
ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಲೈಂಗಿಕ ಕಿರುಕುಳದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಏಪ್ರಿಲ್ 3ರಂದು ಬೆಳಗಿನ ಜಾವ ಸುಮಾರು 1:55 ಗಂಟೆಗೆ ವ್ಯಕ್ತಿಯೊಬ್ಬ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ದೃಶ್ಯಾವಳಿಯಲ್ಲಿ, ಆರೋಪಿಯು ಹಿಂದಿನಿಂದ ಇಬ್ಬರು ಯುವತಿಯರ ಬಳಿಗೆ ಬಂದು, ನಂತರ ಒಬ್ಬ ಯುವತಿಯನ್ನು ತಬ್ಬಿ ಆಕೆಯ ಖಾಸಗಿ ಅಂಗಗಳನ್ನು ಮುಟ್ಟಿ ಅನುಚಿತವಾಗಿ ವರ್ತಿಸಿ ಪರಾರಿಯಾಗುತ್ತಿರುವುದು ಕಾಣಬಹುದು.
ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಸೆಕ್ಷನ್ 354 ಬಿ (ಮಹಿಳೆಯ ವಿವಸ್ತ್ರಗೊಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸ್ಥಳೀಯ ನಿವಾಸಿಯೊಬ್ಬರು ದೂರು ದಾಖಲಿಸಿದ್ದಾರೆ.
ವೀಡಿಯೊದಲ್ಲಿ, ವ್ಯಕ್ತಿಯೋರ್ವ ಇಬ್ಬರು ಯುವತಿಯರನ್ನು ಸ್ವಲ್ಪ ದೂರದವರೆಗೆ ಹಿಂಬಾಲಿಸುತ್ತಿರುವುದನ್ನು ಕಾಣಬಹುದು. ನಂತರ ಅವನು ಇದ್ದಕ್ಕಿದ್ದಂತೆ ಮುಂದಕ್ಕೆ ಧಾವಿಸಿ, ಅವರಲ್ಲಿ ಒಬ್ಬಳನ್ನು ಬಿಗಿಯಾಗಿ ತಬ್ಬಿ ಓಡಿಹೋಗುತ್ತಾನೆ. ಘಟನೆ ಬಳಿಕ ಗಾಬರಿಗೊಂಡ ಇಬ್ಬರು ಯುವತಿಯರು ಆ ಪ್ರದೇಶದಿಂದ ದೂರ ಹೋಗುತ್ತಾರೆ.
ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತೆ ಇನ್ನೂ ಔಪಚಾರಿಕ ದೂರು ದಾಖಲಿಸಿಲ್ಲವಾದರೂ, ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಗುರುತಿಸಲು ಅಧಿಕಾರಿಗಳು ಪ್ರದೇಶ ಮತ್ತು ಸುತ್ತಮುತ್ತಲಿನ ಅನೇಕ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಯಾವುದೇ ದೂರು ಬರದಿದ್ದರೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
Advertisement