ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ (Actor Darshan)ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕೊಲೆ ಪ್ರಕರಣದಲ್ಲಿನ ಹಣದ ವ್ಯವಹಾರ ಕುರಿತು ಐಟಿ ಅಧಿಕಾರಿಗಳಿಂದಲೂ ತನಿಖೆ ಆರಂಭವಾಗಲಿದೆ ಎಂದು ಹೇಳಲಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಹಣದ ವಹಿವಾಟು ಕೂಡ ನಡೆದಿದ್ದು, ಇದೇ ಕಾರಣಕ್ಕೆ ಈ ಪ್ರಕರಣದ ವಿಚಾರಣೆಯನ್ನು ಐಟಿ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ. ಈ ಕೇಸ್ನಲ್ಲಿ ದರ್ಶನ್ ಅವರ ವಿಚಾರಣೆ ನಡೆಯಲಿದ್ದು, ಇದರಿಂದ ನಟ ದರ್ಶನ್ ಗೆ ಸಂಕಷ್ಟ ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ದರ್ಶನ್ ಇರುವ ಬಳ್ಳಾರಿ ಜೈಲಿಗೆ ಐಟಿ ಅಧಿಕಾರಿಗಳು ಬರಲಿದ್ದು, ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದರ್ಶನ್ ರ ವಿಚಾರಣೆ ಮಾಡಲಿದ್ದಾರೆ. ಐಟಿ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ನ್ಯಾಯಾಲಯದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಇ-ಮೇಲ್ ಕೂಡ ರವಾನೆಯಾಗಿದೆ ಎನ್ನಲಾಗಿದೆ.
ಸಂಚು ತಂದ ಆಪತ್ತು
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆರೋಪವನ್ನು ಮತ್ತಿಬ್ಬರ ಮೇಲೆ ಹೊರಿಸಲು ಪ್ಲ್ಯಾನ್ ಮಾಡಿದ್ದರು. ಇದಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡಿದ್ದರು. ಅಷ್ಟು ದೊಡ್ಡ ಮೊತ್ತದ ಕ್ಯಾಶ್ ಎಲ್ಲಿಂದ ಬಂತು? ಹೇಗೆಲ್ಲ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಸದ್ಯ ಐಟಿ ಅಧಿಕಾರಿಗಳು ಬರುವುದನ್ನು ಜೈಲಾಧಿಕಾರಿಗಳು ಖಚಿತಪಡಿಸಿದ್ದಾರೆ.
ಜಾಮೀನಿಗೆ ಅರ್ಜಿ ಸಲ್ಲಿಸಿರುವ ದರ್ಶನ್
ಇನ್ನು ನಟ ದರ್ಶನ್ ಈಗಾಗಲೇ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದು, ಇದರ ವಿಚಾರಣೆ ಸೆಪ್ಟೆಂಬರ್ 27ರಂದು ಕೋರ್ಟ್ನಲ್ಲಿ ನಡೆಯಲಿದೆ.
Advertisement