ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಾಜಭವನ ಮತ್ತು ರಾಜ್ಯ ಸರ್ಕಾರದ ನಡುವೆ ಆರಂಭಗೊಂಡ ಸಂಘರ್ಷ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಲು ಕಾಂಗ್ರೆಸ್ ಮುಂದಾಗಿದೆ.
ರಾಜ್ಯಪಾಲರು ಬಿಜೆಪಿ ಸೂಚನೆಯಂತೆ ವರ್ತಿಸುತ್ತಿದ್ದಾರೆ ಎಂಬುವುದು ಕಾಂಗ್ರೆಸ್ ಆರೋಪವಾಗಿದ್ದರೆ, ರಾಜಭವನ ಕಾನೂನು ಪ್ರಕಾರವಾಗಿ ಕ್ರಮ ಕೈಗೊಳ್ಳುತ್ತಿದೆ ಎಂದು ಬಿಜೆಪಿ ಸಮರ್ಥನೆ ಮಾಡಿಕೊಳ್ಳುತ್ತಿದೆ. ಈ ನಡುವೆ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ ಹಾಕುವ ಪ್ರಯತ್ನಕ್ಕೂ ರಾಜ್ಯ ಸರ್ಕಾರ ಮುಂದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ರಾಜ್ಯಪಾಲರ ಕಾರ್ಯ ವಿಧಾನ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ನೀಡಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ರಾಜ್ಯಪಾಲರ ನಡೆ ವಿರುದ್ಧ ಕಿಡಿಕಾರಿರುವ ಸಚಿವ ಎಂ.ಬಿ.ಪಾಟೀಲ್ ಅವರು, ರಾಜ್ಯಪಾಲರು ಕರ್ನಾಟಕದ ತನಿಖಾ ಸಂಸ್ಥೆಗಳ ಅಗತ್ಯವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.
ಮುಡಾ ಹಗರಣ ಪ್ರಕರಣ ಸಂಬಂಧ ರಾಜ್ಯಪಾಲರ ಮುಂದಿನ ನಡೆಗಾಗಿ ಕಾಯುತ್ತಿದ್ದು, ಅವರ ನಡೆ ಅಸಂವಿಧಾನಿಕವಾಗಿದ್ದರೆ, ರಾಷ್ಟ್ರಪತಿಗಳನ್ನು ಸಂಪರ್ಕಿಸುತ್ತೇವೆಂದು ಹೇಳಿದ್ದಾರೆ.
ಯಾವ ತನಿಖಾ ಏಜೆನ್ಸಿಗಳೂ ಬೇಡ. ಎಲ್ಲವನ್ನೂ ರಾಜ್ಯಪಾಲರಿಗೆ (Governer) ದೂರು ನೀಡಿದರೆ ಸಾಕು ಎಲ್ಲವನ್ನು ಅವರೇ ನೋಡಿಕೊಳ್ಳುತ್ತಾರೆ. ಪೊಲೀಸರ ತನಿಖಾ ಏಜೆನ್ಸಿಗಳು ಮಾಡಬೇಕಾಗಿರುವುದನ್ನು ರಾಜ್ಯಪಾಲರು ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ಸರ್ಕಾರವು ಈಗಾಗಲೇ ರಾಜ್ಯಪಾಲರ ಕ್ರಮಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರು ಅನುಮತಿ ನೀಡಿರುವುದು ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಮತ್ತು ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಮೇಲಿನ ಬಾಕಿ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದು ಇದಕ್ಕೆ ಉದಾಹರಣೆಯಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ನಮ್ಮ ಮುಂದಿನ ನಡೆ ಕುರಿತು ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಹೈಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದೇವೆಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿದೆ.
