ವೈಯಾಲಿಕಾವಲ್ ಹತ್ಯೆ ಪ್ರಕರಣ: ಮಹಾಲಕ್ಷ್ಮೀ ನನ್ನನ್ನು ಕೊಲ್ಲಲು ಬಯಸಿದ್ದಳು; ಹಂತಕನ ಡೆತ್ ನೋಟ್'ನಲ್ಲಿ ಹಲವು ಮಾಹಿತಿ ಬಹಿರಂಗ..!

ಹಂತಕ ಮುಕ್ತಿರಂಜನ್ ರಾಯ್, ತನ್ನ ಹುಟ್ಟೂರಾದ ಒಡಿಶಾದ ಭದ್ರಕ್‌ ಜಿಲ್ಲೆಯ ಫಂಡಿ ಗ್ರಾಮದ ಸಮೀಪವೇ ಇರುವ ಭುನಿಪುರ ಎಂಬ ಹಳ್ಳಿಯ ಸ್ಮಶಾನದಲ್ಲಿ ಸೆ.24ರಂದು ಆತ್ಮಹತ್ಯೆ ಮಾಡಿಕೊಂಡಿದ್ದ.
ಹತ್ಯೆಯಾದ ಮಹಿಳೆ ಹಾಗೂ ಹಂತಕ ರಂಜನ್
ಹತ್ಯೆಯಾದ ಮಹಿಳೆ ಹಾಗೂ ಹಂತಕ ರಂಜನ್
Updated on

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮಹಾಲಕ್ಷ್ಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಆತ್ಮಹತ್ಯೆಗೂ ಮುನ್ನ ತನ್ನ ತಾಯಿ ಹಾಗೂ ಸಹೋದರನ ಮುಂದೆ ತಾನು ಮಾಡಿದ್ದ ಅಪರಾಧ ಕೃತ್ಯವನ್ನು ಒಪ್ಪಿಕೊಂಡಿದ್ದು, ಡೆತ್ ನೋಟ್ ನಿಂದಲೂ ಹಲವು ಅಂಶಗಳು ಬಹಿರಂಗಗೊಂಡಿವೆ.

ಹಂತಕ ಮುಕ್ತಿರಂಜನ್ ರಾಯ್, ತನ್ನ ಹುಟ್ಟೂರಾದ ಒಡಿಶಾದ ಭದ್ರಕ್‌ ಜಿಲ್ಲೆಯ ಫಂಡಿ ಗ್ರಾಮದ ಸಮೀಪವೇ ಇರುವ ಭುನಿಪುರ ಎಂಬ ಹಳ್ಳಿಯ ಸ್ಮಶಾನದಲ್ಲಿ ಸೆ.24ರಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ಸ್ಮಶಾನದಲ್ಲಿನ ಮರಕ್ಕೆ ನೇಣು ಹಾಕಿಕೊಂಡಿದ್ದ. ಆ ಜಾಗದ ಸಮೀಪವೇ ಆತನ ದ್ವಿಚಕ್ರ ವಾಹನ, ಲ್ಯಾಪ್‌ಟಾಪ್‌ ಮತ್ತು ಪತ್ರವೊಂದು ಸಿಕ್ಕಿದೆ.

ಮುಕ್ತಿ ರಂಜನ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಬರೆದಿಟ್ಟಿರುವ ಆ ಪತ್ರದಲ್ಲಿ ಮಹಾಲಕ್ಷ್ಮಿ ಕೊಲೆ ರಹಸ್ಯದ ಕುರಿತು ಬರೆದಿದ್ದಾನೆ. ಮಹಾಲಕ್ಷ್ಮಿಯನ್ನು ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿರುವ ಆತ, ಯಾವ ರೀತಿ ಕೊಲೆ ಮಾಡಿದೆ ಮತ್ತು ಏಕೆ ಕೊಲೆ ಮಾಡಿದೆ ಎಂಬ ಸತ್ಯ ಬಿಚ್ಚಿಟ್ಟಿದ್ದಾನೆ.

