
ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಮೊಬೈಲ್ ಫೋನ್‌ನಲ್ಲಿ ಸಂಗ್ರಹವಾಗಿರುವ ಫೋಟೋಗಳು ಮತ್ತು ವೀಡಿಯೊಗಳ ಬಗ್ಗೆ ತನಿಖೆ ನಡೆಸಿದರೆ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಂತೆ ಅವರಿಗೂ ಜೈಲು ಶಿಕ್ಷೆಯಾಗಲಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023 ರಲ್ಲಿ ಸಂಸತ್ತಿನ ಭದ್ರತಾ ಉಲ್ಲಂಘನೆ ಘಟನೆ ಬಳಿಕ ಪ್ರತಾಪ್ ಸಿಂಹ ಅವರ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ವೇಳೆ ಪ್ರತಾಪ್ ಸಿಂಹ ಮೊಬೈಲ್‌ನಲ್ಲಿ ನಗ್ನ ಚಿತ್ರಗಳು, ನಗ್ನ ವೀಡಿಯೋಗಳು ಕಂಡು ಬಂದಿದ್ದವು. ಇದನ್ನು ನೋಡಿದ ಅಮಿತ್ ಶಾ ಅವರೇ ದಂಗಾಗಿ ಹೋಗಿದ್ದಾರೆ. ಈ ಬಗ್ಗೆ ನನ್ನ ಬಳಿ ಆಧಾರಗಳಿವೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ರೀತಿಯಲ್ಲಿಯೇ ಪ್ರತಾಪ್ ಸಿಂಹ ಅವರ ವೀಡಿಯೋಗಳೂ ಇವೆ. ಅಂತಹ ವಿಡಿಯೋ ಇರುವುದಕ್ಕೆ ಗೃಹ ಸಚಿವರು ಪ್ರತಾಪ್ ಸಿಂಹ ಮೊಬೈಲ್ ಸೀಝ್ ಮಾಡಿಸಿದರು. ಪ್ರತಾಪ್ ಸಿಂಹ ಅಶ್ಲೀಲ ವಿಡಿಯೋಗಳು ನನ್ನ ಮೊಬೈಲ್‌ನಲ್ಲೇ ಇವೆ, ಮೊಬೈಲ್‌ನಲ್ಲಿರುವ ವಿಡಿಯೋಗಳನ್ನು ನೋಡಿದ ನಂತರವೇ ಬಿಜೆಪಿ ನಾಯಕರು ಪ್ರತಾಪ್ ಸಿಂಹಗೆ ಲೋಕಸಭಾ ಟಿಕೆಟ್ ನೀಡಬಾರದು ಎಂಬ ನಿರ್ಧಾರ ಕೈಗೊಂಡರು. ಇಂತಹ ಪ್ರತಾಪ್ ಸಿಂಹಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
KRSಗೆ ಅಡಿಗಲ್ಲು ಹಾಕಿದ್ದು ಟಿಪ್ಪು: ಮಹದೇವಪ್ಪ ಹೇಳಿಕೆ ಸತ್ಯ
ಇದೇ ವೇಳೆ ಸಚಿವ ಎಚ್.ಸಿ. ಮಹದೇವಪ್ಪ ಅವರ 'ಕೆಆರ್‌ಎಸ್‌ಗೆ ಟಿಪ್ಪು ಅಡಿಗಲ್ಲು ಹಾಕಿದ್ದರು' ಎಂಬ ಹೇಳಿಕೆಯನ್ನು ಲಕ್ಷ್ಮಣ್ ಅವರು ಸಮರ್ಥಿಸಿಕೊಂಡಿದ್ದಾರೆ.
ಕೆಆರ್‌ಎಸ್‌ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಎಂಬ ಸಚಿವ ಎಚ್.ಸಿ. ಮಹದೇವಪ್ಪ ಹೇಳಿಕೆಯಲ್ಲಿ ಯಾವ ತಪ್ಪು ಇಲ್ಲ. ಮಹದೇವಪ್ಪ ಹೇಳಿದ್ದು ನೂರಕ್ಕೆ ನೂರು ಸತ್ಯ. ಅಣೆಕಟ್ಟು ಕಟ್ಟಿದ್ದು ಮಹಾರಾಜರು. ಆದರೆ, ಅದಕ್ಕೆ ಮೊದಲು ಅದೇ ಜಾಗದಲ್ಲಿ ಬ್ಯಾರೇಜ್ ಕಟ್ಟಿದ್ದು ಟಿಪ್ಪು. ಮೋವಿ ಡ್ಯಾಂ ಎಂದು ಹೆಸರಿಟ್ಟು 6 ಟಿಎಂಸಿ ನೀರು ಸಂಗ್ರಹಣದ ಬ್ಯಾರೇಜ್ ಅನ್ನು ಟಿಪ್ಪು ಕಟ್ಟಿದ್ದರು. ಶ್ರೀರಂಗಪಟ್ಟಣ, ಕೆ.ಆರ್. ನಗರ ಭಾಗಕ್ಕೆ ಇದರಿಂದ ನೀರು ಹರಿಸುತ್ತಿದ್ದರು. ನಂತರ ಇದೇ ಜಾಗದಲ್ಲೇ ಕೆಆರ್ ಎಸ್ ಅಣೆಕಟ್ಟು ಕಟ್ಟಲಾಗಿದೆ. ಇದಕ್ಕೆ ಶಾಸನದ ಸಾಕ್ಷಿ ಇದೆ ಎಂದು ಹೇಳಿದರು.
