ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದು, ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಬಹಳ ದೊಡ್ಡ ಉತ್ತೇಜನ ಸಿಕ್ಕಂತಾಗಿದೆ ಎಂದು ಭ್ರಷ್ಟಾಚಾರ ವಿರೋಧಿ ಆಂದೋಲನ ಹೋರಾಟಗಾರ ಟಿಜೆ ಅಬ್ರಹಾಂ ಹೇಳಿದ್ದಾರೆ.
ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಭೀತಿ ಎದುರಿಸುತ್ತಿದ್ದ ಸಿಎಂ ಸಿದ್ದರಾಮಯ್ಯಗೆ ಕರ್ನಾಟಕ ಹೈಕೋರ್ಟ್ ಆಘಾತ ನೀಡಿದ್ದು, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಕೊನೆಗೂ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟಿಸಿದೆ. ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ ನ್ಯಾಯಮೂರ್ತಿ ನಾಗಪ್ರಸನ್ನ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.
ತೀರ್ಪು ಪ್ರಕಟಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರ್ಜಿದಾರರಾದ ಟಿ.ಜೆ.ಅಬ್ರಹಾಂ, 'ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಸುಪ್ರೀಂ ಕೋರ್ಟ್‌ನಲ್ಲೂ ಕೇವಿಯಟ್ ಸಲ್ಲಿಸಿದ್ದೇವೆ. ಹೈಕೋರ್ಟ್ ನಮ್ಮ ವಾದಕ್ಕೆ ಮತ್ತು ಆಕ್ಷೇಪಣೆಗಳಿಗೆ ಮನ್ನಣೆ ನೀಡಿದೆ. ರಾಜ್ಯಪಾಲರ ಪೂರ್ವಾನುಮತಿ ಸರಿಯಿಲ್ಲ ಎಂದು ವಾದ ಮಾಡುವುದು ಅವರ ಹಕ್ಕಾಗಿತ್ತು. ಆದರೆ ಹೈಕೋರ್ಟ್ ಅದನ್ನು ಮಾನ್ಯ ಮಾಡಿಲ್ಲ ಎಂದರು.
ಅಂತೆಯೇ ತೀರ್ಪು ಸ್ವಾಗತಾರ್ಹ. ಇದನ್ನು ಪ್ರಶ್ನಿಸಿ ಮೇಲನವಿ ಸಲ್ಲಿಸುವ ಎಲ್ಲಾ ಹಕ್ಕುಗಳೂ ಅರ್ಜಿದಾರರಿಗಿವೆ. ಈಗಾಗಲೇ ನಾವು ಸುಪ್ರೀಂಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ್ದೇವೆ. ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆಯೂ ಕೇವಿಯಟ್ ಸಲ್ಲಿಸುತ್ತೇವೆ. ಮುಡಾ ಪ್ರಕರಣದ ವಿಚಾರಣೆಗೆ ಯಾವುದೇ ಅಡೆತಡೆ ಇರಲಿಲ್ಲ. ಹೈಕೋರ್ಟ್ ವಿಚಾರಣೆಯಿಂದಾಗಿ ಒಂದಿಷ್ಟು ಕಾಲ ಮುಂದೂಡಿಕೆಯಾಗಿತ್ತು. ಈಗ ತೀರ್ಪಿನಿಂದಾಗಿ ಎಲ್ಲವೂ ಇತ್ಯರ್ಥವಾಗಿದೆ ಎಂದರು.
ಯಾವುದೇ ನ್ಯಾಯಾಲಯಕ್ಕೆ ಹೋದರೂ ಸೋಲುತ್ತಾರೆ: ಅರ್ಜಿದಾರ ಸ್ನೇಹಮಯಿ ಕೃಷ್ಣ
ಇನ್ನು ಇದೇ ವೇಳೆ ಮಾತನಾಡಿದ ಅರ್ಜಿದಾರ ಸ್ನೇಹಮಯಿ ಕೃಷ್ಣಾ, 'ಅಕ್ರಮದಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿದೆ ಎಂದು ನಾವು ಹೈಕೋರ್ಟ್ ಗಮನಕ್ಕೆ ತಂದಿದ್ದೇವೆ. ಅದರಂತೆ, ಗೌರವಾನ್ವಿತ ನ್ಯಾಯಾಲಯವು ತನ್ನ ಆದೇಶವನ್ನು ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳಿದ್ದು, ಅವರು ಯಾವುದೇ ನ್ಯಾಯಾಲಯಕ್ಕೆ ಹೋದರೂ ಸೋಲುತ್ತಾರೆ ಎಂದು ಹೇಳಿದ್ದಾರೆ.
Advertisement