18 ಶಾಸಕರ ಅಮಾನತು ಖಂಡಿಸಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ಸ್ಪೀಕರ್ ವರ್ತನೆ- ಬಿ.ವೈ ವಿಜಯೇಂದ್ರ ಕಿಡಿ

ಜನಪ್ರತಿನಿಧಿಯನ್ನು 6 ತಿಂಗಳ ಕಾಲ ಅಮಾನತು ಮಾಡಿ, ವಿಧಾನಸೌಧದ ಮೊಗಸಾಲೆಗೂ ಬರಬಾರದೆಂದು ಆದೇಶ ಮಾಡಿದ್ದಾರೆ.
BJP Protest
ಬಿಜೆಪಿ ಪ್ರತಿಭಟನೆ
Updated on

ಬೆಂಗಳೂರು: ಸ್ಪೀಕರ್ ಅವರು ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದ್ದಾರೆ.

ಬಿಜೆಪಿಯ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿದ ಕ್ರಮವನ್ನು ಖಂಡಿಸಿ ಬೆಂಗಳೂರಿನ ವಿಧಾನ ಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯ 18 ಶಾಸಕರ ಅಮಾನತು ಕ್ರಮ ಸಂವಿಧಾನಬಾಹಿರ ಎಂದು ಆಕ್ಷೇಪಿಸಿದರು.

ಜನಪ್ರತಿನಿಧಿಯನ್ನು 6 ತಿಂಗಳ ಕಾಲ ಅಮಾನತು ಮಾಡಿ, ವಿಧಾನಸೌಧದ ಮೊಗಸಾಲೆಗೂ ಬರಬಾರದೆಂದು ಆದೇಶ ಮಾಡಿದ್ದಾರೆ. ಸ್ಪೀಕರ್ ಅವರು ಖಂಡಿತವಾಗಿ ಆಡಳಿತ ಪಕ್ಷದ ಕೈಗೊಂಬೆಯಾಗಿ ಹಾಗೂ ಮುಖ್ಯಮಂತ್ರಿಗಳನ್ನು ತೃಪ್ತಿಪಡಿಸಲು ಕಾನೂನು ಬಾಹಿರವಾಗಿ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿ ಈ ರೀತಿ ಆದೇಶ ಮಾಡಿದ್ದಾರೆ ಎಂದು ಟೀಕಿಸಿದರು.

ಅಮಾನತು ಹಿಂಪಡೆಯುವುದಾಗಿ ಹೇಳಿಕೆ ನೀಡಿದ್ದ ಸ್ಪೀಕರ್ ಅವರು ಯಾತಕ್ಕೋಸ್ಕರ ಕಾಯುತ್ತಿದ್ದಾರೆ ಎಂದು ಪ್ರಶ್ನಿಸಿದರು. ತಮ್ಮ ನಿರ್ಣಯ ಸಂವಿಧಾನವಿರೋಧಿ ಎಂಬುದು ಸ್ಪೀಕರ್ ಅವರಿಗೂ ಅರ್ಥವಾಗಿದೆ. ಆದರೂ ಕೂಡ ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಸ್ಪೀಕರ್ ಅವರು ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದು ಮತದಾರರಿಗೆ ಮಾಡಿದ ಅವಮಾನ ಎಂದರಲ್ಲದೆ, 18 ಶಾಸಕರ ಅಮಾನತನ್ನು ತಕ್ಷಣ ಹಿಂದಕ್ಕೆ ಪಡೆಯಲು ಆಗ್ರಹಿಸಿದರು. ಅಮಾನತು ಹಿಂಪಡೆಯುವ ವರೆಗೆ ಬಿಜೆಪಿಯ ಶಾಸಕರು ಕಮಿಟಿ ಮೀಟಿಂಗ್‍ನಲ್ಲಿ ಭಾಗವಹಿಸುವುದಿಲ್ಲ ಎಂದು ಪಕ್ಷದ ನಿರ್ಧಾರವನ್ನು ತಿಳಿಸಿದರು.

BJP Protest
18 ಶಾಸಕರ ಅಮಾನತು ಆದೇಶ ಹಿಂಪಡೆಯುವಂತೆ ಸ್ಪೀಕರ್​ಗೆ ಅಶೋಕ್ ಪತ್ರ: ವಿಜಯೇಂದ್ರ ಜೊತೆಗಿನ ಮುಸುಕಿನ ಗುದ್ದಾಟ ಬಟಾ ಬಯಲು?

ರಾಜ್ಯಪಾಲರ ಭೇಟಿ- ಆರ್.ಅಶೋಕ್: ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಹಿಂದೆ ಸ್ಪೀಕರ್ ಸ್ಥಾನದಲ್ಲಿದ್ದ ಮಂಗಳೂರಿನ ಯೋಗೀಶ್ ಭಟ್ ಅವರನ್ನು ಎಳೆದಾಡಿ ಮೈಕಿನಿಂದ ಹೊಡೆದಿದ್ದರು. ಧರ್ಮೇಗೌಡರು ತಮ್ಮನ್ನು ಎಳೆದಾಡಿದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿದ್ದರಾಮಯ್ಯನವರು ಪೊಲೀಸ್ ಕಮೀಷನರ್ ಬ್ಯಾಡ್ಜ್ ಕಿತ್ತು ಹಾಕಿ, ಬಾಗಿಲನ್ನು ಕಾಲಿನಲ್ಲಿ ಒದ್ದಿದ್ದರು ಎಂದು ನೆನಪಿಸಿಕೊಂಡರು. ನಮ್ಮ ನ್ಯಾಯಯುತ ಹೋರಾಟ ಮುಂದುವರಿಯಲಿದೆ. ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ ಎಂದು ಪ್ರಕಟಿಸಿದರು.

ನಮ್ಮ 18 ಶಾಸಕರನ್ನು ಅಮಾನತು ಮಾಡಿದ್ದೀರಿ. ಸದನ ನಡೆಯದೆ ಇರುವಾಗ ಸ್ಪೀಕರ್ ಪೀಠದಲ್ಲಿ ಕುಳಿತು ನಿಮ್ಮ ಸಂಬಂಧಿಗಳು, ಧರ್ಮಗುರುಗಳ ಜೊತೆ ಫೋಟೊ ತೆಗೆಸಿಕೊಳ್ಳುವುದು ನ್ಯಾಯವೇ? ಇದು ಪ್ರಜಾಪ್ರಭುತ್ವವೇ? ಇಂಥ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ಮುಸ್ಲಿಮರಿಗೆ ಶೇ. 4 ಮೀಸಲಾತಿ ಮಸೂದೆ ವಿಚಾರದಲ್ಲಿ ಸ್ಪೀಕರ್ ಕುತಂತ್ರ ಮಾಡಿದ್ದಾರೆ. ಸ್ಪೀಕರ್ ಹುದ್ದೆ ಧರ್ಮ- ಮತೀಯ- ಪಕ್ಷಾಧಾರಿತವಲ್ಲ ಎಂದು ವಿವರಿಸಿದರು. ಸ್ಪೀಕರ್ ಖಾದರ್ ಅವರ ನಡೆ ಪ್ರಶ್ನಾರ್ಥಕವಾಗಿದೆ ಎಂದು ಟೀಕಿಸಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com