
ಬೆಂಗಳೂರು: ಬೆಂಗಳೂರಿನಿಂದ ಉತ್ತರ ಭಾರತೀಯರು ಹೊರಟು ಹೋದರೆ ಇಡೀ ಬೆಂಗಳೂರು ಖಾಲಿಯಾಗಿ ಹೋಗುತ್ತದೆ ಎಂದು ರೀಲ್ಸ್ ಮಾಡಿದ್ದ Instagram influencer Sugandh Sharma ಮಹಿಳೆಯನ್ನು ಆಕೆಯ ಸಂಸ್ಥೆ ಕಿಕೌಟ್ ಮಾಡಿದ್ದು, ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಇದೀಗ ಕನ್ನಡಿಗರ ಕ್ಷಮೆ ಕೇಳಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಹೌದು.. ನಾವಿದ್ದರೆ ಮಾತ್ರ ಬೆಂಗಳೂರು... ನಾವೆಲ್ಲರೂ ಬಿಟ್ಟು ಹೋದರೆ ಇಡೀ ಬೆಂಗಳೂರೇ ಖಾಲಿಯಾಗುತ್ತದೆ.. ಕೋರಮಂಗಲದ ಪಬ್‌ಗಳೆಲ್ಲಾ ಖಾಲಿ ಹೊಡೆಯುತ್ತವೆ ಎಂದಿದ್ದ ಇನ್ಸ್‌ಟಾಗ್ರಾಮ್ ಇನ್‌ಫ್ಲುಯೆನ್ಸರ್ ಸುಗಂಧ್ ಶರ್ಮಾ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾರೆ.
ಬೆಂಗಳೂರು ಮತ್ತು ಕರ್ನಾಟಕದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಸುಗಂಧ್ ಶರ್ಮಾ ಇದೀಗ ಬೆಂಗಳೂರನ್ನೇ ಬಿಟ್ಟು ಹೋಗುವಂತಾಗಿದೆ.
ಮೂಲಗಳ ಪ್ರಕಾರ ಫ್ರೀಡಂ ಕಂಪನಿಯಲ್ಲಿ ಸುಗಂಧ ಶರ್ಮ ಕೆಲಸ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸುಗಂಧ್ ಶರ್ಮಾ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಆಕೆ ಕೆಲಸ ಮಾಡುತ್ತಿದ್ದ ಕಂಪನಿ ಸಹ ಎಚ್ಚೆತ್ತುಕೊಂಡಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆಕೆಯನ್ನು ಕಂಪನಿ ಕೆಲಸದಿಂದ ತೆಗೆದುಹಾಕಿದೆ. ಫ್ರೀಡಂ ಕಂಪನಿ ಸುಗಂಧ್ ಶರ್ಮಾರನ್ನು ಟರ್ಮಿನೇಟ್ ಮಾಡಿದೆ.
ಕನ್ನಡಪರ ಹೋರಾಟಗಾರರಿಂದ ಪ್ರತಿಭಟನೆ
ಇನ್ನು ಸುಗಂಧ್ ಶರ್ಮಾ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆಕೆಯ ವಿರುದ್ಧ ಕನ್ನಡಪರ ಹೋರಾಟಗಾರರು ವ್ಯಾಪಕ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ಬೆಂಗಳೂರಿನ ಅನ್ನ-ನೀರು ಪಡೆದ ನಿಮಗೆ ಇಲ್ಲಿ ಇರಲು ಜಾಗವಿಲ್ಲ. ಕೂಡಲೇ ನೀವು ಬೆಂಗಳೂರು ಬಿಟ್ಟು ತೊಲಗಿ ಅಂತಾ ಸಾಕಷ್ಟು ಮಂದಿ ಕಿಡಿಕಾರಿದ್ದರು. ದುಡಿದು ಹೊಟ್ಟೆ ತುಂಬಿಸಿಕೊಳ್ಳಲು ಇಲ್ಲಿಗೆ ಬಂದು ಬೆಂಗಳೂರಿನ ಬಗ್ಗೆಯೇ ಕೆಟ್ಟದಾಗಿ ಮಾತನಾಡುವ ಹಕ್ಕು ನಿಮಗಿಲ್ಲ. ನಿಮ್ಮ ಅವಶ್ಯಕತೆಯೂ ನಮಗಿಲ್ಲ, ಈ ಪುಣ್ಯಭೂಮಿಯಲ್ಲಿ ಇರಲು ನಿಮಗೆ ಯೋಗ್ಯತೆ ಸಹ ಇಲ್ಲವೆಂದು ಆಕ್ರೋಶ ವ್ಯಕ್ತವಾಗಿತ್ತು. ಸುಗಂಧ ಶರ್ಮಾಗೆ ಬುದ್ದಿ ಕಲಿಸಲು ಕನ್ನಡ ಪರ ಸಂಘಟನೆಗಳು ಸಹ ಪ್ರತಿಭಟನೆ ಕೈಗೊಂಡಿದ್ದವು.
ಅಲ್ಲದೆ ಫ್ರೀಡಂ ಕಂಪನಿಗೆ ತೆರಳಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಆಕೆ ಬೇರೆ ಯಾವುದೇ ಕಂಪನಿಯಲ್ಲಿ ಕೆಲಸ ನಿರ್ವಹಿಸಿದರೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಕಿಕೌಟ್ ಬೆನ್ನಲ್ಲೇ ಕ್ಷಮೆ ಕೇಳಿದ ಸುಗಂಧ್ ಶರ್ಮಾ
ಇನ್ನು ಅತ್ತ ಕೆಲಸ ಹೋಗುತ್ತಲೇ ಕೆಟ್ಟ ಮೇಲೆ ಬುದ್ದಿಬಂತು ಎಂಬಂತೆ ಸುಗಂಧ್ ಶರ್ಮಾ ಕನ್ನಡಿಗರ ಕ್ಷಮೆಯಾಚಿಸಿದ್ದಾರೆ. ನನ್ನ ಬೆಂಗಳೂರು ರೀಲ್ಸ್ ವಿಡಿಯೋಗಳಿಂದ ಯಾರ ಭಾವನೆಗೆ ಧಕ್ಕೆಯಾಗಿದ್ದರೆ ಕ್ಷಮೆ ಕೇಳುತ್ತೇನೆ. ಯಾರ ಭಾವನೆಯನ್ನು ಘಾಸಿಗೊಳಿಸುವ ಉದ್ದೇಶದಿಂದ ವಿಡಿಯೋ ಮಾಡಿರಲಿಲ್ಲ. ನಾನು ಭಾರತದ ಪ್ರತೀಯೊಂದು ರಾಜ್ಯ, ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುತ್ತೇನೆ. ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ದಯಮಾಡಿ ನಿಮ್ಮ ಪ್ರೀತಿ ನನಗೆ ಕೊಡಿ ಎಂದು ಮನವಿ ಮಾಡಿದ್ದಾರೆ.
Advertisement