
ಬೆಂಗಳೂರು: ಕಳೆದ ಬುಧವಾರ ವಿಧಾನಸೌಧದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಚನ್ನರಾಯಪಟ್ಟಣದ ನಲ್ಲೂರು ಗ್ರಾಮದ 28 ವರ್ಷದ ವ್ಯಕ್ತಿ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ಯತ್ನಿಸಿದ ಶೇಖರ್ (28) ಅವರಿಗೆ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಬದುಕುಳಿಯು ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಶೇಖರ್ ಅವರ ತಾಯಿ ಸುಜಾತಾ ಹಾಗೂ ಸಹೋದರ ಅಭಿಲಾಷ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬಾರ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿ ಶೇಖರ್ ವಿರುದ್ಧ ದೂರು ನೀಡಿದ್ದರು, ಬಳಿಕ ಪೊಲೀಸರು ದೌರ್ಜನ್ಯ ಎಸಗಿದ್ದು, ಇದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಹೇಳಿದ್ದಾರೆ.
ಮಾರ್ಚ್ 9 ರಂದು ಬಾರ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿ 585 ರೂ. ಬಿಲ್ ಪಾವತಿಸಿಲ್ಲ ಎಂದು ಶೇಖರ್ ವಿರುದ್ಧ ದೂರು ನೀಡಿದ್ದರು. ನಂತರ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸರು ಮತ್ತು ಗೃಹರಕ್ಷಕ ಸಿಬ್ಬಂದಿ ಶೇಖರ್'ಗೆ ಥಳಿಸಿದ್ದಾರೆ.
ಶೇಖರ್ ಮದ್ಯ ಸೇವಿಸಿ ಯುಪಿಐ ಮೂಲಕ ಬಿಲ್ ಪಾವತಿಸಿದ್ದ. ಆದರೆ ಪಾವತಿ ಮಾಡಿಲ್ಲ ಎಂದು ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಶೇಖರ್ ಬಳಿ 10,000 ರೂ. ಕೇಳಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಶಾಲಾ ಮೈದಾನಕ್ಕೆ ಕರೆದೊಯ್ದು ಥಳಿಸಿದ್ದಾರೆ.
ನನ್ನ ಸಹೋದರನಿಗೆ ಗಾಯಗಳಾಗಿತ್ತು. ಬಳಿಕ ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಸ್ಥಳೀಯ ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಯಾವುದೇ ಕ್ರಮ ಕೈಗೊಳ್ಳದ ಕಾರಣ, ವಿಧಾನಸೌಧ ಬಳಿ ಬಂದು ವಿಷ ಸೇವಿಸಿದ್ದಾನೆಂದು ಶೇಖರ್ ಸಹೋದರ ಅಭಿಲಾಷ್ ಹೇಳಿದ್ದಾರೆ.
ಶೇಖರ್ ಅವರ ತಂದೆ ಎಂ. ರಾಮಕೃಷ್ಣ ಬೆಂಗಳೂರಿನ ಸಂಚಾರ ಪೊಲೀಸ್ ಠಾಣೆಯೊಂದರಲ್ಲಿ ಗೃಹರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾನು ಪೊಲೀಸ್ ಇನ್ಸ್‌ಪೆಕ್ಟರ್ ಮಗನೆಂದು ಹೇಳಿಕೊಂಡು ಶೇಖರ್ ಮದ್ಯ ಸೇವಿಸಿದ್ದಾನೆ. ಬಳಿಕ ಬಿಲ್ ಪಾವತಿಸಿಲ್ಲ. ಪೊಲೀಸರು ಬಾರ್‌ಗೆ ತಲುಪಿದಾಗ, ಆತ ಸಂಪೂರ್ಣವಾಗಿ ಕುಡಿದ ಮತ್ತಿನಲ್ಲಿದ್ದ. ಠಾಣೆಗೆ ಕರೆದೊಯ್ಯುವಾಗ ಆತಂಕದ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿದ. ಪೊಲೀಸರು ಶಾಲಾ ಮೈದಾನದ ಬಳಿ ವಾಹನ ನಿಲ್ಲಿಸಿ ಪೋಷಕರಿಗೆ ಮಾಹಿತಿ ನೀಡಿ ಮನೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ದೌರ್ಜನ್ಯದ ಆರೋಪಗಳು ಸುಳ್ಳು ಮತ್ತು ಆಧಾರರಹಿತ ಎಂದು ಹೇಳಿದ್ದಾರೆ.
Advertisement