
ಬೆಂಗಳೂರು: ರಾಜ್ಯ ರಾಜಧಾನಿಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಫೋನ್ ಬಳಸಿ ಸಿಕ್ಕಿಬಿದ್ದಿರುವ ಹಲವಾರು ಘಟನೆಗಳು ಬೆಳಕಿಗೆ ಬಂದ ಬಳಿಕವೂ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಶಿಕ್ಷೆಗೊಳಗಾದ ಕೈದಿಗಳು ಕಂಬಿಗಳ ಹಿಂದಿನಿಂದಲೇ ಸುಲಿಗೆ ದಂಧೆಗಳನ್ನು ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಕೈದಿಗಳ ಈ ವರ್ತನೆ ಜೈಲಿನೊಳಗೆ ಮೊಬೈಲ್ ಫೋನ್ ಬಳಕೆಯ ಮೇಲಿನ ನಿರ್ಬಂಧಗಳ ಪರಿಣಾಮಕಾರಿತ್ವದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿದೆ.
ಶಿಕ್ಷೆಗೊಳಗಾದವರು, ವಿಶೇಷವಾಗಿ ರೌಡಿ-ಶೀಟರ್‌ಗಳು, ಜಾಮೀನು ಪಡೆಯಲು ಹೊರಟಿರುವ ವಿಚಾರಣಾಧೀನ ಕೈದಿಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಜಾಮೀನು ಮೂಲಕ ಹೊರ ಹೋಗುವ ವಿಚಾರಣಾಧೀನ ಕೈದಿಗಳ ಫೋನ್ ಸಂಖ್ಯೆಗಳನ್ನು ಪಡೆಯುವ ಕೈದಿಗಳು, ವಾಟ್ಸಾಪ್ ಮೂಲಕ ಅವರಿಗೆ ಕರೆ ಮಾಡಿ, ಕೊಲೆ ಬೆದರಿಕೆ ಮತ್ತು ಕಿರುಕುಳ ನೀಡುವ ಮೂಲಕ ಹಣವನ್ನು ವಸೂಲಿ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.
ಈ ಕೈದಿಗಳು ತಮ್ಮ ಸಂಬಂಧಿಕರಿಗೆ ಸೇರಿದ ಬ್ಯಾಂಕ್ ಖಾತೆಗಳಿಗೆ ಯುಪಿಐ ಮೂಲಕ ಹಣ ವರ್ಗಾಯಿಸುವಂತೆ ಸೂಚಿಸುತ್ತಿದ್ದು, ಬಳಿಕ ಸಂಬಂಧಿಕರಿಂದ ಹಣವನ್ನು ಪಡೆದು, ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
ಮಾದಕವಸ್ತು ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ ಬಂದಿರುವ ಅರುಳ್ ಕುಮಾರ್ (36) ಎಂಬಾತ ಸಿಸಿಬಿಗೆ ದೂರು ನೀಡಿದ ನಂತರ ಈ ಸುಲಿಗೆ ದಂಧೆ ಪ್ರಕರಣ ಬೆಳಕಿಗೆ ಬಂದಿದೆ.
ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳಾದ ಹರ್ಷಿತ್, ಗಂಗರಾಜು ಮತ್ತು ಇನ್ನೊಬ್ಬ ವ್ಯಕ್ತಿ ಲಿಖಿತ್ ಯುಪಿಐ ಮೂಲಕ ಬಹು ಖಾತೆಗಳಿಗೆ ಹಣವನ್ನು ಹಾಕಿಸಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.
ಎಫ್‌ಐಆರ್‌ನಲ್ಲಿ ನೆಲ್ಸನ್ ಸಾವನ್ ಅಲಿಯಾಸ್ ಬಬ್ಲು, ವಿಜಿ ಅಲಿಯಾಸ್ ಗುರು, ಚೇತನ್ ಮತ್ತು ಶಂಕರ್ ಎಂಬುವವರ ಹೆಸರನ್ನೂ ಸೇರಿಸಿದ್ದು, ಇವರು ಈ ದಂಧೆಯ ಪ್ರಮುಖರು ಎಂದು ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ. ಅಲ್ಲದೆ, ಮತ್ತೊಬ್ಬ ರೌಡಿಶೀಟರ್ ಶೇಖರ್ ಹೆಸರೂ ಎಫ್‌ಐಆರ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಲಾಗುತ್ತಿದ್ದು, ಅವರ ವಹಿವಾಟು ಇತಿಹಾಸವನ್ನು ಪತ್ತೆಹಚ್ಚಲಾಗುವುದು ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೆಲ ವಹಿವಾಟುಗಳು 5,000-15,000 ರೂ.ಗಳ ನಡುವೆ ಇದ್ದು, ಖಾತೆ ವಿವರಗಳನ್ನು ಕೋರಿ ಬ್ಯಾಂಕ್‌ಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
Advertisement