ಈ ನಡುವೆ ಅರ್ಕಾವತಿ ಅಕ್ರಮ ಡಿ-ನೋಟಿಫಿಕೇಷನ್ ಪ್ರಕರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದ್ದು, ಈ ಪ್ರಕಱಣ ಕುರಿತು ತನಿಖೆ ನಡೆಸಿದ್ದ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯಲ್ಲಿ ಬಿಡಿಎ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಮಾತ್ರ ಹೊಣೆ ಮಾಡಿ ಸಿದ್ದರಾಮಯ್ಯ ಅವರಿಗೆ ರೀ-ಡೂ ಪ್ರಕರಣದಲ್ಲಿ ಕ್ಲೀನ್‌ಚಿಟ್ ನೀಡಿತ್ತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಈ ಹಗರಣವನ್ನು ಕೆದಕಿದ್ದು, ಈ ಪ್ರಕರಣ ಕೂಡ ಬಿಜೆಪಿ-ಕಾಂಗ್ರೆಸ್ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಬಿಡಿಎ ಅರ್ಕಾವತಿ ಬಡಾವಣೆಯಲ್ಲಿ 541 ಎಕರೆ ಡಿ-ನೋಟಿಫಿಕೇಷನ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ರಾಜ್ಯ ಸರ್ಕಾರದಿಂದ ಮಾಹಿತಿ ಕೋರಿದ್ದಾರೆ. ರೀ-ಡೂ ಹೆಸರಿನಲ್ಲಿ ಇಷ್ಟು ದೊಡ್ಡ ಪ್ರಮಾಣದ ಭೂಮಿಯನ್ನು ಡಿ-ನೋಟಿಫಿಕೇಷನ್ ಮಾಡಿ 7,000 ಕೋಟಿ ರೂ.ಗಳಿಗೂ ಹೆಚ್ಚು ಹಣ ಕೈಬದಲಾವಣೆ ಆಗಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿದ್ದವು.
ಆರೋಪಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ, ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ಆಯೋಗ ರಚಿಸಿ ವರದಿಯನ್ನೂ ತರಿಸಿಕೊಂಡರು, ಆದರೆ, ಆ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಲೇ ಇಲ್ಲ. ಪ್ರತಿಪಕ್ಷಗಳು ಆರೋಪ ಮಾಡಿದ್ದವಾದರೂ ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿಲ್ಲ, ರಾಜಭವನ ಮತ್ತು ವಿಧಾನಸೌಧದ ನಡುವಿನ ಮುಸುಕಿನ ಗುದ್ದಾಟದಲ್ಲಿ ರೀ-ಡೂ ಪ್ರಕರಣವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ರಾಜ್ಯಪಾಲರು ಇದೀಗ ಮುಂದಾಗಿದ್ದಾರೆ.
ನ್ಯಾಯಮೂರ್ತಿ ಕೆಂಪಣ್ಣ ವರದಿ ಕೋರಿ ಸರ್ಕಾರಕ್ಕೆ ರಾಜ್ಯಪಾಲರು ಬರೆದ ಪತ್ರಕ್ಕೆ ಸೋಮವಾರ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು ಬಿಜೆಪಿ ಅಧಿಕಾರದಲ್ಲಿದ್ದಾಗ ಏಕೆ ವರದಿ ಮಂಡಿಸಲಿಲ್ಲ. ಈ ಕುರಿತು ಬಿಜೆಪಿ ನಾಯಕ ಸಿ.ಟಿ.ರವಿ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಆಗ ಸಚಿವರಾಗಿದ್ದಾಗ ಏಕೆ ಕ್ರಮ ಕೈಗೊಳ್ಳಲಿಲ್ಲ,'' ಎಂದು ಪ್ರಶ್ನಿಸಿದರು.
ಇದೇ ವೇಳೆ ರಾಷ್ಟ್ರಪತಿಗಳ ಮೊರೆ ಹೋಗುತ್ತೀರಾ ಎಂಬ ಪ್ರಶ್ನೆಗೆ ುತ್ತರಿಸಿದ ಅವರು, ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ರಾಜ್ಯಪಾಲರು ಕ್ಷುಲ್ಲಕ ವಿಚಾರಗಳತ್ತ ಗಮನ ಹರಿಸುತ್ತಿದ್ದಾರೆ. ನಾನು ಕನ್ನಡದಲ್ಲಿ ಕೆಲವು ದಾಖಲೆಗಳಿಗೆ ಸಹಿ ಮಾಡದ ವಿಷಯದ ಬಗ್ಗೆಯೂ ಒಬ್ಬ ವ್ಯಕ್ತಿಯ ದೂರಿನ ನಂತರ ಅವರು ಸರ್ಕಾರದಿಂದ ವಿವರಣೆಯನ್ನು ಕೇಳಿದ್ದಾರೆಂದು ಕಿಡಿಕಾರಿದರು.
Advertisement