
ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಸಿದ್ದಯ್ಯನಪುರದಲ್ಲಿರುವ ಖಾಸಗಿ ಸ್ವತ್ತು ರಾಜಮನೆತನದ ಹೆಸರಿನಲ್ಲಿದ್ದರೂ ಕೂಡ ಅದನ್ನು ಕಿತ್ತುಕೊಳ್ಳುವುದಿಲ್ಲ. ಹೀಗಾಗಿ ಅಲ್ಲಿನ ನಿವಾಸಿಗಳು ಚಿಂತಿಸುವ ಅಗತ್ಯವಿಲ್ಲ ಎಂದು ಮೈಸೂರು ರಾಜಮನೆತನದ ಪ್ರಮೋದಾ ದೇವಿ ಒಡೆಯರ್ ಸೋಮವಾರ ಹೇಳಿದ್ದಾರೆ.
1950ರಲ್ಲಿ ಹಿಂದಿನ ಮೈಸೂರು ಮಹಾರಾಜರು ಮತ್ತು ಭಾರತ ಸರ್ಕಾರದ ನಡುವೆ ನಡೆದ ಒಪ್ಪಂದದ ಪ್ರಕಾರ, ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳಲ್ಲಿ 4,500 ಎಕರೆಗೂ ಹೆಚ್ಚು ಜಮೀನು ಮಹಾರಾಜರಿಗೆ ಸೇರಿದ ಖಾಸಗಿ ಸ್ವತ್ತಾಗಿದೆ. ಈ ದಾಖಲೆಯನ್ನು ಆಧರಿಸಿ ಖಾಸಗಿ ಸ್ವತ್ತನ್ನು ಖಾತೆ ಮಾಡಿಕೊಡಲು ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಅಷ್ಟೆ ಎಂದು ತಿಳಿಸಿದ್ದಾರೆ.
ಖಾಸಗಿ ಸ್ವತ್ತಿನ ಜಮೀನುಗಳಿರುವ ಗ್ರಾಮಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡುವುದಾಗಿ ಜಿಲ್ಲಾಡಳಿತ ಘೋಷಿಸಿದ್ದರಿಂದ, ಚಾಮರಾಜನಗರದ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಮತ್ತು ಕರ್ನಾಟಕ ಸರ್ಕಾರದ ಇತರ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಭಯಭೀತರಾದ ಗ್ರಾಮಸ್ಥರು, ಈ ಸಮಸ್ಯೆಯನ್ನು ಪರಿಹರಿಸಲು ಜಿಲ್ಲಾಧಿಕಾರಿಗಳ ಮುಂದೆ ಸಾಲುಗಟ್ಟಿ ನಿಂತರು ಮತ್ತು ಮೈಸೂರು ಮಹಾರಾಜರು ತಮಗೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ ಎಂದಿದ್ದಾರೆ.
ಅರಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಚಾಮರಾಜೇಂದ್ರ ಒಡೆಯರ್ ಅವರು ಜಮೀನು ದಾನ ನೀಡಿರುವ ಬಗ್ಗೆ ಗೊತ್ತಿಲ್ಲ. ದಾನಪತ್ರ ಹಾಗೂ ದಾಖಲೆಗಳಿದ್ದರೆ ರೈತರು ತಂದುಕೊಡಲಿ. ಮಹಾರಾಜರು ಜಮೀನು ನೀಡಿದ್ದರೆ ಅದನ್ನು ಕಿತ್ತುಕೊಳ್ಳುವುದಿಲ್ಲ. ಗ್ರಾಮಸ್ಥರು ಈಗ ಅಥವಾ ಭವಿಷ್ಯದಲ್ಲಿ ಭಯಪಡುವ ಅಗತ್ಯವಿಲ್ಲ. ನಮ್ಮ ಹೆಸರಿನಲ್ಲಿ ಖಾತೆ ಬಂದರೂ, ಅವರು ಭಯಪಡುವ ಅಗತ್ಯವಿಲ್ಲ ಎಂದು ನಾನು ಅವರಿಗೆ ಭರವಸೆ ನೀಡುತ್ತಿದ್ದೇನೆ' ಎಂದರು.ಪ್ರಮೋದಾ
