
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸುವ ಮೂಲಕ ಪ್ರತಿಪಕ್ಷ ಬಿಜೆಪಿ ಜನಾಕ್ರೋಶದ ಕಹಳೆ ಮೊಳಗಿಸಿದ್ದು, ಈ ನಡುವಲ್ಲೇ ಬೆಲೆ ಏರಿಕೆ ನಿರ್ಧಾರವನ್ನು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿದೆ.
ಬೆಲೆ ಏರಿಕೆಗೆ ಕೇಂದ್ರದ ನೀತಿಗಳೇ ಕಾರಣ. ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ, ದೇಶದೆಲ್ಲೆಡೆ ಇದೇ ರೀತಿಯ ಪರಿಸ್ಥಿತಿ ಇದೆ. ಒಕ್ಕೂಟ ರಚನೆಯಲ್ಲಿ, ರಾಜ್ಯ ಮತ್ತು ಕೇಂದ್ರವು ಉತ್ತಮ ಸಂಬಂಧವನ್ನು ಹೊಂದಿರಬೇಕು. ಅದು ಉತ್ತಮವಾಗಿಲ್ಲದಿದ್ದಾಗ ಬೆಲೆ ಏರಿಕೆಯಾಗುತ್ತದೆ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಅವರು ಹೇಳಿದ್ದಾರೆ.
ತೆರಿಗೆ ವಿಚಾರದಲ್ಲಿ ಕೇಂದ್ರ ಸರ್ಕಾರ ನಮ್ಮ ಪಾಲಿನ ಹಣ ನೀಡುತ್ತಿಲ್ಲ. ಹೀಗಾಗಿಯೇ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡರು.
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣ ಸಿಗದಿದ್ದಾಗ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ರಾಜ್ಯ ಸರ್ಕಾರವು ಕೆಲವು ಸರಕುಗಳ ಬೆಲೆಗಳನ್ನು ಅನಿವಾರ್ಯವಾಗಿ ಹೆಚ್ಚಿಸಬೇಕಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 51,000 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದು. ಬೆಲೆ ಏರಿಕೆಯೂ ಗ್ಯಾರಂಟಿ ಯೋಜನೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಾತನಾಡಿ, ರೈತರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರ ಹಾಲಿನ ಬೆಲೆಯನ್ನು ಲೀಟರ್‌ಗೆ 4 ರೂ.ಗಳಷ್ಟು ಹೆಚ್ಚಿಸಿದೆ ಎಂದು ಹೇಳಿದರು. ಇದರ ವಿರುದ್ಧ ಪ್ರತಿಭಟಿಸುತ್ತಿರುವ ಬಿಜೆಪಿ ರೈತ ವಿರೋಧಿ ಎಂದು ತಿಳಿಸಿದರು.
ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲು ಮತ್ತು ಮೊಸರಿನ ಬೆಲೆಗಳು ಇನ್ನೂ ಕಡಿಮೆಯಾಗಿದೆ. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಹೇಳಿದರು.
ಇದೇ ವೇಳೆ ನೀರಿನ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನೀರಿನ ದರವನ್ನು ಲೀಟರ್‌ಗೆ ಒಂದು ಪೈಸೆ ಹೆಚ್ಚಿಸುವುದು ಅನಿವಾರ್ಯವಾಗಿದೆ. ನಾಗರಿಕರಿಗೆ ಹೊರೆಯಾಗದಂತೆ ಬಿಡಬ್ಲ್ಯೂಎಸ್‌ಎಸ್‌ಬಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಆರ್‌ಡಿಪಿಆರ್ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯಿಸಿ, ಬೆಲೆ ಏರಿಕೆಗೆ ಎನ್‌ಡಿಎ ಸರ್ಕಾರದ ಆರ್ಥಿಕ ನೀತಿಗಳೇ ಕಾರಣ ಎಂದು ಆರೋಪಿಸಿದರು.
Advertisement