ಮಲ್ಲೇಶ್ವರದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಕ್ತಿ ರಂಜನ್ ಮತ್ತು ಮಹಾಲಕ್ಷ್ಮಿ ಪರಿಚಿತರಾಗಿದ್ದರು. ಮಹಾಲಕ್ಷ್ಮೀ ಅವರನ್ನು ಮೊದಲು ಮಕ್ತು ರಂಜನ್ ಇಷ್ಟಪಟ್ಟಿದ್ದು, ಇದನ್ನೇ ಮಹಾಲಕ್ಷ್ಮೀ ತನ್ನ ಲಾಭಕ್ಕೆ ಬಳಸಿಕೊಂಡಿದ್ದಳು. ಆರ್ಥಿಕವಾಗಿ ಶೋಷಿಸುತ್ತಿದ್ದಳು. ಮಾಲ್‌ನಲ್ಲಿ ಕೆಲಸದ ವೇಳೆ ಬೇರೆ ಮಹಿಳೆಯರೊಂದಿಗೆ ಮಾತನಾಡಿದರೆ ಅದನ್ನು ಮಹಾಲಕ್ಷ್ಮಿ ಸಹಿಸುತ್ತಿರಲಿಲ್ಲ. ಸ್ಥಳದಲ್ಲೇ ನಿಂದಿಸುತ್ತಿದ್ದಳು.

ಹತ್ಯೆಯಾದ ಮಹಿಳೆ ಹಾಗೂ ಹಂತಕ ರಂಜನ್
ವೈಯಾಲಿಕಾವಲ್ ಮಹಿಳೆ ಹತ್ಯೆ ಪ್ರಕರಣ: ಹಂತಕ ಕೊನೆ ಕ್ಷಣದಲ್ಲಿ ಬರೆದಿದ್ದ ಡೆತ್ ನೋಟ್ ಪತ್ತೆ!

ಈ ವಿಚಾರವಾಗಿ ನನಗೆ ಮಹಾಲಕ್ಷ್ಮಿ ಮೇಲೆ ಬೇಸರವಿತ್ತು, ಅಲ್ಲದೆ, ಮದುವೆ ವಿಚಾರ ಪ್ರಸ್ತಾಪಿಸಿ ಜಗಳವಾಡುತ್ತಿದ್ದಳು. ನಿನಗೆ ಈಗಾಗಲೇ ಮದುವೆಯಾಗಿ ಮಗು ಇದೆ. ನಾವು ಲಿವಿಂಗ್‌ ಟುಗೆದರ್‌ನಲ್ಲಿ ಇರೋಣ' ಎಂದು ಹೇಳಿದಾಗ ಇಬ್ಬರ ನಡುವೆ ಜಗಳವಾಯಿತು. ಈ ವೇಳೆ ನನಗೆ ಅವಮಾನವಾಗುವಂತೆ ಮಾತನಾಡಿ ಹಲ್ಲೆ ನಡೆಸಿದಳು. ನಾನು ಸುಂದರವಾಗಿದ್ದೇನೆ. ನಿನಗೆ ನನಗಿಂತ ಸುಂದರವಾಗಿರುವ ಹುಡುಗಿ ಬೇಕಾ?' ಎಂದು ಛೇಡಿಸಿದಳು. ಅಲ್ಲದೆ, ಚಾಕು ಹಿಡಿದು ನನ್ನನ್ನು ಹಾಗೂ ನನ್ನ ಸಹೋದರನನ್ನು ಹತ್ಯೆ ಮಾಡುವುದಾಗಿಯೂ ಬೆದರಿಕೆ ಹಾಕಿದಳು. ಇದರಿಂದ ತಾಳ್ಮೆ ಕಳೆದುಕೊಂಡು ಆಕೆಯ ಮೇಲೆ ಹಲ್ಲೆ ನಡೆಸಿದೆ. ಆಕೆ ಮೃತಪಟ್ಟಳು. ನಂತರ ಆಕೆಯ ದೇಹವನ್ನು 59 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿರಿಸಿದೆ. ಯಾವುದೇ ಸಾಕ್ಷಿ ಸಿಗದಂತೆ ಬಾತ್‌ ರೂಂನಲ್ಲಿನ ರಕ್ತದ ಕಲೆಗಳನ್ನು ಆ್ಯಸಿಡ್‌ನಿಂದ ಸ್ವಚ್ಛಗೊಳಿಸಿದೆ ಎಂದು ಡೆತ್ ನೋಟ್ ನಲ್ಲಿ ಮುಕ್ತಿ ರಂಜನ್ ಬರೆದಿದ್ದಾನೆ.

