
ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ನಗರದ ಬೆಂಗಳೂರು ಹೊರವಲಯದಲ್ಲಿ ಕಳೆದ ಹಲವು ದಿನಗಳಿಂದ ಸಾರ್ವಜನಿಕವಾಗಿ ಪದೇ ಪದೇ ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಅರಣ್ಯ ಇಲಾಖೆಯ ಹತ್ತಾರು ಸಿಬ್ಬಂದಿಗಳು ಚಿರತೆಯನ್ನು ಟ್ರ್ಪಾಪ್ ಮಾಡಿ ಸೆರೆ ಹಿಡಿದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಚಿರತೆ ಹೆದ್ದಾರಿ ಕ್ರಾಸ್ ಮಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಇದರೊಂದಿಗೆ ಐಟಿಬಿಟಿ ಸಿಟಿ ಖ್ಯಾತಿಯ ಎಲೆಕ್ಟ್ರಾನಿಕ್ ಸಿಟಿ ಸ್ಥಳೀಯರು ಹಾಗೂ ಐಟಿ ಬಿಟಿ ಮಂದಿ ಆತಂಕಕ್ಕೆ ಒಳಗಾಗಿದ್ದರು. ಸೆಪ್ಟೆಂಬರ್ 17ರ ಮುಂಜಾನೆ ಬೆಂಗಳೂರಿನ ಟೋಲ್ ಪ್ಲಾಜಾ ಬಳಿ ಚಿರತೆಯೊಂದು ಮೇಲ್ಸೇತುವೆ ದಾಟುತ್ತಿರುವುದು ಕಂಡುಬಂದಿತ್ತು.
ಹಲವಾರು ಸಾಫ್ಟ್‌ವೇರ್ ಸಂಸ್ಥೆಗಳ ಕೇಂದ್ರವಾದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬೆಳಗಿನ ಜಾವ ಮೂರು ಗಂಟೆಗೆ ಇದನ್ನು ಗಮನಿಸಲಾಗಿತ್ತು. ಚಿರತೆ ಓಡಾಟದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕ್ಯಾಮರಾಗಳನ್ನ ಅಳವಡಿಸಿ ಚಿರತೆ ಓಡಾಟದ ಬಗ್ಗೆ ನಿಗಾ ವಹಿಸಿದ್ದರು.
ಅರಣ್ಯ ಇಲಾಖೆ ಅವರು ಇಟ್ಟಿದ್ದ ಕ್ಯಾಮೆರಾದಲ್ಲಿ ಹಲವು ಕಡೆಗಳಲ್ಲಿ ಚಿರತೆ ಕಾಣಿಸಿತ್ತು. ಇದರಂತೆ ಪ್ಲ್ಯಾನ್ ಮಾಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೂರು ಬೋನ್ ಗಳನ್ನ ಇಟ್ಟು ಸೆರೆಗೆ ಕಾರ್ಯಾಚರಣೆ ನಡೆಸಿದ್ದರು. ಎಲೆಕ್ಟ್ರಾನಿಕ್ ಸಿಟಿಯ ಎಲಿಪ್ಯಾಡ್ ಜಾಗದಲ್ಲಿ ಹೆಚ್ಚಾಗಿ ಚಿರತೆ ಓಡಾಡುತ್ತಿದ್ದ ಚಿರತೆ, ಅಲ್ಲಿ ನಿರ್ಜನ ಪ್ರದೇಶದಲ್ಲಿಯೇ ಹೆಚ್ಚಾಗಿ ಬಿಡುಬಿಟ್ಟಿರುವುದು ಖಚಿತವಾಗಿತ್ತು.
ಎಲಿಪ್ಯಾಡ್ ಜಾಗದಲ್ಲಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಚಿರತೆಯ ಜಾಡು ಫಾಲೋ ಮಾಡಲು ಅರಣ್ಯ ಇಲಾಖೆಯವರು, ಥರ್ಮಲ್ ಡ್ರೋಣ್ ಬಳಕೆ ಮಾಡಿದ್ದರು. ಆ ಮೂಲಕ ಚಿರತೆಯನ್ನ ಬೆನ್ನತ್ತಿದ್ದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಬೋನಿಗೆ ಬಿದ್ದ ಚಿರತೆ ಐದು ವರ್ಷ ಪ್ರಾಯದ ಗಂಡು ಚಿರತೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದು, ಸದ್ಯ ಸೆರೆಯಾಗಿರುವ ಚಿರತೆಯನ್ನು ಬನ್ನೆರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲು ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.
Advertisement