ದೆಹಲಿಯಲ್ಲಿ CM-DCM: ನೂತನ ಕರ್ನಾಟಕ ಭವನ 'ಕಾವೇರಿ' ಲೋಕಾರ್ಪಣೆ; ಇಂದು ರಾಹುಲ್ ಗಾಂಧಿ ಭೇಟಿ, MCL ಹುದ್ದೆ ಭರ್ತಿ ಕುರಿತು ಚರ್ಚೆ

ಶಾಸಕರು, ಸಂಸದರು ಮತ್ತು ಇತರ ರಾಜತಾಂತ್ರಿಕರಿಗೆ ವಸತಿ ಒದಗಿಸುವ ಈ ಭವನವು ಕರ್ನಾಟಕದ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದೆ.
ಕರ್ನಾಟಕ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು.
ಕರ್ನಾಟಕ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು.
Updated on

ಬೆಂಗಳೂರು: ಕರ್ನಾಟಕ ಭವನ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ದೆಹಲಿಗೆ ಭೇಟಿ ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ನಿನ್ನೆಯಷ್ಟೇ ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ದೆಹಲಿಯಲ್ಲಿ 138 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕರ್ನಾಟಕ ಭವನವನ್ನು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕರು, ಸಂಸದರು ಮತ್ತು ಇತರ ರಾಜತಾಂತ್ರಿಕರಿಗೆ ವಸತಿ ಒದಗಿಸುವ ಈ ಭವನವು ಕರ್ನಾಟಕದ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಈ ಹಿಂದೆ ಇದು ಮೈಸೂರು ಭವನವಾಗಿತ್ತು. ದೆಹಲಿಯಲ್ಲಿ ಒಟ್ಟು ಮೂರು ಕರ್ನಾಟಕ ಭವನಗಳು ಇವೆ. ಸುಭದ್ರ ರಾಜ್ಯ ನಿರ್ಮಾಣದಲ್ಲಿ ಎಲ್ಲರ ಭಾಗ ವಹಿಸುವಿಕೆ ಅಗತ್ಯವಾಗಿದ್ದು, ಕೇಂದ್ರ ಸರ್ಕಾರದ ಬಳಿ ಹಲವು ಕೆಲಸ ಕಾರ್ಯಗಳಿಗಾಗಿ ಅಧಿಕಾರಿಗಳು, ಸಚಿವರು, ಶಾಸಕರು ದೆಹಲಿಗೆ ಬರಬೇಕಾಗುತ್ತದೆ. ಇವರೆಲ್ಲರಿಗೂ ಕರ್ನಾಟಕ ಭವನ ತಂಗಲು ಸಹಾಯವಾಗುತ್ತದೆ ಎಂದರು. ಅಲ್ಲದೆ, ಕರ್ನಾಟಕ ಭವನ-2ರ ಪುನರ್‌ ನಿರ್ಮಾಣ ಮಾಡುವ ಯೋಜನೆಯೂ ಇದೆ ಎಂದು ತಿಳಿಸಿದರು.

ಕೊರೋನಾ ಸೇರಿ ಹಲವು ಸಂಕಷ್ಟಗಳಿಂದಾಗಿ ಕಟ್ಟಡ ಕಾಮಗಾರಿಗೆ ವಿಳಂಬವಾಯಿತು. ಈಗ ಭವ್ಯ ಕಟ್ಟಡ ನಿರ್ಮಾಣ ಗೊಂಡಿದೆ. ಕರ್ನಾಟಕ ಭವನ ಬೆಳೆದು ಬಂದ ಇತಿಹಾಸ ಕುರಿತು ಬೋರ್ಡ್ ಹಾಕಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯವರು ಸೂಚಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಜೊತೆಗೆ, ಖರ್ಗೆ ಯವರ ಸಲಹೆಯಂತೆ ಶಾಸಕರು ತಂಗಲು ಇನ್ನಷ್ಟು ಅನುಕೂಲಗಳನ್ನು ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ​​ಮುನಿಯಪ್ಪ, ನವದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿಗಳಾದ ಟಿ.ಬಿ. ಜಯಂದ್ರ ಮತ್ತು ಪ್ರಕಾಶ್ ಹುಕ್ಕೇರಿ, ರಾಜ್ಯಸಭಾ ಸದಸ್ಯರಾದ ಜೈರಾಮ್ ರಮೇಶ್ ಮತ್ತು ಸುಧಾ ನಾರಾಯಣಮೂರ್ತಿ, ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್, ಕರ್ನಾಟಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕರ್ನಾಟಕ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಮೈಸೂರು, ಶಿರಾಡಿ ಘಾಟ್ ಸೇರಿ 12 ಯೋಜನೆಗಳ ಮಂಜೂರಾತಿಗೆ ಮನವಿ

