ನಾಪತ್ತೆಯಾದ ಗಂಡ ಪತ್ತೆಯಾಗಿದ್ದು ಮಂಗಳಮುಖಿಯಾಗಿ; ಸುಳಿವು ಕೊಟ್ಟಿದ್ದು 'ಬಿಗ್ ಬಾಸ್'!

ನಾಪತ್ತೆಯಾಗಿದ್ದ ವಿವಾಹಿತ ವ್ಯಕ್ತಿಯೊಬ್ಬ ಲಿಂಗ ಬದಲಾವಣೆ ಮಾಡಿಕೊಂಡು ಪತ್ತೆಯಾದ ಘಟನೆ ರಾಮನಗರದಲ್ಲಿ ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ರಾಮನಗರ: ನಾಪತ್ತೆಯಾಗಿದ್ದ ವಿವಾಹಿತ ವ್ಯಕ್ತಿಯೊಬ್ಬ ಲಿಂಗ ಬದಲಾವಣೆ ಮಾಡಿಕೊಂಡು ಪತ್ತೆಯಾದ ಘಟನೆ ರಾಮನಗರದಲ್ಲಿ ವರದಿಯಾಗಿದೆ.

2017ರಲ್ಲಿ ಮನೆ ಬಿಟ್ಟು ಹೋಗಿದ್ದ ಗಂಡ, ಇದೀಗ ಲಿಂಗ ಪರಿವರ್ತನೆ ಮಾಡಿಕೊಂಡಿರುವುದನ್ನು ಕಂಡ ಕುಟುಂಬಸ್ಥರು ಆಘಾತಗೊಂಡಿದ್ದು, ಗಂಡನನ್ನು ಆ ರೂಪದಲ್ಲಿ ಕಂಡ ಹೆಂಡತಿ ಆಘಾತಕ್ಕೊಳಗಾಗಿದ್ದಾಳೆ. ಮೂಲಗಳ ಪ್ರಕಾರ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಣರಾವ್ ಎಂಬುವರು 2015 ರಲ್ಲಿ ಮದುವೆಯಾಗಿ ಪತ್ನಿಯೊಂದಿಗೆ ರಾಮನಗರಲ್ಲಿ ನೆಲೆಸಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಮದುವೆ ಆದ ಎರಡೇ ವರ್ಷಕ್ಕೆ ಅಂದರೆ 2017ರಲ್ಲಿ ಲಕ್ಷ್ಮಣ್ ಸಾಲದ ವಿಚಾರಕ್ಕೆ ಜಿಗುಪ್ಸೆಗೊಂಡು ಮನೆಯಿಂದ ನಾಪತ್ತೆಯಾಗಿದ್ದ. ಗಂಡನ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ ಪತ್ನಿ ಐಜೂರು ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದರು.

ಆದರೆ ಆತನ ಬಗ್ಗೆ ಯಾವುದೇ ಸುಳಿವು ದೊರೆತಿರಲಿಲ್ಲ. ಆದರೆ ಆತನ ಬಗ್ಗೆ ಸುಳಿವು ನೀಡಿದ್ದು ಮಾತ್ರ ಒಂದು ರಿಯಾಲಿಟೋ ಷೋ ಕಾರ್ಯಕ್ರಮ.

