
ಬೆಂಗಳೂರು: ಮೂರು ದಿನಗಳ ದೀರ್ಘ ವಾರಾಂತ್ಯದ ರಜೆ ಬಳಿಕ ಮಂಗಳವಾರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಸಂಚಾರ ದಟ್ಟಣೆ ಎದುರಾಗಿತ್ತು.
ಈ ನಡುವೆ ಕೆಲ ರಸ್ತೆಗಳಲ್ಲಿ ವಾಹನಗಳು ಕೆಟ್ಟು ನಿಂತಿದ್ದು ಕೂಡ ವಾಹನಗಳ ಸಂಚಾರ ಮತ್ತಷ್ಟು ಹದಗೆಡುವಂತೆ ಮಾಡಿತ್ತು.
ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ನಿವಾಸಿಗಳು ಊರುಗಳಿಗೆ ಪ್ರಯಾಣಿಸಿದ್ದರು. ರಜೆ ಮುಗಿದ ಬಳಿಕ ನಗರಕ್ಕೆ ವಾಪಸ್ಸಾಗಿದ್ದು, ಸಂಚಾರ ದಟ್ಟಣೆ ಹೆಚ್ಟಳಕ್ಕೆ ಕಾರಣವಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ (ಸಂಚಾರ)ಯೊಬ್ಬರು ಹೇಳಿದ್ದಾರೆ.
ದೀರ್ಘ ಕಾಲದ ವಾರಾಂತ್ಯ ರಜೆ ಬಳಿಕ ನಗರದಲ್ಲಿ ಸಂಚಾರ ದಟ್ಟಣೆ ಎದುರಾಗುವುದು ಸಾಮಾನ್ಯವಾಗಿ ಹೋಗಿದೆ ಎಂದು ತಿಳಿಸಿದ್ದಾರೆ.
ಹೈ ಗ್ರೌಂಡ್ಸ್ ಸಂಚಾರ ಪೊಲೀಸ್ ಮಿತಿಯಲ್ಲಿ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯ ರೈಲ್ವೆ ಸೇತುವೆಯ ಕೆಳಗಿರುವ ಕಬ್ಬಿಣದ ರಚನೆಗೆ ತುರ್ತು ದುರಸ್ತಿ ಅಗತ್ಯವಿತ್ತು. ಹೀಗಾಗಿ ಬಿಬಿಎಂಪಿ ಸಿಬ್ಬಂದಿ ಕೆಲಸ ಪ್ರಾರಂಭಿಸಿದ್ದರು. ಇದರಿಂದಾಗಿ ತೀವ್ರ ಸಂಚಾರ ದಟ್ಟಣೆ ಎದುರಾಗಿತ್ತು.
ಜಯಮಹಲ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನ 3.30 ರಿಂದ ರಾತ್ರಿ 9 ರವರೆಗೆ ತೀವ್ರ ದಟ್ಟಣೆ ಎದುರಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಹರಸಾಹಸ ಪಡಬೇಕಾಯಿತು. ಬಳಿಕ ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಪ್ರಯಾಣಿಕರಿಗೆ ಎಚ್ಚರಿಕೆಯ ಸಲಹೆಗಳನ್ನು ನೀಡಿದರು.
ಇದಲ್ಲದೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೆಬ್ಬಾಳ ಮತ್ತು ಗೊರಗುಂಟೆಪಾಳ್ಯ ರಸ್ತೆಗಳಲ್ಲಿಯೂ ಸಂಚಾರ ದಟ್ಟಣೆ ಎದುರಾಗಿ, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.
Advertisement