ಮತ್ತೊಂದು ಗಂಡು ಹುಲಿಯ ಜೊತೆ ಕಾದಾಟ ನಡೆಸಿ ತೀವ್ರ ಗಾಯಗೊಂಡಿತ್ತು.
ಈ ಹುಲಿಯು ಮೂರ್‍ನಾಲ್ಕು ದಿನಗಳ ಹಿಂದೆ ಕುಟ್ಟ-ಪೊನ್ನಂಪೇಟೆ ಮುಖ್ಯ ರಸ್ತೆ ಮಧ್ಯದಲ್ಲೇ ಕುಳಿತು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿತ್ತು.
ಬಳಿಕ ನಾಗರಹೊಳೆ ಡಿಸಿಎಫ್ ಸೀಮಾಪಿ.ಎ.ರವರ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಲಾಗಿತ್ತು. ಶಾರ್ಪ್ ಶೂಟರ್ ಕೆ.ಪಿ.ರಂಜನ್‌ರವರು ಅರವಳಿಕೆ ಚುಚ್ಚುಮದ್ದು ನೀಡಿ, ಪ್ರಜ್ಞೆ ತಪ್ಪಿದ್ದು ಖಚಿತಪಡಿಸಿಕೊಂಡ ನಂತರ ಹುಡಿಯನ್ನು ಸೆರೆ ಹಿಡಿಯಲಾಗಿತ್ತು.
ನಂತರ ಅರಣ್ಯಇಲಾಖೆಯ ಪಶು ವೈದ್ಯಾಧಿಕಾರಿಗಳಾದ ಡಾ.ಎಚ್.ರಮೇಶ್, ಡಾ.ವಾಸಿಂ ಮಿರ್ಜಾರವರು ನಿತ್ರಾಣಗೊಂಡಿದ್ದ ಹುಲಿಯ ಮೈ ಮೇಲೆ ಆಗಿದ್ದ ಗಾಯಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು.
ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಇದೀಗ ಹುಲಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ವಾಹನದ ಮೂಲಕ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
Advertisement