
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಕೆರೆಗಳಿಗೆ ಕಲುಷಿತ ನೀರು ಹರಿಯುವುದನ್ನು ತಡೆಯಲು ಮತ್ತು ಎಲ್ಲಾ ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸಲು ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೋಮವಾರ ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕೆರೆಗಳ ಸಂರಕ್ಷಣೆ, ಕಸ ವಿಲೇವಾರಿ ಮತ್ತು ಇತರ ವಿಷಯಗಳ ಕುರಿತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡ ಶಿವಕುಮಾರ್ ಅವರು, "ಸಂಸ್ಕರಿತ ನೀರಿನಿಂದ ಕೆರೆಗಳನ್ನು ತುಂಬಿಸುವ ಜವಾಬ್ದಾರಿಯನ್ನು ಬಿಡಬ್ಲ್ಯೂಎಸ್ಎಸ್ಬಿಗೆ ವಹಿಸಲು ನಿರ್ಧರಿಸಲಾಗಿದೆ" ಎಂದು ಹೇಳಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚನೆ ನೀಡಿದರು.
ಇದೇ ವೇಳೆ ಕಟ್ಟಡ ನಿರ್ಮಾಣಗಳ ತ್ಯಾಜ್ಯವನ್ನು ಸಾಗಿಸುವ ಟ್ರಕ್‌ಗಳಿಗೆ ಜಿಪಿಎಸ್ ಅಳವಡಿಸುವಂತೆ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಶವಂತಪುರ ವೃತ್ತದ ಬಳಿ ರಸ್ತೆಯ ಬದಿಯಲ್ಲಿ ಸುಮಾರು 10-15 ಲೋಡ್ ನಿರ್ಮಾಣ ತ್ಯಾಜ್ಯವನ್ನು ಸುರಿಯಲಾಗಿರುವುದನ್ನು ನಾನು ಮತ್ತು ಪಾಲಿಕೆ ಆಯುಕ್ತರು ನೋಡಿದ್ದೇವೆ. ಆದ್ದರಿಂದ, ನಿರ್ಮಾಣ ತ್ಯಾಜ್ಯವನ್ನು ಸಾಗಿಸುವ ಎಲ್ಲಾ ಟ್ರಕ್‌ಗಳು ಮತ್ತು ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕು. ಈ ಟ್ರಕ್‌ಗಳು ಕಸವನ್ನು ಎಲ್ಲಿ ಸಂಗ್ರಹಿಸುತ್ತವೆ ಮತ್ತು ಎಲ್ಲಿ ವಿಲೇವಾರಿ ಮಾಡುತ್ತವೆ ಎಂಬುದನ್ನು ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕೆಂದು ನಿರ್ದೇಶನ ನೀಡಿದರು.
Advertisement