
ಬೆಂಗಳೂರು: ಪಣತ್ತೂರು ಕೆರೆಯಲ್ಲಿ ಈಜಾಡುತ್ತಿದ್ದ 22 ವರ್ಷದ ಯುವಕ ಮಧ್ಯದಲ್ಲಿ ಸುಸ್ತಾಗಿದ್ದು ದಡ ಸೇರಲು ಸಾಧ್ಯವಾಗದೆ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ರಾತ್ರಿ 9 ಗಂಟೆ ಸುಮಾರಿಗೆ ಮೃತದೇಹವನ್ನು ಕೆರೆಯಿಂದ ಹೊರತೆಗೆದರು. ಮೃತನನ್ನು ಪಣತ್ತೂರಿನ ನಿವಾಸಿ ಅನಿಲ್ ಎಂದು ಗುರುತಿಸಲಾಗಿದೆ.
ಮೂಲತ: ನೇಪಾಳದವನಾಗಿದ್ದ ಈತ ಪೇಯಿಂಗ್ ಗೆಸ್ಟ್ ವಸತಿ ಗೃಹವೊಂದಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಮೂವರು ಗೆಳೆಯರಾದ ಅನಿಲ್, ದಿನೇಶ್ ಶರ್ಮಾ (26) ಮತ್ತು ಉಪೇಂದ್ರ ಶರ್ಮಾ (24) ಪಣತ್ತೂರು ಕೆರೆಗೆ ಹೋಗಿದ್ದರು. ಅನಿಲ್ ಮತ್ತು ದಿನೇಶ್ ಈಜಲು ಕೆರೆಗೆ ಇಳಿದಿದ್ದು, ಉಪೇಂದ್ರ ಡದದಲ್ಲಿ ಕುಳಿತು ಮೊಬೈಲ್ ನಿಂದ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು. ಕೆರೆಯ ಮಧ್ಯಭಾಗಕ್ಕೆ ತಲುಪಿದ ದಿನೇಶ್ ಮತ್ತೆ ದಡಕ್ಕೆ ಬಂದರೆ, ಅನಿಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬಳಿಕ ದಿನೇಶ್ ಮತ್ತು ಉಪೇಂದ್ರ ಪೊಲೀಸ್ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳಿಗೆ ಸುದ್ದಿ ಮುಟ್ಟಿಸಿದ್ದಾರೆ
ಸರ್ಜಾಪುರ ರಸ್ತೆಯ ಅಗ್ನಿಶಾಮಕ ದಳ ಕೆರೆ ಬಳಿ ಧಾವಿಸಿ ನಾಲ್ಕು ಗಂಟೆಗಳ ಕಾರ್ಯಾಚರಣೆಯ ನಂತರ ಮೃತದೇಹವನ್ನು ಹೊರತೆಗೆದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಯುವಕರು ಮದ್ಯದ ಅಮಲಿನಲ್ಲಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಮರಣೋತ್ತರ ಪರೀಕ್ಷೆಯಿಂದ ಅನಿಲ್ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಅನಿಲ್ ಪೋಷಕರು ನೀಡಿದ ದೂರಿನ ಮೇರೆಗೆ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Advertisement