40 ವರ್ಷದ ತಾಯಿಯನ್ನೇ ಕೊಂದ 17 ವರ್ಷದ ಮಗ; ಪೊಲೀಸರಿಗೆ ಶರಣು

ಕ್ಷುಲ್ಲಕ ವಿಚಾರಕ್ಕೆ ತನ್ನ 40 ವರ್ಷದ ತಾಯಿಯನ್ನೇ ಕೊಂದ 17 ವರ್ಷದ ಮಗನೋರ್ವ ಕೊಲೆ ಬಳಿಕ ಪೊಲೀಸರಿಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ತನ್ನ 40 ವರ್ಷದ ತಾಯಿಯನ್ನೇ ಕೊಂದ 17 ವರ್ಷದ ಮಗನೋರ್ವ ಕೊಲೆ ಬಳಿಕ ಪೊಲೀಸರಿಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಕೆಆರ್ ಪುರಂ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಕ್ಷುಲ್ಲಕ ವಿಚಾರಕ್ಕೆ ತಾಯಿಯೊಂದಿಗೆ ಜಗಳವಾಡಿಗ ಮಗ ಕೋಪದಿಂದ ಆಕೆಯನ್ನು ಕೊಂದು ಹಾಕಿದ್ದಾನೆ. ಇಂದು ಬೆಳಗ್ಗೆ 7.30ರ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮೂಲಗಳ ಪ್ರಕಾರ, ಡಿಪ್ಲೊಮಾ ವಿದ್ಯಾರ್ಥಿಯಾಗಿರುವ 17 ವರ್ಷದ ಬಾಲಕ ತನ್ನ ತಾಯಿ ನೇತ್ರಾ ಅವರ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದು ಹಾಕಿದ್ದಾನೆ. ಬಳಿಕ ಭಯಗೊಂಡು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, "ವಿಚಾರಣೆಯ ಸಮಯದಲ್ಲಿ, ತನ್ನ ತಾಯಿ ತನ್ನನ್ನು ಸರಿಯಾಗಿ ನೋಡಿಕೊಂಡಿಲ್ಲ ಮತ್ತು ಸರಿಯಾಗಿ ಆಹಾರವನ್ನು ನೀಡುತ್ತಿರಲಿಲ್ಲ ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಶುಕ್ರವಾರ ಬೆಳಿಗ್ಗೆ, ಅವನು ಕಾಲೇಜಿಗೆ ಹೋಗುವಾಗ, ಅವನ ತಾಯಿ ಅವನನ್ನು ಗದರಿಸಿದ್ದರಿಂದ ಅವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಕೋಪದ ಭರದಲ್ಲಿ ಆಕೆಯ ತಲೆಗೆ ಲೋಹದ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ. ತಲೆಗೆ ಬಿದ್ದ ತೀವ್ರ ಪೆಟ್ಟಿನಿಂದ ಆಕೆ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಅಂತೆಯೇ ಸದ್ಯಕ್ಕೆ, ನಾವು ಕೊಲೆ ಪ್ರಕರಣವನ್ನು ದಾಖಲಿಸಿದ್ದು, ಅಪ್ರಾಪ್ತ ಯುವಕನನ್ನು ಬಂಧಿಸಿದ್ದೇವೆ. ಹುಡುಗನಿಗೆ ಒಬ್ಬ ಅಕ್ಕ ಇದ್ದಾಳೆ, ಅವಳು ಜಾರ್ಜಿಯಾದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಕರಣದ ತನಿಖೆ ನಡೆಯುತ್ತಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com