
ಕೊಪ್ಪಳ: ಅಂಜನಾದ್ರಿ ಬೆಟ್ಟದಲ್ಲಿ ರೋಪ್‌ವೇ ಕುರಿತು ಕೊಪ್ಪಳ ನಿವಾಸಿಗಳು ಮತ್ತು ಭಕ್ತರು ಕಂಡಿದ್ದ ದಶಕಗಳ ಕನಸು ಶೀಘ್ರದಲ್ಲೇ ನನಸಾಗಲಿದೆ. ಬೆಟ್ಟದಲ್ಲಿ ಮೂರು ರೋಪ್‌ವೇಗಳನ್ನು ನಿರ್ಮಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ.
ಹಂಪಿ ವಿರೂಪಾಕ್ಷ ದೇವಸ್ಥಾನದಿಂದ ಅಂಜನಾದ್ರಿ ಬೆಟ್ಟಗಳಿಗೆ ಒಂದು ರೋಪ್‌ವೇ ನಿರ್ಮಿಸಲು ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದ್ದು, ಉಳಿದ ಎರಡು ರೋಪ್ ವೇ ಗಳ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದ್ದಾರೆಂದು ತಿಳಿದುಬಂದಿದೆ.
ಬೆಟ್ಟದ ತುದಿಯಲ್ಲಿರುವ ಸಣ್ಣ ಕೊಳದ ಬಳಿ ಬೇಸ್ ಸ್ಟೇಷನ್ ನಿರ್ಮಿಸಲಾಗುವುದು. ಒಟ್ಟು 800 ಜನರು ರೋಪ್‌ವೇಗಳ ಮೂಲಕ ದೇವಾಲಯಕ್ಕೆ ಭೇಟಿ ನೀಡಬಹುದು, ಇದು ಬೆಟ್ಟದ ತುದಿಯನ್ನು ತಲುಪಲು 575 ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಾಗದ ಹಿರಿಯ ನಾಗರಿಕರು, ವಿಶೇಷ ಚೇತನರು, ಮಹಿಳೆಯರು ಮತ್ತು ಮಕ್ಕಳಿಗೆ ಸಹಾಯಕವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಮತ್ತು ವಿದೇಶಗಳಿಂದ ಅನೇಕ ಪ್ರವಾಸಿಗರು ಅಂಜನಾದ್ರಿ ಬೆಟ್ಟಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಅಂಜನಾದ್ರಿಗೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚಾಗಿದೆ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಸಾವಿರಾರು ಜನರು ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಆದರೆ, ದೇವರ ದರ್ಶನ ಪಡೆಯಲು ನೂರಾರು ಮೆಟ್ಟಿಲುಗಳನ್ನು ಹತ್ತಲು ಅನೇಕ ಭಕ್ತರು ಕಷ್ಟಪಡುತ್ತಿದ್ದಾರೆ. ಇತ್ತೀಚೆಗೆ ಮೆಟ್ಟಿಲುಗಳನ್ನು ಹತ್ತಿದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಶೀಘ್ರಗತಿಯಲ್ಲಿ ರೋಪ್‌ವೇ ನಿರ್ಮಾಣಕ್ಕೆ ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಇದರಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಅಂಜನಾದ್ರಿ ಬೆಟ್ಟಗಳಿಗೆ ಇತ್ತೀಚೆಗಷ್ಟೇ ಭೇಟಿ ನೀಡಿದ್ದು, ರೋಪ್‌ವೇ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ರೋಪ್‌ವೇ ಎಲ್ಲಿ ನಿರ್ಮಿಸಬೇಕು ಮತ್ತು ಅದರ ಸಾಧಕ-ಬಾಧಕಗಳ ನಿರ್ಧರಿಸಲು ಸ್ಥಳ ಪರಿಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಪ್ರಸ್ತುತ, ಅಂಜನಾದ್ರಿ ಬೆಟ್ಟದ ಎಡಭಾಗದಲ್ಲಿ ಬೇಸ್ ಸ್ಟೇಷನ್ ನಿರ್ಮಿಸಲು ಮತ್ತು ಮೇಲ್ಭಾಗದಲ್ಲಿ ಒಂದು ಸಣ್ಣ ಕೊಳದ ಬಳಿ ಲ್ಯಾಂಡಿಂಗ್ ಸ್ಟೇಷನ್ ನಿರ್ಮಿಸಲು ಇಲಾಖೆ ಯೋಜಿಸಿದೆ. ಆರಂಭಿಕ ಹಂತದಲ್ಲಿ ಒಟ್ಟು 450 ಮೀಟರ್ ರೋಪ್‌ವೇ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇವಾಲಯಕ್ಕೆ ಭೇಟಿ ನೀಡುವ ಭಕ್ತ ಅನಿಲ್ ಬಿಲ್ಗಿ ಎಂಬುವವರು ಮಾತನಾಡಿ, ಹಲವು ಮೆಟ್ಟಿಲುಗಳಿರುವುದರಿಂದ ರೋಪ್ ವೇ ನಿರ್ಮಾಣ ಕುರಿತು ಬಹಳ ಹಿಂದಿನಿಂದಲೂ ಬೇಡಿಕೆಯಿದೆ. ಹಿರಿಯ ನಾಗರಿಕರು ಮತ್ತು ಮಹಿಳೆಯರು ಸುಮಾರು ಆರು ನೂರು ಮೆಟ್ಟಿಲುಗಳನ್ನು ಹತ್ತುವುದು ಕಷ್ಟಕರವಾಗಿದೆ. ರೋಪ್‌ವೇಗಳು ನಿರ್ಮಾಣವಾದ ನಂತರ, ಅನೇಕ ಜನರು ಸುಲಭವಾಗಿ ಹನುಮನ ದರ್ಶನ ಪಡೆಯಬಹುದು ಎಂದು ಹೇಳಿದ್ದಾರೆ.
ಈ ನಡುವೆ ಒಂದು ವರ್ಷದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
Advertisement