
ಬೆಂಗಳೂರು: ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರಿನ ಸಂಸ್ಕರಣೆ ಮತ್ತು ಮರು ಬಳಕೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಜಲಮಂಡಳಿಯು 470 ಎಂಎಲ್‌ಡಿ ಸಾಮರ್ಥ್ಯದ 26 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು(ಎಸ್‌ಟಿಪಿ) ನಿರ್ಮಿಸಲು ಮುಂದಾಗಿದ್ದು, ವರ್ಷಾಂತ್ಯಕ್ಕೆ ಕಾರ್ಯರಂಭ ಮಾಡಲು ಸಜ್ಜಾಗಿದೆ.
ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿ, ಎಸ್‌ಟಿಪಿ ನಿರ್ಮಾಣ ಕಾಮಗಾರಿಗಳು ವಿವಿಧ ಹಂತಗಳಲ್ಲಿ ನಡೆಯುತ್ತಿದ್ದು, ನಗರದಲ್ಲಿ ಉತ್ಪತ್ತಿಯಾಗುವ ಸಂಪೂರ್ಣ 2,255 ಎಂಎಲ್‌ಡಿ ತ್ಯಾಜ್ಯ ನೀರನ್ನು ಸಂಸ್ಕರಿಸುವುದು ಇದರ ಗುರಿಯಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುಕ ಅಸ್ತಿತ್ವದಲ್ಲಿರುವ ಎಲ್ಲಾ ಎಸ್‌ಟಿಪಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರವೂ ಇದನ್ನು ಗುರುತಿಸಿದ್ದು, 23 ಎಸ್‌ಟಿಪಿಗಳಿಗೆ ಫೈವ್ ಸ್ಟಾರ್ ರೇಟಿಂಗ್ ನೀಡಿದೆ. ಉಳಿದವು ನಾಲ್ಕು ಸ್ಟಾರ್ ಮತ್ತು ಮೂರು ಸ್ಟಾರ್ ಗಳ ವರ್ಗಕ್ಕೆ ಸೇರಿವೆ. ಎಸ್‌ಟಿಪಿಗಳನ್ನು ಪರಿಣಾಮಕಾರಿಯಾಗಿ ನಡೆಸಲು ಜಲ ಮಂಡಳಿಯು ಕೇಂದ್ರ ಸರ್ಕಾರದಿಂದ 103 ಕೋಟಿ ರೂ.ಗಳ ಪ್ರೋತ್ಸಾಹ ಧನವನ್ನು ಪಡೆದಿದೆ. ಎಸ್‌ಟಿಪಿಗಳಲ್ಲಿನ ಸಂಸ್ಕರಣೆಯ ಗುಣಮಟ್ಟ ಉತ್ತಮವಾಗಿದ್ದು ಐಟಿ ಪಾರ್ಕ್‌ಗಳಲ್ಲಿರುವ ಜನರನ್ನು ಸಂಸ್ಕರಿಸಿದ ನೀರನ್ನು ಬಳಸುವಂತೆ ಮನವೊಲಿಸಬಹುದಾಗಿದೆ. ಸಂಸ್ಕರಿರಿದ ನೀರನ್ನು ವಾಣಿಜ್ಯ ಕ್ಷೇತ್ರ ಮತ್ತು ನಿರ್ಮಾಣ ಉದ್ದೇಶಗಳಿಗೆ ಬಳಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಕೆರೆಗಳಿಗೆ ಸಂಸ್ಕರಿಸಿದ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಬಿಡಬ್ಲ್ಯೂಎಸ್‌ಎಸ್‌ಬಿ ರಾಷ್ಟ್ರಕ್ಕೆ ಮಾದರಿಯಾಗಿದೆ. ನಗರದ ಒಳಗೆ ಹಾಗೂ ಹೊರಗಿನ ಕೆರೆಗಳನ್ನು ತುಂಬಿಸಲು ಶೇ.80ರಷ್ಟು ಸಂಸ್ಕರಿಸಿದ ನೀರು ಬಳಸಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲು ಸಹಾಯವಾಗುತ್ತದೆ. ಕಬ್ಬನ್ ಪಾರ್ಕ್, ರಾಜಭವನ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿಯೂ ಸಂಸ್ಕರಿಸಿದ ನೀರನ್ನು ಬಳಕೆ ಮಾಡಲಾಗುತ್ತಿದೆ.
ನಗರದ ಕೆಲವು ಭಾಗಗಳಲ್ಲಿ ಅನಧಿಕೃತ ಭೂಗತ ಒಳಚರಂಡಿ ಸಂಪರ್ಕ ರಚನೆ ಕುರಿತು ವರದಿಯಾಗಿದ್ದರಿಂದ, ಬಿಡಬ್ಲ್ಯೂಎಸ್‌ಎಸ್‌ಬಿ ದಂಡ ವಿಧಿಸುತ್ತಿದ್ದು, ಈ ವರೆಗೂ ಒಟ್ಟಾರೆ ರೂ. 108 ಕೋಟಿ ದಂಡವನ್ನು ಸಂಗ್ರಹಿಸಿದೆ.
ಮಂಡಳಿಯು ಅಪಾರ್ಟ್‌ಮೆಂಟ್ ಮತ್ತು ಇತರ ಸ್ಥಳಗಳಿಂದ 471 ಅನಧಿಕೃತ ವಾಣಿಜ್ಯ ಸಂಪರ್ಕಗಳನ್ನು ಕ್ರಮಬದ್ಧಗೊಳಿಸಿದೆ. 40,000 ಅನಧಿಕೃತ ಕುಡಿಯುವ ನೀರಿನ ಸಂಪರ್ಕಗಳನ್ನೂ ಕೂ ಕ್ರಮಬದ್ಧಗೊಳಿಸಿದೆ. ಈ ಪ್ರಕ್ರಿಯೆ ಹೀಗೆಯೇ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
Advertisement