ಸುಳಿವು ಕೊಟ್ಟ 'ಬಿಗ್ ಬಾಸ್'
ಬರೋಬ್ಬರಿ ಆರು ವರ್ಷಗಳ ಬಳಿಕ ಈಗ ಲಕ್ಷ್ಮಣ್ ರಾವ್ ಸುಳಿವು ಪತ್ತೆಯಾಗಿದೆ. ಆದರೆ, ಸುಳಿವು ನೀಡಿದ್ದು ಕನ್ನಡದ ರಿಯಾಲಿಟಿ ಷೋ ಬಿಗ್ ಬಾಸ್... ಹೌದು.. ಇತ್ತೀಚೆಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿ ನೀತು ವನಜಾಕ್ಷಿ ಮೈಸೂರಿಗೆ ಆಗಮಿಸಿದ್ದರು. ಮೈಸೂರಿನಲ್ಲಿ ತೃತೀಯ ಲಿಂಗಿಗಳು ಅವರನ್ನು ಸ್ವಾಗತಕ್ಕೆ ತೆರಳಿ ಸನ್ಮಾನಿಸಿದ್ದರು. ಈ ವೇಳೆ ತೃತೀಯ ಲಿಂಗಿ ರಶ್ಮಿಕಾ ಮಾಡಿದ್ದ ರೀಲ್ಸ್‌ನಲ್ಲಿ ಲಕ್ಷ್ಮಣ್ ಹೆಣ್ಣಾಗಿ ಕಾಣಿಸಿಕೊಂಡಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.

ವೈರಲ್ ಆಗಿದ್ದ ರೀಲ್ಸ್‌ನಲ್ಲಿ ಲಕ್ಷ್ಮಣ್ ಮುಖದ ಸ್ಪಷ್ಟ ಹೋಲಿಕೆ ಇತ್ತು. ಹೀಗಾಗಿ ಕುಟುಂಬಸ್ಥರಿಗೂ ಲಕ್ಷ್ಮಣ್ ಇರಬಹುದು ಎಂಬ ಅನುಮಾನ ಮೂಡಿತ್ತು. ತೃತೀಯ ಲಿಂಗಿಗಳ ಸಾಮಾಜಿಕ ಹೋರಾಟಗಾರ್ತಿ ರಶ್ಮಿಕಾ ಹೆಸರಿನ ರೀಲ್ಸ್ ಪ್ರೊಫೈಲ್ ಪರಿಶೀಲಿಸಿದಾಗ ಐಜೂರು ಪೊಲೀಸರು ಲಕ್ಷ್ಮಣ್ ರಾವ್ ವಿಚಾರ ಪ್ರಸ್ತಾಪಿಸಿದ್ದಾರೆ. ಹಿನ್ನೆಲೆ ಗೊತ್ತಿಲ್ಲವಾದರೂ ವಿಳಾಸ ಕೊಡುವುದಾಗಿ ರಶ್ಮಿಕಾ ಹೇಳಿದ್ದಾರೆ. ವಿಳಾಸ ಅನುಸರಿಸಿ ತೆರಳಿದ್ದ ಪೊಲೀಸರಿಗೂ ಆಶ್ಚರ್ಯ ಕಾದಿತ್ತು. ಪೊಲೀಸರ ಬಳಿ ಇದ್ದ ಫೋಟೋ ಗೂ ಎದುರಿಗಿದ್ದ ಹೆಣ್ಣಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಮುಖ ಮಾತ್ರ ಪೂರ್ಣ ಹೋಲಿಕೆಯಾಗುತ್ತಿತ್ತು.