ಇಂದು ರಾಹುಲ್ ಜೊತೆ ಚರ್ಚೆ

ಇನ್ನು ದೆಹಲಿಯಲ್ಲೇ ತಂಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲಿದ್ದು, ಭೇಟಿ ವೇಳೆ ಪರಿಷತ್‌ನಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳ ಭರ್ತಿ ಮತ್ತು ಸಂಪುಟ ವಿಸ್ತರಣೆ ಕುರಿತಂತೆ ಚರ್ಚೆ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಭವಿಷ್ಯದಲ್ಲಿ ಸರ್ಕಾರ ಮತ್ತು ಪಕ್ಷದಲ್ಲಿ ಬದಲಾವಣೆಯ ವಿಷಯದಲ್ಲಿ ಈ ಭೇಟಿ ನಿರ್ಣಾಯಕವಾಗಿರುವುದರಿಂದ, ಇಬ್ಬರೂ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಹೈಕಮಾಂಡ್ ನಾಯಕರೊಂದಿಗೆ ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪರಿಷತ್‌ನಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳಿಗೆ ಅನುಮೋದನೆ ಸಿಗುವುದು ಖಚಿತ. ಆದರೆ, ಏಪ್ರಿಲ್ 8 ಮತ್ತು ಏಪ್ರಿಲ್ 9 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿರುವ ಎಐಸಿಸಿ ಅಧಿವೇಶನದ ನಂತರವೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ನಾಮನಿರ್ದೇಶನದಲ್ಲಿ ಯಾವುದೇ ಪುನರಾವರ್ತನೆ ಇರುವುದಿಲ್ಲ ಎನ್ನಲಾಗುತ್ತಿದ್ದು, ಪಕ್ಷದ ಸಂಘಟನೆಗೆ ಸಹಾಯ ಮಾಡುವ ನಾಯಕರನ್ನು ನಾಮನಿರ್ದೇಶನ ಮಾಡುವ ಮೂಲಕ ಹೈಕಮಾಂಡ್ ಅಚ್ಚರಿ ಮೂಡಿಸುವ ಸಾಧ್ಯತೆಯಿದೆ-ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ಕರ್ನಾಟಕ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಂಪುಟ ಪುನಾರಚನೆ ಪ್ರಸ್ತಾಪ: ಕುತೂಹಲ ಕೆರಳಿಸಿದ ಸಿದ್ದರಾಮಯ್ಯ ದೆಹಲಿ ಭೇಟಿ

ಮೇ 20, 2025 ರಂದು ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕೆಲ ನಾಯಕರು ದೆಹಲಿಯಲ್ಲೇ ಮೊಕ್ಕಾಂ ಹೂಡಿದ್ದು, ಲಾಬಿ ಆರಂಭಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಹಿರಿಯ ನಾಯಕ ಮತ್ತು ಎಂಎಲ್‌ಸಿ ಸಲೀಮ್ ಅಹ್ಮದ್ ಅವರು ಮಾತನಾಡಿ, ಈ ಬಾರಿ ಹೈಕಮಾಂಡ್ ಸಂಪುಟ ಪುನರ್ರಚನೆಗೆ ಅನುಮೋದನೆ ನೀಡುವ ವಿಶ್ವಾಸವಿದೆ. 2023 ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ನಾನು ಸಂಪುಟದಲ್ಲಿ ಸೇರಬೇಕಿತ್ತು. ಆದರೆ, ಒಪ್ಪಂದ ಮಾಡಿಕೊಂಡೆ. ಈ ಬಾರಿ ಸಚಿವನಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರಬಲ ಸ್ಪರ್ಧಿಗಳಾಗಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯ ಬಗ್ಗೆಯೂ ಮಾತುಕತೆ ನಡೆದಿತ್ತು. ಆದರೆ, ಖರ್ಗೆ ಅವರು ಸ್ಥಳೀಯ ಸಂಸ್ಥೆಗಳು ಮತ್ತು ಬಿಬಿಎಂಪಿ ಚುನಾವಣೆಗಳನ್ನು ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಸಬೇಕೆಂದು ಬಯಸಿದ್ದರು. ಹೀಗಾಗಿ ಈ ಚುನಾವಣೆಗಳ ನಂತರವೇ ಬದಲಾವಣೆಯನ್ನು ಪರಿಗಣಿಸಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ಪರಿಷತ್ ಹುದ್ದೆ ಭರ್ತಿ ಅಷ್ಟೇ ಅಲ್ಲದೆ, ಜಾತಿಗಣತಿ ಕುರಿತಂತೆಯೂ ಸಿದ್ದರಾಮಯ್ಯ ಅವರು ಹೈಕಮಾಂಡ್ ಜೊತೆ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ,

ಜನಗಣತಿ ವರದಿಯ ಕುರಿತ ಚರ್ಚೆಯನ್ನು ಎರಡು ಬಾರಿ ಸಂಪುಟದಲ್ಲಿ ಪ್ರಸ್ತಾಪಿಸಲಾಗಿತ್ತು. ವರದಿಯನ್ನು ಸಾರ್ವಜನಿಕ ವಲಯಕ್ಕೆ ಬಿಡುಗಡೆ ಮಾಡುವುದರಿಂದ ಒಕ್ಕಲಿಗರು ಮತ್ತು ವೀರಶೈವ ಲಿಂಗಾಯತರು ಸೇರಿದಂತೆ ಇತರೆ ಜಾತಿಗಳು ವಿರೋಧ ವ್ಯಕ್ತಪಡಿಸುವುದರಿಂದ ಅದು ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೈಕಮಾಂಡ್‌ಗೆ ತಿಳಿಸಿದ್ದರು. ಆದರೆ ಅಹಿಂದ ಸಮುದಾಯಗಳು ವರದಿ ಮಂಡಿಸಬೇಕೆಂದು ಆಗ್ರಹಿಸುತ್ತಿವೆ, ಈ ಬಗ್ಗೆ ಹೈಕಮಾಂಡ್‌ಗೆ ಮನವರಿಕೆ ಮಾಡಲು ಮುಂದಾಗಿವೆ ಎಂದು ಹಿರಿಯ ಶಾಸಕರೊಬ್ಬರು ತಿಳಿಸಿದ್ದಾರೆ.

ಇದಲ್ಲದೆ, ಮುಖ್ಯಮಂತ್ರಿಗಳ ಆಪ್ತ ರಾಜಣ್ಣ ಅವರ ಮೇಲಿನ ಹನಿಟ್ರ್ಯಾಪ್ ಪಿತೂರಿ ಕುರಿತಂತೆಯೂ ಸಿದ್ದರಾಮಯ್ಯ ಅವರು ಹೈಕಮಾಂಡ್ ಜೊತೆ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com