
ಬೆಂಗಳೂರು: ಡೀಸೆಲ್ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಲಾರಿ ಮಾಲೀಕರು ಸೋಮವಾರ (ಏಪ್ರಿಲ್ 15) ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಅಗತ್ಯ ವಸ್ತುಗಳ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್‌ಗಳ ಸಂಘ (ಎಫ್‌ಕೆಎಸ್‌ಎಲ್‌ಒಎ) ತಿಳಿಸಿದೆ.
ಡೀಸೆಲ್ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳುವುದರ ಜೊತೆಗೆ ಇತರ ನಾಲ್ಕು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಮತ್ತು ಭಾರತದಾದ್ಯಂತ 60 ಕ್ಕೂ ಹೆಚ್ಚು ಇತರ ಸಾರಿಗೆ ಸಂಘಗಳು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ನೀಡಿವೆ ಎಂದು ಸಂಘ ತಿಳಿಸಿದೆ.
ಡೀಸೆಲ್ ಬೆಲೆಗಳನ್ನು ಹಿಂತೆಗೆದುಕೊಳ್ಳದಿದ್ದರೆ ಟ್ರಕ್ ನಿರ್ವಾಹಕರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ನಾವು ಒಂದು ವಾರಕ್ಕೂ ಹೆಚ್ಚು ಹಿಂದೆಯೇ ಸರ್ಕಾರಕ್ಕೆ ತಿಳಿಸಿದ್ದೆವು. ಆದರೆ, ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಂಘದ ಅಧ್ಯಕ್ಷ ಜಿ ಆರ್ ಷಣ್ಮುಗಪ್ಪ ಅವರು ಹೇಳಿದ್ದಾರೆ.
ಏಳು ತಿಂಗಳ ಅವಧಿಯಲ್ಲಿ ಎರಡು ಬಾರಿ ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಟ್ರಕ್ ನಿರ್ವಾಹಕರ ಮೇಲೆ ಹೊರೆಯನ್ನು ಹೇರಿದೆ. ರಾಜ್ಯ ಸರ್ಕಾರ ಸಾರಿಗೆ ವಲಯವನ್ನು ನಿರ್ಲಕ್ಷಿಸುತ್ತಿದೆ ಎಂದು ಸಂಘದ ಸದಸ್ಯರು ಹೇಳಿದ್ದಾರೆ.
ಹಾಲಿನ ಟ್ರಕ್‌ಗಳನ್ನು ಹೊರತುಪಡಿಸಿ, ಅಗತ್ಯ ವಸ್ತುಗಳು, ನಿರ್ಮಾಣ ಸಾಮಗ್ರಿಗಳು, ಪೆಟ್ರೋಲ್ ಟ್ಯಾಂಕರ್‌ಗಳು, ಎಲ್‌ಪಿಜಿ ಟ್ಯಾಂಕರ್‌ಗಳು ಮತ್ತು ಇತರ ಸರಕುಗಳನ್ನು ಸಾಗಿಸುವ ಎಲ್ಲಾ ಇತರ ಟ್ರಕ್‌ಗಳು ಏಪ್ರಿಲ್ 14 ರ ಮಧ್ಯರಾತ್ರಿಯಿಂದಲೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.ವಿಮಾನ ನಿಲ್ದಾಣ ಟ್ಯಾಕ್ಸಿ ಸಂಘವೂ ನಮ್ಮ ಮುಷ್ಕರಕ್ಕೆ ಬೆಂಬಲ ನೀಡಿದ್ದು, ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿವೆ ಎಂದು ತಿಳಿಸಿದ್ದಾರೆ.
Advertisement