ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ನಡುವಲ್ಲೇ ಫಲಪುಷ್ಪ ಪ್ರದರ್ಶನಕ್ಕೆ ಸಸ್ಯಕಾಶಿ ಲಾಲ್ ಬಾಗ್ ಸಜ್ಜಾಗುತ್ತಿದೆ.
ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆವತಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸುತ್ತಿದ್ದು, ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ‘ವಿಶ್ವಗುರು ಬಸವಣ್ಣ’ ಅವರ ಹೂವಿನ ಪ್ರತಿಕೃತಿ ಕಣ್ಮನ ಸೆಳೆಯಲಿದೆ.
ಗಣರಾಜ್ಯೋತ್ಸವದ ಅಂಗವಾಗಿ 2024ರ ಜನವರಿ 18 ರಿಂದ 28ರವರೆಗೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ.
12 ನೇ ಶತಮಾನದಲ್ಲಿ ಬಸವಣ್ಣನವರು ವಚನಗಳ ಮೂಲಕ ಸಮಾಜದಲ್ಲಿ ಕ್ರಾಂತಿ ಮಾಡಿದ್ದರು. ಅಂತಹ ವಚನ ಸಾಹಿತ್ಯವನ್ನು ಪುಷ್ಪಗಳಲ್ಲಿ ಅರಳಿಸಲು ತೋಟಗಾರಿಕೆ ಇಲಾಖೆ ಸಿದ್ದತೆ ನಡೆಸುತ್ತಿದೆ.
ಲಾಲ್‌ಬಾಗ್‌ನ ಜಂಟಿ ನಿರ್ದೇಶಕ ಎಂ ಜಗದೀಶ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿ ಲಿಂಗ ತಾರತಮ್ಯ ಹಾಗೂ ಮೂಢನಂಬಿಕೆಗಳನ್ನು ವಿರೋಧಿಸಿದ್ದರು. ಬಸವಣ್ಣನವರ ಚಿಂತನೆ, ಕಾಯಕ ವೈಖರಿಗಳು ಇಂದಿನ ಸಮಾಜಕ್ಕೆ ಮಾದರಿ. ಆದ್ದರಿಂದ, ಈ ಬಾರಿ ಬಸವಣ್ಣ ಮತ್ತು ‘ವಚನ ಸಾಹಿತ್ಯ’ದ ಕುರಿತು ಪುಷ್ಪ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಫಲಪುಷ್ಪ ಪ್ರದರ್ಶನಕ್ಕೆ ಒಟ್ಟು ವೆಚ್ಚ 2.75 ಕೋಟಿ ರೂ.ಆಗುತ್ತಿದ್ದು, ಪುಷ್ಪ ಪ್ರದರ್ಶನದ ವೆಚ್ಚ, ಪ್ರವೇಶ ಶುಲ್ಕವನ್ನು ಇನ್ನೂ ನಿರ್ಧರಿಸಬೇಕಿದೆ. ಫಲಪುಷ್ಪ ಪ್ರದರ್ಶನದ ವೇಳೆ ಸ್ವಚ್ಛತೆ ಕಾಪಾಡುವ ಕುರಿತು ಮುಂದಿನ ಮೂರು ದಿನಗಳಲ್ಲಿ ಉನ್ನತ ಅಧಿಕಾರಿಗಳು, ಪರಿಸರ ತಜ್ಞರು, ಬಿಬಿಎಂಪಿ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆಂದು ತಿಳಿಸಿದರು.
ಇದೇ ವೇಳೆ ಸಾರ್ವಜನಿಕರು ಮೆಟ್ರೋವನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಸ್ಮಾರ್ಟ್ ಪಾರ್ಕಿಂಗ್ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡರು.
Advertisement