ಪೊಲೀಸರು ನೀವು ಲಕ್ಷ್ಮಣ್ ಅಲ್ಲವೇ ಎಂದು ಕೇಳಿದಾಗ, ನಾನು ಲಕ್ಷ್ಮಣ್ ರಾವ್ ಅಲ್ಲ, ನಾನು ವಿಜಯಲಕ್ಷ್ಮೀ ಎಂದು ಉತ್ತರಿಸಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ತಾನು ವಿಜಯಲಕ್ಷ್ಮೀ ಎಂದು ಲಕ್ಷ್ಮಣ್ ಪಟ್ಟು ಹಿಡಿದಿದ್ದು, ಪೊಲೀಸರೂ ಒಂದು ಹಂತದಲ್ಲಿ ಬೇರೆಯೇ ಅಭಿಪ್ರಾಯಕ್ಕೆ ಬಂದಿದ್ದಾರೆ. ಲಕ್ಷ್ಮಣ್ ನಿಮ್ಮ ಹಾಗೆಯೇ ಕಾಣಿಸಿದ ಕಾರಣ ವಿಚಾರಿಸಲು ಬಂದೆವು. ನೀವು ವಾಪಾಸ್ ಹೋಗಿ ಎಂದು ಪೊಲೀಸರು ಹೇಳಿದ್ದಾರೆ. ವಾಪಾಸ್ ಹೋಗೊ ವೇಳೆ, ಜೋರಾಗಿ ಲಕ್ಷ್ಮಣ್ ಎಂದು ಇನ್ಸ್ ಪೆಕ್ಟರ್ ಕೂಗಿದ್ದಾರೆ. ಕೂಡಲೇ ಹಾಂ… ಎಂಬ ಪ್ರತ್ಯುತ್ತರ ವಿಜಯಲಕ್ಷ್ಮೀ ಬಾಯಿಯಿಂದ ಬಂದಿದೆ!.

ಪತಿಯ ವೇಷ ನೋಡಿ ಮೂರ್ಛೆ ಹೋದ ಪತ್ನಿ
ಪೊಲೀಸರಿಗೆ ಎಲ್ಲವೂ ಖಾತ್ರಿಯಾಗಿ ಐಜೂರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. 2017ರಲ್ಲಿ ರಾಮನಗರ ಬಿಟ್ಟು ಹೋಗಿದ್ದ ಲಕ್ಷ್ಮಣ್ ಲಿಂಗ ಪರಿವರ್ತನೆ ಮಾಡಿಸಿಕೊಂಡಿರುವುದು ತಿಳಿದುಬಂದಿದೆ. ಆತನನ್ನು ಕಂಡು ತನಿಖೆ ನಡೆಸುತ್ತಿದ್ದ ಪೊಲೀಸರೇ ಶಾಕ್‌ ಆಗಿದ್ದಾರೆ. ಬಳಿಕ ಕುಟುಂಬಸ್ಥರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ. ಠಾಣೆಗೆ ಆಗಮಿಸಿದಾಗ ಗಂಡ ಹೆಣ್ಣಾಗಿ ಪರಿವರ್ತನೆ ಆಗಿದ್ದನ್ನು ಕಂಡು ಪತ್ನಿ ಮೂರ್ಛೆ ಹೋಗಿದ್ದಾರೆ. ಇನ್ನು ತಂದೆಯ ಅವತಾರ ಕಂಡ ಪುಟ್ಟ ಮಕ್ಕಳು ಏನು ನಡೆಯುತ್ತಿದೆ ಎನ್ನುವುದನ್ನೂ ತಿಳಿಯದಂತಾಗಿದ್ದಾರೆ. ಅದೇ ರೀತಿ ಅಳಿಯನ ಅವತಾರ ಕಂಡು ಮಾವ ಪೇಚಾಡಿ ಮಗಳ ಬಾಳು ಹಾಳಾಯಿತು ಎಂದು ಕಣ್ಣೀರಿಟ್ಟಿದ್ದಾರೆ.

‘ನಿನಗೆ ಹೆಂಡತಿ ಮಕ್ಕಳು ಬೇಡವೇ” ಎಂದು ಪ್ರಶ್ನಿಸಿದಾಗ, ‘ನನಗೆ ನನ್ನ ತೃತೀಯ ಲಿಂಗಿಗಳ ಕುಟುಂಬವೇ ಇಷ್ಟ. ಹೆಂಡತಿ ಮಕ್ಕಳು ಬೇಡ, ನಿಮ್ಮ ತಂಟೆಗೆ ಬರುವುದಿಲ್ಲ. ನನ್ನನ್ನು ಬಿಟ್ಟು ಬಿಡಿ’ ಎಂದು ಬೇಡಿಕೊಂಡಿದ್ದಾನೆ. ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡು ನಾಪತ್ತೆ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com