ಸೆ.3ರಂದು ಮಹಾಲಕ್ಷ್ಮೀಯನ್ನು ಹತ್ಯೆ ಮಾಡಿದ ಆರೋಪಿ, ಅದೇ ದಿನ ಡೆತ್ ನೋಟ್ ಬರೆದಿಟ್ಟು. ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದ. ಆದರೆ, ಸಾಧ್ಯವಾಗಿರಲಿಲ್ಲ. ಬಳಿಕ ರೈಲಿನಲ್ಲಿ ಬೆರ್ಹಾಂಪುರಕ್ಕೆ ತೆರಳಿದ್ದು, ಅಲ್ಲಿ ಕೆಳ ದಿನಗಳ ಕಾಲ ಕುಟುಂಬಸ್ಥರೊಂದಿಗೆ ಕಾಲ ಕಳೆದಿದ್ದಾನೆ. ಈ ವೇಳೆ ಸೋದರ ಸಂಬಂಧಿಯ ಮುಂದೆ ಅಪರಾಧ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾನೆ. ತಾಯಿಯ ಬಳಿಯೂ ಹತ್ಯೆ ಬಗ್ಗೆ ಬಾಯ್ಬಿಟ್ಟಿದ್ದಾನೆ, ನಂತರ ಸೆ.24ರಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೆರ್ಹಾಂಪುರಕ್ಕೆ ಆಗಮಿಸುವ ಮೊದಲು ದೂರವಾಣಿ ಮೂಲಕ ನನ್ನೊಂದಿಗೆ ಮಾತನಾಡಿದ್ದ. ನನ್ನೊಂದಿಗೆ ಇದ್ದ ಸಮಯದಲ್ಲೂ ಆತ ತಾನೂ ಮಾಡಿದ್ದ ಅಪರಾಧ ಕೃತ್ಯದ ಬಗ್ಗೆ ಹೇಳಿದ್ದ. ತನಗೆ ಮಹಾಲಕ್ಷ್ಮೀ ಬ್ಲ್ಯಾಕ್ ಮೇಲ್ ಮಾಡುತ್ತಿದ್ದು. ಆಕೆಗಾಗಿ 7-8 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಗಿಯೂ ಹೇಳಿದ್ದ. ಕೆಲವು ತಿಂಗಳ ಹಿಂದೆ ಮುಕ್ತಿ ರಂಜನ್ ತನ್ನನ್ನು ಅಪಹರಿಸಿದ್ದಾನೆಂದು ಮಹಿಳೆ ಆರೋಪಿಸಿದ್ದಳು, ನಂತರ ಸ್ಥಳೀಯರು ಅವನನ್ನು ಪೊಲೀಸರ ವಶಕ್ಕೆ ನೀಡಿದ್ದರು ಎಂದು ಮುಕ್ತಿ ರಂಜನ್ ಸೋದರ ಸಂಬಂಧಿ ಹೇಳಿಕೆ ನೀಡಿದ್ದಾರೆ.

ಮಹಾಲಕ್ಷ್ಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಕ್ತಿರಾಜನ್ ನ ತಾಯಿ ಕುಂಜಲತಾ ರಾಯ್‌ ಅವರು ಮಾತನಾಡಿ, ನನ್ನ ಮಗ ಮುಕ್ತಿರಾಜನ್ನನ್ನು ಕೊಲೆಯಾದ ಮಹಿಳೆ ಟ್ರ್ಯಾಪ್‌ ಮಾಡಿದ್ದಳು. ಅವಳು ಅವನಿಂದ ನಿರಂತರವಾಗಿ ಹಣ ಪೀಕುತ್ತಿದ್ದಳು. ಮಗನಿಂದ ಚಿನ್ನದ ಸರ ಹಾಗೂ ಉಂಗುವನ್ನು ಕಸಿದುಕೊಂಡಿದ್ದಳು. ಮಗ ಈ ವಿಚಾರವನ್ನು ನನಗೆ ತಿಳಿಸಿದ್ದ. ಹೀಗಾಗಿ, ಬೆಂಗಳೂರು ತೊರೆಯುವಂತೆ ಆತನಿಗೆ ಹೇಳಿದ್ದೆ ಎಂದು ಹೇಳಿದ್ದಾರೆ.

