ಕಳೆದ ವರ್ಷ ಬೆಂಗಳೂರಿನಲ್ಲಿ ಮಹಿಳೆಯರು, ಮಕ್ಕಳ ಮೇಲಿನ ಅಪರಾಧ ಹೆಚ್ಚಳ

2022ಕ್ಕೆ ಹೋಲಿಸಿದರೆ ಕಳೆದ ವರ್ಷ ಮಹಿಳೆಯರು, ಮಕ್ಕಳು, ಕೊಲೆ, ಡಕಾಯಿತಿ, ದರೋಡೆ ಮತ್ತು ವಾಹನ ಹಾಗೂ ಮನೆ ಕಳ್ಳತನದ ಅಪರಾಧಗಳು ಹೆಚ್ಚಾಗಿವೆ ಎಂದು ಪೊಲೀಸ್ ಕಮಿಷನರ್ ಕಚೇರಿ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.
ಪೊಲೀಸ್ (ಸಾಂಕೇತಿಕ ಚಿತ್ರ)
ಪೊಲೀಸ್ (ಸಾಂಕೇತಿಕ ಚಿತ್ರ)

ಬೆಂಗಳೂರು: 2022ಕ್ಕೆ ಹೋಲಿಸಿದರೆ ಕಳೆದ ವರ್ಷ ಮಹಿಳೆಯರು, ಮಕ್ಕಳು, ಕೊಲೆ, ಡಕಾಯಿತಿ, ದರೋಡೆ ಮತ್ತು ವಾಹನ ಹಾಗೂ ಮನೆ ಕಳ್ಳತನದ ಅಪರಾಧಗಳು ಹೆಚ್ಚಾಗಿವೆ ಎಂದು ಪೊಲೀಸ್ ಕಮಿಷನರ್ ಕಚೇರಿ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.

ಉತ್ತರ ವಿಭಾಗದಲ್ಲಿ ಹೆಚ್ಚಿನ ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದು, ಆಗ್ನೇಯ ಮತ್ತು ವೈಟ್‌ಫೀಲ್ಡ್ ವಿಭಾಗಗಳು ನಂತರದ ಸ್ಥಾನದಲ್ಲಿವೆ. ಸೆಂಟ್ರಲ್ ವಿಭಾಗದಲ್ಲಿ ಅತೀ ಕಡಿಮೆ ಸೈಬರ್ ಅಪರಾಧಗಳು ವರದಿಯಾಗಿವೆ. ಆದರೆ ಜೂಜಾಟದ ಪ್ರಕರಣಗಳು ಹೆಚ್ಚಾಗಿವೆ. ಸುಮಾರು 1,700 ಪುರುಷರು ಮತ್ತು 658 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ. ಒಟ್ಟು, 2,916 ಪುರುಷರು ಮತ್ತು 574 ಮಹಿಳೆಯರು ವಿವಿಧ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಕಮಿಷನರ್ ಕಚೇರಿ ತಿಳಿಸಿದೆ.

ನಗರದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಕಳೆದ ವರ್ಷ 3,260 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 3,121 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 2022 ರಲ್ಲಿ ಈ ಪ್ರಕರಣಗಳ ಸಂಖ್ಯೆ 2,630 ಇತ್ತು ಮತ್ತು ಅದರಲ್ಲಿ 2,545 ಪ್ರಕರಣ ಇತ್ಯರ್ಥಪಡಿಸಲಾಗಿತ್ತು. 

ಮಹಿಳೆಯರ ವಿರುದ್ಧದ ಒಟ್ಟು ಅಪರಾಧಗಳಲ್ಲಿ, 1,135 ಕಿರುಕುಳ(IPC 354) ಪ್ರಕರಣಗಳಾಗಿದ್ದು, ಅದರಲ್ಲಿ 1,004 ಪ್ರಕರಣಗಳು ಪತ್ತೆಯಾಗಿವೆ. 2022ರಲ್ಲಿ 731 ಕಿರುಕುಳ ಪ್ರಕರಣಗಳು ದಾಖಲಾಗಿದ್ದು, 688 ಪ್ರಕರಣಗಳು ಪತ್ತೆಯಾಗಿವೆ. 2023 ರಲ್ಲಿ 176 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಮತ್ತು ಎಲ್ಲವನ್ನೂ ಪತ್ತೆಹಚ್ಚಲಾಗಿದೆ. 2022 ರಲ್ಲಿ, 152 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

2023 ರಲ್ಲಿ 631 ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 588 ಪ್ರಕರಣಗಳು ಪತ್ತೆಯಾಗಿವೆ. 2022 ರಲ್ಲಿ, 561 ಪ್ರಕರಣಗಳು ದಾಖಲಾಗಿವೆ ಮತ್ತು 537 ಪ್ರಕರಣಗಳು ಪತ್ತೆಯಾಗಿದೆ. 

2023 ರಲ್ಲಿ 560 ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ(ಪೋಕ್ಸೊ) ಅಡಿಯಲ್ಲಿ ದಾಖಲಾಗಿವೆ. ಅದರಲ್ಲಿ 538 ಪತ್ತೆಯಾಗಿವೆ. 2022ರಲ್ಲಿ 480 ಪೋಕ್ಸೊ ಪ್ರಕರಣಗಳು ದಾಖಲಾಗಿದ್ದು, 477 ಪ್ರಕರಣಗಳನ್ನು ಬಗೆಹರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com