ಮೈಸೂರು ಮಹಾರಾಜರು ನಗರಕ್ಕೆ ಕುಡಿಯುವ ನೀರು, ಪಾರಂಪರಿಕ ಕಟ್ಟಡಗಳು, ಆಸ್ಪತ್ರೆಗಳನ್ನು ನೀಡಿದ್ದಾರೆ. ಅದೇ ರೀತಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ಉಂಡವಾಡಿ ಯೋಜನೆಯಡಿ ಕುಡಿಯುವ ನೀರು, 12 ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ಶಾಲಾ, ಕಾಲೇಜು ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರ ಅತಿ ಹೆಚ್ಚು ಅಭಿವೃದ್ಧಿಯನ್ನು ಸಿದ್ದರಾಮಯ್ಯ ಮಾಡಿದ್ದಾರೆ. ನಾವು ನಾಲ್ವಡಿ ಅವರೊಂದಿಗೆ ಹೋಲಿಕೆ ಮಾಡಲು ಬಯಸುವುದಿಲ್ಲ. ಅವರಿಗೆ ರಾಜಪ್ರಭುತ್ವದಲ್ಲಿ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇತ್ತು. ಆದರೆ, ಹಲವಾರು ಸಮಸ್ಯೆಗಳ ನಡುವೆಯೂ ಮೈಸೂರಿಗೆ ಸಿದ್ದರಾಮಯ್ಯ 3 ಸಾವಿರ ಕೋಟಿ ರೂ. ನೀಡಿದ್ದಾರೆ ಎಂದು ತಿಳಿಸಿದರು.
ಮೈಸೂರು ಲೋಕಸಭಾ ಚುನಾವಣೆಯಲ್ಲಿ ಬಹಳ ಲೋಪವಾಗಿದೆ. ಬಿಜೆಪಿ ಇವಿಎಂನಲ್ಲಿ ಮತಗಳ್ಳತನ ಮಾಡಿದೆ. ಒಟ್ಟು 2202 ಬೂತ್ ನಲ್ಲಿ 292 ಬೂತ್ ಗಳಲ್ಲಿ ಮತಗಳ್ಳತನ ಆಗಿದೆ. 292 ಇವಿಎಂ ಯಂತ್ರದಲ್ಲಿ ರಿಗ್ಗಿಂಗ್ ಆಗಿದೆ. 292 ಬೂತ್‌ಗಳಲ್ಲಿ 1 ಲಕ್ಷ 45 ಸಾವಿರ ಮತಗಳಿವೆ. ಅದರಲ್ಲಿ 22 ಸಾವಿರ ಮತ ಮಾತ್ರ ಕಾಂಗ್ರೆಸ್‌ಗೆ ಬಂದಿವೆ. ಕಳೆದ ನಾಲ್ಕು ಚುನಾವಣೆಯಲ್ಲಿ ಇದೇ ಬೂತ್‌ಗಳಲ್ಲಿ ಕಾಂಗ್ರೆಸ್ ಗೆ ಶೇಕಡಾ 50 - 60 ಮತ ಬಂದಿದ್ದವು. ಒಂದು ಬೂತ್ ವ್ಯಾಪ್ತಿಯಲ್ಲಿ 15 ಮನೆ ಕಾಂಗ್ರೆಸ್ ಕಾರ್ಯಕರ್ತರದು. ಅಲ್ಲಿ 750 ಮತಗಳಲ್ಲವೆ. ಆದರೆ ಕಾಂಗ್ರೆಸ್ ಬಂದಿದ್ದು ಬರೀ ಏಳು ಮತ ಮಾತ್ರ. ಎನ್.ಆರ್. ಕ್ಷೇತ್ರದ ಶಾಂತಿ ನಗರದಲ್ಲೂ ಇದೇ ರೀತಿ ಆಗಿದೆ ಎಂದು ಆರೋಪ ಮಾಡಿದರು.
Advertisement