ಈ ನಡುವೆ ಮುಕ್ತಿ ರಂಜನ್ ಲ್ಯಾಪ್‌ಟಾಪ್‌ನಲ್ಲಿ ಮಹಾಲಕ್ಷ್ಮಿಯ ಕೆಲ ಫೋಟೊ ಹಾಗೂ ವಿಡಿಯೊಗಳಿದ್ದು, ಆ ಲ್ಯಾಪ್‌ಟಾಪ್‌, ಬ್ಯಾಗ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಭದ್ರಕ್ ಎಸ್ಪಿ ವರುಣ್ ಗುಂಟುಪಲ್ಲಿ ತಿಳಿಸಿದ್ದಾರೆ.

ಹತ್ಯೆಯಾದ ಮಹಿಳೆ ಹಾಗೂ ಹಂತಕ ರಂಜನ್
ಮಹಾಲಕ್ಷ್ಮೀ ಬರ್ಬರ ಹತ್ಯೆ ಪ್ರಕರಣ: ಒಡಿಶಾದಲ್ಲಿ ಕೊಲೆ ಆರೋಪಿ ನೇಣಿಗೆ ಶರಣು!

ಅಬಟೇಡ್ ಚಾರ್ಜ್‌ಶೀಟ್‌ ಸಲ್ಲಿಕೆಗೆ ಪೊಲೀಸರ ಸಿದ್ಧತೆ

ಏತನ್ಮದ್ಯೆ ಮಹಾಲಕ್ಷ್ಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಂಧನಕ್ಕೆ ಒಡಿಶಾಗೆ ತೆರಳಿದ್ದ ರಾಜ್ಯದ ಪೊಲೀಸರ ತಂಡ ಇಂದು ಬೆಂಗಳೂರಿಗೆ ವಾಪಸ್ ಆಗಲಿದ್ದು, ನ್ಯಾಯಾಲಯಕ್ಕೆ ಅಬೇಟೆಡ್ ಚಾರ್ಜ್ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಅಬಟೇಡ್ ಆರೋಪಪಟ್ಟಿ ಸಲ್ಲಿಸುವ ಮೊದಲು, ಬೆಂಗಳೂರು ನಗರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಲಿದ್ದಾರೆ.

ಈಗಾಗಲೇ ಪೊಲಸೀಸರು ಆರೋಪಿ ರಂಜನ್ ಬಗ್ಗೆ ಹಾಗೂ ಮರಣೋತ್ತರ ಪರೀಕ್ಷೆ ಬಗ್ಗೆ ಪ್ರಾಥಮಿಕವಾಗಿ ಮಾಹಿತಿ ಪಡೆದುಕೊಂಡಿದ್ದು, ನ್ಯಾಯಾಲಯದ ಅನುಮತಿ ಪಡೆದು ಆತನ ಮೊಬೈಲ್, ಫಿಂಗರ್ ಪ್ರಿಂಟ್, ಬ್ಲಡ್ ಸ್ಯಾಂಪಲ್ ಕೂಡ ಸಂಗ್ರಹ ಮಾಡಿದ್ದಾರೆ.

