
ಬೆಂಗಳೂರು: ಬೇಸಿಗೆ ಧಗೆಯಿಂದ ಹೈರಾಣಾಗಿದ್ದ ಬೆಂಗಳೂರಿಗರಿಗೆ ಗುರುವಾರ ಬೆಳಗ್ಗೆಯೇ ವರುಣನ ದರ್ಶನವಾಗಿದ್ದು, ನಗರಾದ್ಯಂತ ಇಂದು ಭಾರಿ ಮಳೆಯಾಗುತ್ತಿದೆ.
ಬೆಂಗಳೂರಿನ ಒಳ ಮತ್ತು ಹೊರವಲಯಗಳಲ್ಲಿ ಗುರುವಾರ ಬೆಳಗ್ಗೆಯೇ ಮಳೆಯಾಗಿದೆ. ಪೀಣ್ಯ, ದಾಸರಹಳ್ಳಿ, ಹೆಸರಘಟ್ಟ ಸುತ್ತಮುತ್ತ ವರುಣ ತಂಪೆರೆದಿದ್ದಾನೆ. ಇಡೀ ನಗರದಲ್ಲಿ ಬೆಳ್ಳಂಬೆಳಗ್ಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.
ಇಂದು ಬೆಳಗ್ಗೆಯಷ್ಟೇ ಹವಾಮಾನ ಇಲಾಖೆ ಬೆಂಗಳೂರು ನಗರಕ್ಕೆ ಗುಡುಗು ಸಿಡಿಲು ಸಹಿತ ಮಳೆಯಾಗಲಿದೆ ಎಂದು ವರದಿ ನೀಡಿತ್ತು. ಇದರ ಬೆನ್ನಲ್ಲೇ ಬೆಂಗಳೂರಿನಾದ್ಯಂತ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುತ್ತಿದೆ.
ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ವಿಧಾನಸೌಧ, ಶಿವಾಜಿ ನಗರ, ಹೆಚ್ಎಸ್ ಆರ್ ಲೇಔಟ್, ಕೆಆರ್ ಮಾರುಕಟ್ಟೆ, ಚಾಮರಾಜಪೇಟೆ, ಬಸವನಗುಡಿ, ಜಯನಗರ, ಒಆರ್ ಆರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ.
IMD ಯೆಲ್ಲೋ ಅಲರ್ಟ್ ಘೋಷಣೆ
ಏಪ್ರಿಲ್ 3, 2025 ರಂದು ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಇಂದು ನಗರಕ್ಕೆ ಯೆಲ್ಲೋ ಅಲರ್ಟ್ ನೀಡಿದೆ. ತಾಪಮಾನವು 3 ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಅಲ್ಲದೆ, ಬಿರುಗಾಳಿ ಬೀಸುವ ಸಾಧ್ಯತೆಯೂ ಇದೆ. ನಗರದಲ್ಲಿ ಕನಿಷ್ಠ ತಾಪಮಾನವು ಬೆಳಿಗ್ಗೆ 20 ಡಿಗ್ರಿ ಸೆಲ್ಸಿಯಸ್ ಮತ್ತು ಮಧ್ಯಾಹ್ನ 33 ಡಿಗ್ರಿ ಸೆಲ್ಸಿಯಸ್ ಇರಬಹುದು. ವಾತಾವರಣದಲ್ಲಿ ತೇವಾಂಶವು ಸುಮಾರು 54 ಪ್ರತಿಶತದಷ್ಟು ಇರಲಿದೆ.
ಚಂಡಮಾರುತ ಕಾರಣ?
ಇನ್ನು ನಗರದಲ್ಲಿನ ದಿಢೀರ್ ಮಳೆಗೆ ಚಂಡಮಾರುತ ಕಾರಣ ಎಂದು ಹೇಳಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಇದೆ. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಒಡಿಶಾ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಚಂಡಮಾರುತವಾಗಿ ಬದಲಾಗಬಹುದು. ಇದರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ. ಮಿಂಚು ಮತ್ತು ಗಂಟೆಗೆ 40-50 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.
ನಾಳೆ ಕರ್ನಾಟಕದ ಇತರೆ ಜಿಲ್ಲೆಗಳಲ್ಲೂ ಮಳೆ
ಬೆಂಗಳೂರು ಮಾತ್ರವಲ್ಲದೇ ಶುಕ್ರವಾರ ಬೆಂಗಳೂರು ನಗರದಲ್ಲಿ ಮಳೆ ಮುನ್ಸೂಚನೆ ಇದ್ದು, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರದಲ್ಲಿಯೂ ವೇಗದ ಗಾಳಿಯ ಜೊತೆ ಗುಡುಗು ಸಹಿತ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ನಗರದಲ್ಲಿ ಮುಂದಿನ ಸೋಮವಾರದವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Advertisement