ಮಂಡ್ಯ: ಕೆರೆ-ಕಟ್ಟೆಗಳ ತುಂಬಿಸಿ ರೈತರಿಗೆ ಅನ್ನ ಹಾಕಿ, ನಂತರ ಕಾವೇರಿ ಆರತಿ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರು ಒತ್ತಾಯಿಸಿದ್ದಾರೆ.
ಮಂಡ್ಯ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಮ್ಮ ತಾಲ್ಲೂಕಿನ ನೋವನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ಕಿಂಚಿತ್ತೂ ಪರಿಗಣಿಸಿಲ್ಲ. ರೈತರ ಕಣ್ಣಲ್ಲಿ ನೀರಿನ ಬದಲು ರಕ್ತ ಬರುತ್ತಿದೆ ಎಂದು ಕಿಡಿಕಾರಿದರು.
ರೈತರು ಜಲಪಾತೋತ್ಸವ ಮಾಡಿ ಅಂತ ಕೇಳಿಲ್ಲ, ನೀವು ಕಾವೇರಿ ಆರತಿ ಮಾಡಿ ಅಂತ ಕೇಳ್ತಿಲ್ಲ. ನಮಗೆ ನೀರು ಕೊಡಿ ನಮ್ಮ ಜೀವನವನ್ನು ಹಸನು ಮಾಡಿ ಎಂದು ಹೇಳುತ್ತಿದ್ದಾರೆ. ಗಗನಚುಕ್ಕಿ ಜಲಪಾತೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ಹತ್ತಿಕ್ಕುವ ಕೆಲಸ ಮಾಡಿ ಬಂಧಿಸಿದರು. ಇನ್ನೂ ನಿಮ್ಮ ಕಾಂಗ್ರೆಸ್ ಶಾಸಕರು ಕಾವೇರಿ ಆರತಿ ಮಾಡೋದಕ್ಕೆ ಉತ್ತರ ಪ್ರದೇಶಕ್ಕೆ ಟ್ರೈನಿಂಗ್ಗೆ ಹೋಗಿದ್ದಾರೆ. ನೀರಿಲ್ಲದೆ ರೈತರು ಸಂಕಷ್ಟ ಅನುಭವಿಸುತ್ತಿದ್ದರೂ 4 ಕೋಟಿ ಖರ್ಚು ಮಾಡಿ ಜಲಪಾತೋತ್ಸವ ಮಾಡಿದರು.
ನಮ್ಮ ರೈತರು ಸಂತೃಪ್ತಿಯಾಗಿ ಬೆಳೆ ಬೆಳೆದರೆ, ಆಗ ಕಾವೇರಿ ಆರತಿ ಮಾಡಿದಾಗೆ ಆಗುತ್ತದೆ. ಕೆರೆ ಕಟ್ಟೆಗೆ ನೀರಿಲ್ಲ, ರೈತರಿಗೆ ಬೆಳೆ ಇಲ್ಲ ಯಾವ ಕಾರಣಕ್ಕೆ ಜಲಪಾತೋತ್ಸವ? ಮೊದಲು ರೈತರ ಹೊಟ್ಟೆಗೆ ಊಟ ಕೊಡಿ. ನಂತರ ಜನ ಸಮೃದ್ಧಿಯಾಗಿದ್ದರೆ, ಜಲಪಾತೋತ್ಸವ ಆಚರಣೆ ಮಾಡಿ ಎಂದರು.
ಮೊದಲ ಬಾರಿಗೆ ಜಲಪಾತೋತ್ಸವ ಮಾಡಿದ್ದೆ ಕುಮಾರಸ್ವಾಮಿ ಅವರು. ನಾವು ನಿಮ್ಮಂತೆ ಶೋಕಿಗೆ ಜಲಪಾತೋತ್ಸವ ಮಾಡಿಲ್ಲ. ಜಲಪಾತೋತ್ಸವಕ್ಕೆ ಎಂದು 2 ಟಿಎಂಸಿ ನೀರು ತಮಿಳುನಾಡಿಗೆ ಹರಿಸಿದ್ದಿರಿ. ನೀರನ್ನು ವ್ಯರ್ಥಮಾಡಿದ್ದರಿಂದ ನಮಗೆ ನೋವಾಗುತ್ತೆ. ನಾನು ರೈತನೇ, ಕೃಷಿ ಕೆಲಸ ಮಾಡಿದ್ದೇನೆ. ಆದ್ದರಿಂದ ರೈತರ ನೋವು ನನಗೆ ಗೊತ್ತು. ಕಾವೇರಿ ಆರತಿ ಇವೇಲ್ಲ ಒಂದು ಧರ್ಮದಲ್ಲಿನ ಸಂಪ್ರದಾಯ. ಕಾವೇರಿ ನೀರಿಗೆ ಪೂಜೆ, ಕನ್ನಂಬಾಡಿ ಕಟ್ಟೆಗೆ ಬಾಗಿನ ಅರ್ಪಿಸಿದ್ದೀರಲ್ಲ ಅಷ್ಟೆ ಸಾಕು. ಅದೇ ಕಾವೇರಿ ಆರತಿ. ಆದ್ದರಿಂದ ಮೊದಲು ರೈತರ ಹೊಟ್ಟೆಗೆ ಊಟ ಹಾಕಿ ನಂತರ ಕಾರ್ಯಕ್ರಮ ಮಾಡಿ. ರೈತರು, ಜಾನುವಾರುಗಳು ಮತ್ತು ಪಕ್ಷಿಗಳಿಗೆ ಅನುಕೂಲವಾಗುವಂತೆ ಕೆರೆಗಳು ಮತ್ತು ಕೆರೆಗಳನ್ನು ತುಂಬಿಸಿ. ಮಳವಳ್ಳಿ ಹಾಗೂ ಹಿಂಗಾರು ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ ರೂ.30 ಸಾವಿರ ಪರಿಹಾರ ನೀಡಿ ಎಂದು ಮನವಿ ಮಾಡಿದರು.
ಮಳೆಯಾಶ್ರಿತ ಪ್ರದೇಶಗಳಲ್ಲಿ ಕೈಗೆತ್ತಿಕೊಂಡಿದ್ದ ರಾಗಿ, ಜೋಳದ ಬಿತ್ತನೆ ಅಲ್ಪ ಪ್ರಮಾಣದ ಮಳೆಯಿಂದ ಒಣಗಿ ಹೋಗಿದ್ದು, ಬೆಳೆಗಳನ್ನು ಉಳಿಸಲು ನೀರಾವರಿ ಕಾಲುವೆಗಳಿಲ್ಲ. ಮಳವಳ್ಳಿಯಲ್ಲಿ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಇದೇ ವೇಳೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಅಕ್ಟೋಬರ್ 18 ಮತ್ತು 19 ರಂದು ಮಂಡ್ಯದಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದು, ಆಕಾಂಕ್ಷಿಗಳಿಗೆ 3,000 ಉದ್ಯೋಗಗಳನ್ನು ಒದಗಿಸುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದರು.
Advertisement