ಪ್ರಕರಣಕ್ಕೆ ಮೃತ ರಂಜನ್ ಫಿಂಗರ್ ಪ್ರಿಂಟ್, ಬ್ಲಡ್ ಸ್ಯಾಂಪಲ್ ಪ್ರಮುಖ ಸಾಕ್ಷ್ಯ ಆಗಲಿದ್ದು, ಹತ್ಯೆ ನಡೆದ ಮನೆಯಲ್ಲಿ ಸಿಕ್ಕಿರುವ ಬ್ಲಡ್ ಸ್ಯಾಂಪಲ್, ಫಿಂಗರ್ ಪ್ರಿಂಟ್ ನ್ನು ಈ ಸ್ಯಾಂಪಲ್ ಜೊತೆ ಹೋಲಿಕೆ ಮಾಡಲಿದ್ದಾರೆ. ಹೋಲಿಕೆ ಮಾಡಿ ಆತನೇ ಕೊಲೆಗಾರನಾ ಎಂದು ಸಾಕ್ಷ್ಯ ಸಂಗ್ರಹಿಸಲಿದ್ದಾರೆ.

ಪ್ರಕರಣದಲ್ಲಿ ರಂಜನ್ ಮೊಬೈಲ್ ಪ್ರಮುಖ ಸಾಕ್ಷ್ಯವಾಗಿದ್ದು, ಇದು ರಂಜನ್ ಮತ್ತು ಮಹಾಲಕ್ಷ್ಮಿ ನಡುವಿನ ಸಂಬಂಧ ಬಯಲು ಮಾಡಲಿದೆ. ಕೊನೆಯದಾಗಿ ರಂಜನ್ ಕರೆ ಮಾಡಿದ್ದು ಕೂಡ ತನಿಖೆಗೆ ಸಹಕಾರಿಯಾಗಲಿದೆ. ಮತ್ತೊಂದು ಕಡೆ ಆರೋಪಿ ಸಾವನ್ನಪ್ಪಿದ ಹಿನ್ನೆಲೆ ಕೇಸ್ ಕ್ಲೋಸ್ ಆಗಲಿದೆ ಎನ್ನಲಾಗಿದೆ,

ಅಲ್ಲದೆ, ಕೃತ್ಯಕ್ಕೆ ರಂಜನ್'ಗೆ ಯಾರಾದ್ರೂ ಸಹಾಯ ಮಾಡಿದ್ದಾರಾ ಎಂಬ ಆಯಾಮದಲ್ಲೂ ತನಿಖೆ ನಡೆಯಲಿದೆ. ಈಗಾಗಲೇ ರಂಜನ್ ಸಹೋದರನ ವಿಚಾರಣೆ ನಡೆಸಲಾಗಿದ್ದು, ಕೊಲೆಯ ಬಗ್ಗೆ ಆತನಿಗೆ ತಿಳಿದಿದ್ದ ವಿಚಾರಗಳ ಬಗ್ಗೆ ಹೇಳಿಕೆ ದಾಖಲಿಸಲಾಗಿದೆ. ನ್ಯಾಯಾಧೀಶರ ಮುಂದೆ ಆತನ ಸೆ.164 ಅಡಿ ಹೇಳಿಕೆ ಕೂಡ ದಾಖಲಿಸಲಾಗಿದೆ.ಈ ಎಲ್ಲಾ ಅಂಶಗಳನ್ನು ಒಳಗೊಂಡ ಚಾರ್ಜ್‌ಶೀಟ್‌ನ್ನು ಪೊಲೀಸರು ತಯಾರಿಸಲಿದ್ದು, ಬಳಿಕ ನ್ಯಾಯಾಲಯಕ್ಕೆ ಅಬೇಟೆಡ್ ಚಾರ್ಜ್ಶೀಟ್ ಸಲ್ಲಿಸಲಿದ್ದಾರೆ.

ಅಬಟೇಡ್ ಚಾರ್ಜ್‌ಶೀಟ್‌ ಎಂದರೆ, ಆರೋಪಿ ಸಾವನ್ನಪ್ಪಿದ ನಂತರ ತನಿಖೆ ನಿಲ್ಲಿಸುವ ಬಗ್ಗೆ ವರದಿಯಾಗಿದೆ. ನ್ಯಾಯಾಲಯಕ್ಕೆ ಆರೋಪಿ ಸಾವನ್ನಪ್ಪಿದ ಬಗ್ಗೆ ಕೋರ್ಟ್ ಗಮನಕ್ಕೆ ತಂದು ಅಬೇಟೆಡ್ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com