
ನವದೆಹಲಿ: ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಉಚಿತವಾಗಿ ಭೂಮಿ ನೀಡಲು ಹಾಗೂ ಯೋಜನಾ ವೆಚ್ಚದ ಶೇ 50:50 ವೆಚ್ಚ ಭರಿಸಲು ನಿರಾಕರಿಸಿದ ಕಾರಣಕ್ಕೆ ಶಿವಮೊಗ್ಗ-ಹರಿಹರ ನಡುವಿನ ರೈಲ್ವೆ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬುಧವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕೇಳಿರುವ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.
ಕರ್ನಾಟಕದ ರೈಲ್ವೇ ಯೋಜನೆಗಳಿಗೆ ಅಗತ್ಯವಿರುವ ಒಟ್ಟು 8,969 ಹೆಕ್ಟೇರ್ ಭೂಮಿಯಲ್ಲಿ ಕೇವಲ 5,657 ಹೆಕ್ಟೇರ್ (ಶೇ.63) ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿದೆ. ಯೋಜನೆಗಳಿಗೆ ಒಟ್ಟು 3,312 ಹೆಕ್ಟೇರ್ ಭೂಮಿಯನ್ನು ಇನ್ನೂ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ರಾಜ್ಯ ಸರಕಾರ 832 ಕೋಟಿ ವೆಚ್ಚದಲ್ಲಿ ಭೂಮಿ ವಶಪಡಿಸಿಕೊಳ್ಳಬೇಕಿತ್ತು. ಆದರೆ, ಸರಕಾರ ಅಸಮರ್ಥತೆ ತೋರಿದ್ದರಿಂದ ಯೋಜನೆ ಸ್ಥಗಿತಗೊಂಡಿದೆ. ಶಿವಮೊಗ್ಗ-ರಾಣೆಬೆನ್ನೂರು, ಧಾರವಾಡ, ವೈಟ್‌ಫೀಲ್ಡ್-ಕೋಲಾರ, ಹಾಸನ-ಬೇಲೂರು ಮಾರ್ಗಗಳು ಸಹ ಸ್ಥಗಿತಗೊಂಡಿವೆ ಎಂದು ತಿಳಿಸಿದರು.
ಹರಿಹರ -ಶಿವಮೊಗ್ಗ (79 ಕಿಮೀ) ರೈಲು ಯೋಜನೆಯನ್ನು ಶೇ.50ರ ಅನುಪಾತದ ಯೋಜನೆಯಡಿ ಮಂಜೂರು ಮಾಡಲಾಗಿತ್ತು. ರಾಜ್ಯ ಸರಕಾರ 832 ಕೋಟಿ ವೆಚ್ಚದಲ್ಲಿ ಯೋಜನೆಗೆ ಬೇಕಾದ ಭೂಮಿಯನ್ನು ವಶಪಡಿಸಿಕೊಂಡು ಒದಗಿಸಬೇಕಿದೆ. ಒಟ್ಟು 488 ಹೆ. ಭೂಮಿಯನ್ನು ಒದಗಿಸಲು ರೈಲ್ವೆ ಇಲಾಖೆ ಕರ್ನಾಟಕ ಸರಕಾರವನ್ನು ಕೋರಿತ್ತು. ಆದರೆ, ಈ ವೆಚ್ಚವನ್ನು ಹಂಚಿಕೊಳ್ಳಲು ಮತ್ತು ಉಚಿತವಾಗಿ ಭೂಮಿಯನ್ನು ಒದಗಿಸಲು ಕರ್ನಾಟಕ ಸರಕಾರ ಅಸಮರ್ಥತೆ ತೋರಿಸಿದೆ, ಈ ಕಾರಣಕ್ಕೆ ಯೋಜನೆ ಸ್ಥಗಿತಗೊಂಡಿದೆ ಎಂದರು.
ಇದೇ ವೇಳೆ ಕರ್ನಾಟಕದಲ್ಲಿ ಈ ರೀತಿ ಭೂಮಿ ಸಮಸ್ಯೆಯಿಂದ ಸ್ಥಗಿತಗೊಂಡಿರುವ ಯೋಜನೆಗಳ ವಿವರಗಳನ್ನು ಸಚಿವರು ನೀಡಿದರು.
ಶಿವಮೊಗ್ಗ-ರಾಣೆಬೆನ್ನೂರು ಹೊಸ ಮಾರ್ಗಕ್ಕಾಗಿ (96 ಕಿಮೀ) 226 ಹೆಕ್ಟೇರ್ ಸ್ವಾಧೀನಪಡಿಸಿಕೊಂಡರೆ, 333 ಹೆಕ್ಟೇರ್ ಬಾಕಿ ಇದೆ. ಬೆಳಗಾವಿ - ಧಾರವಾಡ ಹೊಸ ಮಾರ್ಗಕ್ಕೆ (73 ಕಿ.ಮೀ.), 531 ಹೆಕ್ಟೇರ್ ಭೂಮಿ ಅಗತ್ಯವಿದ್ದು, ವೈಟ್‌ಫೀಲ್ಡ್ - ಕೋಲಾರ ಹೊಸ ಮಾರ್ಗಕ್ಕೆ (53 ಕಿ.ಮೀ.) 337 ಹೆಕ್ಟೇರ್ ಭೂಮಿ ಅಗತ್ಯವಿದೆ. ಅದೇ ರೀತಿ 206 ಹೆಕ್ಟೇರ್ ಅಗತ್ಯವಿರುವ ಹಾಸನ - ಬೇಲೂರು ಹೊಸ ಮಾರ್ಗಕ್ಕೆ (27 ಕಿ.ಮೀ.) ಒಂದೇ ಒಂದು ಹೆಕ್ಟೇರ್ ಭೂಮಿಯನ್ನೂ ಸ್ವಾಧೀನಪಡಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದರು.
ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಬೇಕೆಂದರೆ ಅದು, ರಾಜ್ಯ ಸರ್ಕಾರದ ತ್ವರಿತ ಭೂಸ್ವಾಧೀನ, ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಅರಣ್ಯ ತೆರವು, ಸ್ಥಳಾಂತರ, ವಿವಿಧ ಅಧಿಕಾರಿಗಳಿಂದ ಶಾಸನಬದ್ಧ ಅನುಮತಿಗಳು, ಪ್ರದೇಶದ ಭೌಗೋಳಿಕ ಮತ್ತು ಭೌಗೋಳಿಕ ಪರಿಸ್ಥಿತಿಗಳು, ಯೋಜನಾ ಸ್ಥಳಗಳ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ, ನಿರ್ದಿಷ್ಟ ಯೋಜನೆಗಳ ಕುರಿತ ಮಾಹಿತಿ ಸೇರಿದಂತೆ ಹಳವು ಅಂಶಗಳನ್ನು ಅವಲಂಬಿಸಿರುತ್ತದೆ. ಈ ಎಲ್ಲಾ ಅಂಶಗಳು ಯೋಜನೆಗಳ ಪೂರ್ಣಗೊಳಿಸುವ ಸಮಯ ಮತ್ತು ವೆಚ್ಚದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದರು.
Advertisement