
ಬೆಂಗಳೂರು: ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆಗಳ ಸಿಬ್ಬಂದಿಗಳ ಮೇಲಿನ ಪ್ರಕರಣಗಳನ್ನು ಸಿಬಿಐ ತನಿಖೆಗೆ ತೆಗೆದುಕೊಳ್ಳುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದಕ್ಕೆ ಬೇರೆ ಅರ್ಥ ನೀಡುವ ಅಗತ್ಯ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಈ ಕುರಿತು ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಯಾವುದೇ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡುವ ಬಗ್ಗೆ ತಪ್ಪು ಗ್ರಹಿಕೆ ಆಗಿದೆ. ಅಸಲಿಗೆ ಯಾರೇ ಶಾಸಕ ಸಚಿವ ಅಥವಾ ಖಾಸಗಿ ವ್ಯಕ್ತಿಗಳ ವಿರುದ್ಧ ಸಿಬಿಐ ವಿಚಾರಣೆ ಕೈಗೆತ್ತಿಕೊಳ್ಳಬೇಕು ಎಂದರೆ ಸರ್ಕಾರದ ಅನುಮತಿ ಕಡ್ಡಾಯ ಎಂಬ ನಿಯಮ ಈಗಾಗಲೇ ಇದೆ. ರಾಜ್ಯ ಸರ್ಕಾರದ ಅನುಮತಿ ತೆಗೆದುಕೊಂಡೇ ಸಿಬಿಐ ಅಧಿಕಾರಿಗಳು ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಬೇಕು. ಈ ಸಂಬಂಧ ಸರ್ಕಾರ ಯಾವ ಬದಲಾವಣೆಯನ್ನೂ ಮಾಡಿಲ್ಲ. ಇದೇ ಕಾರಣಕ್ಕೆ ಇಂದು ಸಿಬಿಐ ಯಾವುದೇ ಪ್ರಕರಣ ತನಿಖೆಗೆ ತೆಗೆದುಕೊಳ್ಳಬೇಕು ಎಂದರೆ ಒಂದೋ ರಾಜ್ಯ ಸರ್ಕಾರ ಅನುಮತಿ ನೀಡಬೇಕು. ಇಲ್ಲವೇ ನ್ಯಾಯಾಲಯ ನಿರ್ದೇಶಿಸಬೇಕು ಎಂಬುದು ನಿಯಮ.
ಆದರೆ, 2005 ರಲ್ಲಿ ನಾವು ಒಂದು ವಿನಾಯಿತಿ ನೀಡಿದ್ದೆವು. ಕೆಲವು ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆಗಳ ಸಿಬ್ಬಂದಿಗಳ ಮೇಲೆ ಕೇಸ್ ತಗೆದುಕೊಳ್ಳಲು ರಾಜ್ಯ ಸರ್ಕಾರ ಸಿಬಿಐ ಗೆ ವಿನಾಯಿತಿ ನೀಡಿತ್ತು. ಈಗ ಆ ವಿನಾಯಿತಿಯನ್ನು ನಮ್ಮ ಸರ್ಕಾರ ಹಿಂಪಡೆದಿದೆ ಅಷ್ಟೆ. ಏಕೆಂದರೆ ಕಾನೂನು ಪ್ರಕಾರ ಆ ಹಕ್ಕು ಇರುವುದು ರಾಜ್ಯ ಪೊಲೀಸರಿಗೆ ಮಾತ್ರ. ಹೀಗಾಗಿ ಈ ನಿರ್ಧಾರ ಯಾವುದೇ ಮಂತ್ರಿ ಅಥವಾ ಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟ ವಿಚಾರ ಅಲ್ಲ. ಸಂಪುಟದ ನಿರ್ಣಯವನ್ನು ಮನವರಿಕೆ ಮಾಡುವಲ್ಲಿ ತಪ್ಪಾದರೆ ಅದು ನಮ್ಮದೇ ಸಮಸ್ಯೆ. ಇದು ಈ ಸಂದರ್ಭದಲ್ಲಿ ವಾಪಸ್ ಪಡೆದುಕೊಂಡಿದ್ದು. ಕಾಕತಾಳೀಯ ಎಂದು ತಿಳಿಸಿದರು.
ಬಳಿಕ ಮುನಿರತ್ನ ಪ್ರಕರಣ ಕುರಿತು ಮಾತನಾಡಿ, ಮುನಿರತ್ನ ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಮುನಿರತ್ನ ಅವರ ಎಲ್ಲಾ ಅಪರಾಧ ಪ್ರಕರಣಗಳಲ್ಲೂ ಬಿಜೆಪಿಯ ಇತರೆ ನಾಯಕರೂ ಭಾಗಿಯಾಗಿದ್ದಾರಾ ಎನ್ನುವ ಅನುಮಾನ ಮೂಡುತ್ತಿದೆ. ಮುನಿರತ್ನ ತನ್ನನ್ನು ವಿಕಾಸಸೌಧ ಕಚೇರಿಯಲ್ಲೇ ಅತ್ಯಾಚಾರ ಮಾಡಿದ್ದಾರೆ. ಕೆಲವು ಅತ್ಯಾಚಾರ ಪ್ರಕರಣಗಳಿಗೆ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ನ್ಯಾಯಾಧೀಶರ ಎದುರು ಸೆಕ್ಷನ್ 164 ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಎದುರಾಳಿಗಳಿಗೆ ಏಡ್ಸ್ ಸೋಂಕಿತ ಮಹಿಳೆಯ ಮೂಲಕ ಹನಿಟ್ರ್ಯಾಪ್ ಮಾಡಿಸಿ ಆತನಿಗೂ ಮಾರಕ ರೋಗ ಹರಡಿಸುವ ಯೋಜನೆ ರೂಪಿಸಿದ್ದಾರೆ. ಹೀಗಿದ್ದಾಗಲೂ ಬಿಜೆಪಿ ನಾಯಕರು ಅವರ ರಕ್ಷಣೆಗೆ ನಿಂತಿರುವುದು ಹಾಗೂ ಶಾಸಕರನ್ನು ಅಮಾನತುಗೊಳಿಸದೇ ಇರುವುದು ನಾಚಿಕೆಗೇಡಿ ಸಂಗತಿ ಎಂದು ಕಿಡಿಕಾರಿದರು.
Advertisement