ಮೆಟ್ರೋ, ಬಸ್, ಕಸ, ಹಾಲು, ವಿದ್ಯುತ್ ಆಯ್ತು ಇದೀಗ ಕುಡಿಯುವ ನೀರಿನ ದರವೂ ಏರಿಕೆ..!

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ನೀರಿನ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮಂಡಳಿಯ ಅಧಿಕಾರಿಗಳು ಸಿದ್ಧತೆಗಳನ್ನು ನಡೆಸುತ್ತಿದ್ದು, ದರ ಹೆಚ್ಚಳ ಶೀಘ್ರದಲ್ಲೇ ಜಾರಿಗೆ ಬರಲಿದೆ.
Bengaluru Water Crisis
ಸಂಗ್ರಹ ಚಿತ್ರ
Updated on

ಬೆಂಗಳೂರು: ಮೆಟ್ರೋ, ಬಸ್, ಕಸ, ಹಾಲು, ಡೀಸೆಲ್ ದರ ದರ ಹೆಚ್ಚಳದ ನಂತರ ಇದೀಗ ಮತ್ತೊಂದು ದರ ಏರಿಕೆಗೆ ಸರ್ಕಾರ ಸಿದ್ದತೆ ನಡೆಸಿದ್ದು, ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ದರ ಪ್ರತಿ ಲೀಟರ್ ನೀರಿಗೆ 1 ಪೈಸೆಯಷ್ಟು ಬೆಲೆ ಹೆಚ್ಚಿಸಲು ಮುಂದಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ನೀರಿನ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮಂಡಳಿಯ ಅಧಿಕಾರಿಗಳು ಸಿದ್ಧತೆಗಳನ್ನು ನಡೆಸುತ್ತಿದ್ದು, ದರ ಹೆಚ್ಚಳ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

ಬಿಡಬ್ಲ್ಯೂಎಸ್‌ಎಸ್‌ಬಿ ನೀರಿನ ದರವನ್ನು ಲೀಟರ್‌ಗೆ ಒಂದು ಪೈಸೆ ಹೆಚ್ಚಿಸುವುದು ಅನಿವಾರ್ಯವಾಗಿದ್ದು, ಜನರ ಮೇಲೆ ಹೊರೆಯಾಗದಂತೆ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಬಿಡಬ್ಲ್ಯೂಎಸ್‌ಎಸ್‌ಬಿ ತೀವ್ರ ಒತ್ತಡದಲ್ಲಿದೆ. ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಈ ಹೆಚ್ಚಳ ಅತ್ಯಗತ್ಯವಾಗಿದೆ. ಜಲಮಂಡಳಿಗೆ ವಾರ್ಷಿಕ 1 ಸಾವಿರ ಕೋಟಿ ರೂ. ನಷ್ಟವುಂಟಾಗುತ್ತಿದೆ. ಹಾಗೆಯೇ, ಮುಂದಿನ ಹಂತದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದರೆ ದರ ಏರಿಕೆ ಅನಿವಾರ್ಯವಾಗಿದೆ. ಅಲ್ಲದೆ, ಜನರೂ ನೀರಿನ ಪ್ರಾಮುಖ್ಯತೆ ಅರಿಯಬೇಕು. ಕಳೆದ 13 ವರ್ಷಗಳಲ್ಲಿ ಯಾವುದೇ ಹೆಚ್ಚಳವಾಗದ ಕಾರಣ ಸುಂಕವನ್ನು ಲೀಟರ್‌ಗೆ 7 ಪೈಸೆ ಹೆಚ್ಚಿಸಲು ಮಂಡಳಿ ಬಯಸಿತ್ತು. ಆದರೆ, ಕೇವಲ ಒಂದು ಪೈಸೆ ದರ ಹೆಚ್ಚಿಸುವಂತೆ ಅಧಿಕಾರಿಗಳ ಮನವೊಲಿಸಲಾಗಿದೆ ಎಂದರು.

ಹಾಲು ದರ ಹೆಚ್ಚಳ ಕುರಿತು ಮಾತನಾಡಿ, ಹಾಲು ಉತ್ಪಾದಕ ರೈತರಿಗೆ ಹೆಚ್ಚಿನ ದರ ನೀಡುವ ಉದ್ದೇಶದಿಂದ ದರ ಹೆಚ್ಚಳ ಮಾಡಲಾಗಿದೆ. ಬೆಲೆ ಏರಿಕೆ ನಂತರವೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲು, ಮೊಸರಿನ ಬೆಲೆ ಬಹಳ ಕಡಿಮೆ ಇದೆ. ದರ ಹೆಚ್ಚಳದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಯವರು ರೈತ ವಿರೋಧಿಗಳು ಎಂದು ದೂರಿದರು.

Bengaluru Water Crisis
Watch | ಕುಡಿಯುವ ನೀರಿನ ಬೆಲೆ ಏರಿಕೆ ಅನಿವಾರ್ಯ; 1 ಲೀಟರ್ ಗೆ 1 ಪೈಸೆ ಹೆಚ್ಚಳ?

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com