ಕಂದಾಯ ಗ್ರಾಮವಾಗಿ ಘೋಷಿಸದಂತೆ ಮಾರ್ಚ್ 29ರಂದು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಆದರೆ, ಅಲ್ಲಿನ ಜಿಲ್ಲಾಧಿಕಾರಿಯಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೈಸೂರು ಮಹಾರಾಜರು ಭೂಮಿಯನ್ನು ದಾನವಾಗಿ ನೀಡಿದ್ದರೆ, ಅದನ್ನು ಕಿತ್ತುಕೊಳ್ಳುವ ಅಗತ್ಯವಿದೆಯೇ? ಕಂದಾಯ ಗ್ರಾಮವನ್ನಾಗಿ ಮಾಡಲು ನಿರ್ಧರಿಸಿದಾಗ ಅದನ್ನು ನಮ್ಮ ಗಮನಕ್ಕೆ ತಂದಿದ್ದರೆ, ಈ ಆತಂಕ ಸೃಷ್ಟಿಯಾಗುತ್ತಿರಲಿಲ್ಲ ಎಂದು ತಿಳಿಸಿದ್ದರು.
ನಾನು ಪಟ್ಟಣದಿಂದ ದೂರದಲ್ಲಿದ್ದೆ ಮತ್ತು ಈ ವಿಷಯದ ಬಗ್ಗೆ ನನಗೆ ತಿಳಿದಿರಲಿಲ್ಲ. ಈಗ ನನಗೆ ವಿಚಾರ ತಿಳಿಯಿತು. ಸ್ಥಳೀಯರಲ್ಲಿ ಭಯ ಹುಟ್ಟಿಸಿದವರು ಯಾರು ಮತ್ತು ಅಲ್ಲಿ ಏನಾಯಿತು ಎಂದು ನನಗೆ ತಿಳಿದಿಲ್ಲ. ಯಾವುದೇ ಸಮಸ್ಯೆಗಳಿದ್ದರೂ ಗ್ರಾಮಸ್ಥರು ನಮ್ಮ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದು. ಯಾವುದೇ ಗೊಂದಲ ಮಾಡಿಕೊಳ್ಳಬಾರದು ಎಂದು ಹೇಳಿದರು.
ಜಮೀನು ನಮ್ಮ ಹೆಸರಿಗೆ ಬಂದರೂ ಕೂಡ ದಾನ ಪತ್ರ ಅಥವಾ ದಾಖಲೆಗಳನ್ನು ಗ್ರಾಮಸ್ಥರು ತೋರಿಸಿದರೆ, ಸರ್ಕಾರದ ಮಧ್ಯಸ್ಥಿಕೆ ಇಲ್ಲದೆಯೇ ಅವರಿಗೆ ಜಮೀನನ್ನು ಹೇಗೆ ಕೊಡಬೇಕೆಂಬುದು ನನಗೆ ಗೊತ್ತಿದೆ. ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಇದಕ್ಕಿಂತ ಹೆಚ್ಚಿನ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ಚಾಮರಾಜನಗರ ಜಿಲ್ಲೆಯಲ್ಲಿ ನಮಗೆ ಸೇರಿದ ಜಾಗವಿದೆ ಎಂದು ನಮ್ಮ ತಾಯಿ ಪತ್ರ ಬರೆದಿದ್ದಾರೆ. ಈ ಕಾರಣಕ್ಕೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ನನ್ನಿಂದ ಅಥವಾ ನನ್ನ ತಾಯಿಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಜಿಲ್ಲಾಧಿಕಾರಿ ಮೊದಲು ವರದಿ ನೀಡಲಿ. ಅದನ್ನು ಬಿಟ್ಟು ಕೆಲವು ಆತಂಕ ಸೃಷ್ಟಿ ಮಾಡಲು ಹೊರಟಿದ್ದಾರೆ. ಅಲ್ಲಿನ ಜನರಿಗೆ ನಮ್ಮಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
Advertisement