
ಬೆಂಗಳೂರು: ಕರ್ನಾಟಕದ ಆಲಮಟ್ಟಿ ಮತ್ತು ಹಿಪ್ಪರಗಿ ಅಣೆಕಟ್ಟುಗಳ ಎತ್ತರ ಹೆಚ್ಚಿಸುವ ರಾಜ್ಯದ ಪ್ರಸ್ತಾವನೆಗೂ ಮಹಾರಾಷ್ಟ್ರದ ಪ್ರವಾಹಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಎಂಬಿ ಪಾಟೀಲ್ ಅವರು ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ಜಲಾನಯನ ಪ್ರದೇಶದಲ್ಲಿರುವ ಮಹಾರಾಷ್ಟ್ರದ ಸಾಂಗ್ಲಿ, ಸತಾರ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದಕ್ಕೆ ಕೊಯ್ನಾ, ರಾಜಾಪುರ ಮತ್ತು ಇತರ ಅಣೆಕಟ್ಟುಗಳಿಂದ ಏಕಕಾಲದಲ್ಲಿ ನೀರು ಬಿಡುಗಡೆ ಮಾಡಿದ್ದು, ಜೊತೆಗೆ ಅತಿಕ್ರಮಣ ಕಾರಣವಾಗಿದೆ. ಹೀಗಾಗಿ ಕರ್ನಾಟಕದ ಆಲಮಟ್ಟಿ ಮತ್ತು ಹಿಪ್ಪರಗಿ ಅಣೆಕಟ್ಟುಗಳ ಎತ್ತರ ಹೆಚ್ಚಿಸುವ ರಾಜ್ಯದ ಪ್ರಸ್ತಾವನೆಗೂ ಮಹಾರಾಷ್ಟ್ರದ ಪ್ರವಾಹಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಆಲಮಟ್ಟಿ ಮತ್ತು ಹಿಪ್ಪರಗಿ ಅಣೆಕಟ್ಟುಗಳ ಎತ್ತರಕ್ಕೂ ಮಹಾರಾಷ್ಟ್ರ ಪ್ರವಾಹಕ್ಕೂ ಯಾವುದೇ ಸಂಬಂಧವಿಲ್ಲ, ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ (ಕೆಡಬ್ಲ್ಯೂಡಿಟಿ) ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.6 ಮೀಟರ್‌ಗಳಿಂದ 524.56 ಮೀಟರ್‌ಗಳಿಗೆ ಹೆಚ್ಚಿಸಲು ಕರ್ನಾಟಕಕ್ಕೆ ಅಧಿಕಾರ ನೀಡಿದೆ. ಇದುವರೆಗೆ ಈ ನಿರ್ಧಾರಕ್ಕೆ ಎಂದಿಗೂ ಆಕ್ಷೇಪಿಸದ ಮಹಾರಾಷ್ಟ್ರ ಸರ್ಕಾರವು ಈಗ ಕೇಂದ್ರ ಸರ್ಕಾರಕ್ಕೆ ತಪ್ಪು ಉದ್ದೇಶಗಳೊಂದಿಗೆ ಪತ್ರ ಬರೆದಿದೆ ಎಂದು ಕಿಡಿಕಾರಿದ್ದಾರೆ.
2019 ರಲ್ಲಿ ಸಾಂಗ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭವಿಸಿದ ಪ್ರವಾಹದ ನಂತರ, ಅಂದಿನ ಮಹಾರಾಷ್ಟ್ರ ಸರ್ಕಾರವು ಪ್ರವಾಹ ತಗ್ಗಿಸುವ ತಂತ್ರಗಳನ್ನು ಶಿಫಾರಸು ಮಾಡಲು ನಿವೃತ್ತ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಂದಕುಮಾರ್ ವಡ್ನೆರೆ ಅವರ ನೇತೃತ್ವದಲ್ಲಿ 10 ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿತ್ತು.
ಸಮಿತಿಯು ಮೇ 2022 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು, ವರದಿಯಲ್ಲಿ ಸಾಂಗ್ಲಿಯಲ್ಲಿನ ಪ್ರವಾಹಕ್ಕೆ ಆಲಮಟ್ಟಿ ಮತ್ತು ಹಿಪ್ಪರಗಿ ಅಣೆಕಟ್ಟುಗಳ ಹಿನ್ನೀರು ಕಾರಣವಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಈ ಹಿನ್ನೀರು ಸಂಪೂರ್ಣವಾಗಿ ಕರ್ನಾಟಕದ ಗಡಿಯೊಳಗೆ ಬರುತ್ತವೆ. ಮಹಾರಾಷ್ಟ್ರದ ಯಾವುದೇ ಭೂಮಿಯನ್ನು ಮುಳುಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಆಲಮಟ್ಟಿ ಸಾಂಗ್ಲಿಯಿಂದ ಸುಮಾರು 260 ಕಿ.ಮೀ ದೂರದಲ್ಲಿದೆ, ಆದರೆ ಹಿಪ್ಪರಗಿಯ ಹಿನ್ನೀರು ರಾಜಾಪುರ ಬ್ಯಾರೇಜ್‌ನಿಂದ 22 ಕಿ.ಮೀ ದೂರದಲ್ಲಿದೆ. ವಡ್ನೆರೆ ಸಮಿತಿ ವರದಿಯ ಪ್ರಕಾರ, ಕೊಯ್ನಾ ಅಣೆಕಟ್ಟು, ರಾಜಾಪುರ ಬ್ಯಾರೇಜ್ ಮತ್ತು ಇತರ ಮೂಲಗಳಿಂದ ಲಕ್ಷಾಂತರ ಕ್ಯೂಸೆಕ್‌ಗಳಷ್ಟು ನೀರನ್ನು ಏಕಕಾಲದಲ್ಲಿ ಬಿಡುಗಡೆ ಮಾಡಿದ್ದರಿಂದ ಪ್ರವಾಹ ಉಂಟಾಗಿದೆ ಎಂದು ತಿಳಿಸಿದೆ.
ಆಲಮಟ್ಟಿ ಅಣೆಕಟ್ಟಿನ ಎತ್ತರದ ಬಗ್ಗೆ ಯಾವುದೇ ವಿವಾದವಿಲ್ಲ. ಈ ಸಮಸ್ಯೆಯನ್ನು ಕೆಡಬ್ಲ್ಯೂಡಿಟಿ ಈಗಾಗಲೇ ಪರಿಹರಿಸಿದೆ. ಮಹಾರಾಷ್ಟ್ರವು ನಿಜವಾಗಿಯೂ ಪ್ರವಾಹ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಬಯಸಿದರೆ, ಅದು ಅಂತರ್ ರಾಜ್ಯ ಪ್ರವಾಹ ಸಮನ್ವಯ ಸಮಿತಿಯ ಮೂಲಕ ಪರಿಹರಿಸಿಕೊಳ್ಳಬೇಕು. ಆದರೆ, ಈ ವಿಚಾರವನ್ನು ರಾಜಕೀಯಗೊಳಿಸಲು ಬಯಸುತ್ತಿದೆ ಎಂದು ಕಿಡಿಕಾರಿದರು.
Advertisement