ISRO ಮಾಜಿ ಅಧ್ಯಕ್ಷ ಕೆ ಕಸ್ತೂರಿರಂಗನ್ ಬೆಂಗಳೂರಿನಲ್ಲಿ ನಿಧನ

'ಏಪ್ರಿಲ್ 27ರಂದು ರಾಮನ್ ಸಂಶೋಧನಾ ಸಂಸ್ಥೆಯಲ್ಲಿ (RRI) ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆ ಕಸ್ತೂರಿರಂಗನ್
ಕೆ ಕಸ್ತೂರಿರಂಗನ್
Updated on

ಬೆಂಗಳೂರು: ಇಸ್ರೋದ ಮಾಜಿ ಅಧ್ಯಕ್ಷ ಮತ್ತು ಮಹತ್ವಾಕಾಂಕ್ಷೆಯ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಕೆ ಕಸ್ತೂರಿರಂಗನ್ ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವರಿಗೆ 84 ವರ್ಷ ವಯಸ್ಸಾಗಿತ್ತು.

'ಕಸ್ತೂರಿರಂಗನ್ ಅವರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಏಪ್ರಿಲ್ 27ರಂದು ರಾಮನ್ ಸಂಶೋಧನಾ ಸಂಸ್ಥೆಯಲ್ಲಿ (RRI) ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

NEPಯಲ್ಲಿನ ಶಿಕ್ಷಣ ಸುಧಾರಣೆಗಳ ಹಿಂದಿನ ವ್ಯಕ್ತಿ ಎಂದು ಕರೆಯಲ್ಪಡುವ ಕಸ್ತೂರಿರಂಗನ್ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಅಲ್ಲದೆ, ರಾಜ್ಯಸಭೆಯ ಸದಸ್ಯರಾಗಿ (2003-09) ಮತ್ತು ಭಾರತದ ಯೋಜನಾ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಸ್ತೂರಿರಂಗನ್ 2004ರ ಏಪ್ರಿಲ್ ನಿಂದ 2009 ರವರೆಗೆ ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್‌ ಸ್ಟಡೀಸ್ ಸಂಸ್ಥೆಯ ನಿರ್ದೇಶಕರಾಗಿದ್ದರು.

ಬಾಹ್ಯಾಕಾಶ ಕ್ಷೇತ್ರದಲ್ಲಿನ ಅತ್ಯುತ್ತಮ ಕೊಡುಗೆಗಳಿಗಾಗಿ ಕಸ್ತೂರಿರಂಗನ್ ಅವರಿಗೆ ಎಂಜಿನಿಯರಿಂಗ್‌ನಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ, ಏರೋಸ್ಪೇಸ್‌ನಲ್ಲಿ ಡಾ. ವಿಕ್ರಮ್ ಸಾರಾಭಾಯ್ ಪ್ರೇರಿತ್ ಪ್ರಶಸ್ತಿ, ಖಗೋಳಶಾಸ್ತ್ರದಲ್ಲಿ ಎಂಪಿ ಬಿರ್ಲಾ ಸ್ಮಾರಕ ಪ್ರಶಸ್ತಿ, ಅನ್ವಯಿಕ ವಿಜ್ಞಾನದಲ್ಲಿ ಎಂಎಂ ಚುಗನಿ ಸ್ಮಾರಕ ಪ್ರಶಸ್ತಿ, ವಿಜ್ಞಾನದಲ್ಲಿ ಎಚ್‌ಕೆ ಫಿರೋದಿಯಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಅಷ್ಟೇ ಅಲ್ಲದೆ, ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ಕೂಡ ಬಂದಿವೆ. ಖಗೋಳಶಾಸ್ತ್ರ, ಬಾಹ್ಯಾಕಾಶ ವಿಜ್ಞಾನ, ಬಾಹ್ಯಾಕಾಶ ಅಪ್ಲಿಕೇಷನ್ಸ್‌ಗಳ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಕಸ್ತೂರಿರಂಗನ್ ಅವರ 200ಕ್ಕೂ ಹೆಚ್ಚು ಪ್ರಬಂಧಗಳು ಪ್ರಕಟವಾಗಿವೆ.

ಬಾಹ್ಯಾಕಾಶ ವಿಜ್ಞಾನಿಯಾಗಿ ಅವರ ಕೊಡುಗೆಯ ಜೊತೆಗೆ, ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸಂರಕ್ಷಣೆ (2013) ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (2020) ಕುರಿತ ಅವರ ವರದಿಗಳು ಮಹತ್ವದ್ದಾಗಿವೆ.

2013ರಲ್ಲಿ ಸಲ್ಲಿಸಲಾದ ಪಶ್ಚಿಮ ಘಟ್ಟಗಳ ಕುರಿತಾದ ಕಸ್ತೂರಿರಂಗನ್ ವರದಿಯು ಪಶ್ಚಿಮ ಘಟ್ಟಗಳ ಶೇ 37ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲು ಪ್ರಸ್ತಾಪಿಸಿದೆ. NEP 2020 ಅನ್ನು ರಚಿಸಿದ ಕಸ್ತೂರಿರಂಗನ್ ಸಮಿತಿಯು ಶಿಕ್ಷಣ ವ್ಯವಸ್ಥೆಯಲ್ಲಿ ಪ್ರವೇಶ, ಸಮಾನತೆ, ಗುಣಮಟ್ಟ, ಕೈಗೆಟುಕುವಿಕೆ ಮತ್ತು ಹೊಣೆಗಾರಿಕೆಯ ಮೇಲೆ ಕೇಂದ್ರೀಕರಿಸಿ ಹಲವಾರು ಪ್ರಮುಖ ಬದಲಾವಣೆಗಳನ್ನು ಪ್ರಸ್ತಾಪಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com