
ದಾವಣಗೆರೆ: ದಾವಣಗೆರೆಯಲ್ಲಿ ನಡುರಸ್ತೆಯಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು 6 ಮಂದಿಯನ್ನು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ತಾವರೆಕೆರೆಯ ಚಾಲಕ ಮೊಹಮ್ಮದ್ ನಯಾಜ್ (32), ಜ್ಯೂಸ್ ಅಂಗಡಿ ಮಾಲೀಕ ಮೊಹಮ್ಮದ್ ಗೌಸ್ಪೀರ್ (45), ಬೈಕ್ ಮೆಕ್ಯಾನಿಕ್ ಚಂದಪೀರ್ (35), ಇನಾಯತುಲ್ಲಾ (51), ಮೀನುಗಾರರಾದ ದಸ್ತಗೀರ್ (24) ಮತ್ತು ರಸೂಲ್ ಟಿಆರ್ (42) ಎಂದು ಗುರ್ತಿಸಲಾಗಿದೆ.
ಮಹಿಳೆ ಮೇಲೆ ಹಲ್ಲೆ ಮಾಡಿದ್ದ ವಿಡಿಯೋ ಏಪ್ರಿಲ್ 13ರಂದು ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಹಲ್ಲೆಗೊಳಗಾದ ಮಹಿಳೆಯ ಸಂಬಂಧಿಕರೊಬ್ಬರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆಗೆ ಇಳಿದ ಪೊಲೀಸರು, ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಮತ್ತಷ್ಟು ಆರೋಪಿಗಳನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಹಲ್ಲೆಗೊಳಗಾದ ಸಂತ್ರಸ್ತ ಮಹಿಳೆ ಶಬೀನಾ ಏಪ್ರಿಲ್ 19ರಂದು ಚನ್ನಗಿರಿ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲಿದ್ದಾರೆ. ಹೇಳಿಕೆಯಲ್ಲಿ ಸಂಬಂಧಿ ನಸ್ರೀನ್ ಅವರನ್ನು ಮನೆಗೆ ಕರೆದುಕೊಂಡು ಹೋಗಲಾಗಿತ್ತು. ನಸ್ರೀನ್ ನೋಡಲು ಆಕೆಯ ಪತಿ ಫಯಾಸ್ ಬಂದಿದ್ದು, ಇದರಿಂದ ಪತಿ ಜಮೀಲ್ ಅಹ್ಮದ್ ಅಲಿಯಾಸ್ ಶಮೀರ್ ಕೆಂಡಾಮಂಡಲಗೊಂಡಿದ್ದರು. ಬಳಿಕ ತಾವರೆಕೆರೆಯ ಜಾಮೀಯಾ ಮಸೀದಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 9 ರಂದು ಮಸೀದಿಯಲ್ಲಿ ಮಾತುಕತೆ ನಡೆಸಲಾಯಿತು. ಮಾತುಕತೆ ಬಳಿಕ ಹೊರಗೆ ಬಂದಾಗ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ. ಪೈಪ್ ಮತ್ತು ಕೋಲುಗಳಿಂದ ಹಲ್ಲೆ ನಡೆಸಿದ್ದಾರೆಂದು ಹೇಳಿದ್ದಾರೆ.
ಘಟನೆಯ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ವೈರಲ್ ಬಳಿಕ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿ, ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 109(1), 189(2), 190(2), 191(3), 115(2), 118(1), 76, 352, 351(2) ಮತ್ತು 190 ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
Advertisement