
ಬೆಂಗಳೂರು: ಕೆಎಸ್‌ಆರ್‌ಟಿಸಿ ನೌಕರರ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿಯು ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲು ಸರ್ವಾನುಮತದಿಂದ ನಿರ್ಧರಿಸಿರುವುದಾಗಿ ಕರ್ನಾಟಕ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ.
ಕಾರ್ಮಿಕ ಸಂಘಟನೆಗಳು ನೀಡಿದ ಈ ಹೇಳಿಕೆಯನ್ನು ಪರಿಗಣಿಸಿ, ಮುಷ್ಕರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠವು ಇತ್ಯರ್ಥಪಡಿಸಿತು.
ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುವುದರಿಂದ ಮುಷ್ಕರ ನಡೆಸದಂತೆ ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಆದೇಶಿಸುವಂತೆ ಕೋರಿ ಬೆಂಗಳೂರಿನ ಜೆ ಸುನೀಲ್ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಆ.5ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಸರ್ಕಾರ ಎಸ್ಮಾ ಕಾಯ್ದೆ ಜಾರಿ ಮಾಡಿದ್ದರೂ ಮುಷ್ಕರ ನಡೆಸಿರುವುದು ಅಕ್ರಮವೆಂದು ಕಾರ್ಮಿಕ ಸಂಘಟ ನೆಗಳ ಜಂಟಿ ಕ್ರಿಯಾ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿತ್ತು.
ಮುಷ್ಕರ ಹಿಂಪಡೆದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು. ಇಲ್ಲವಾದರೆ ಕ್ರಿಯಾ ಸಮಿತಿಯ ಪದಾಧಿಕಾರಿಗಳನ್ನು ಬಂಧಿಸಲು ಆದೇಶಿಸಲಾಗುವುದು ಎಂದು ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿತ್ತು.
ನಿನ್ನೆ ನಡೆದ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು “ಕಾರ್ಮಿಕರ ಜತೆ ಸಂಧಾನ ಮುಂದುವರಿಯುತ್ತಿದೆ. ಇಂದೂ ಸಹ ಮಾತುಕತೆ ನಡೆದಿದ್ದು, ಆಗಸ್ಟ್ 28ಕ್ಕೆ ಮತ್ತೆ ಸಂಧಾನ ಸಭೆ ನಡೆಯಲಿದೆ” ಎಂದು ತಿಳಿಸಿದರು.
ಅರ್ಜಿದಾರರ ಪರ ವಕೀಲರು ವಾದಿಸಿ, ಸದ್ಯ ಮುಷ್ಕರ ನಿಲ್ಲಿಸಿದ್ದರೂ ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮರುಕಳಿಸುವ ಸಾಧ್ಯತೆ ಇದೆ. ಆದ್ದರಿಂದ, ಪ್ರಕರಣ ಸಂಬಂಧ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಕಾಲಮಿತಿ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.
ವಾದ ಪ್ರತಿವಾದ ಆಲಿಸಿದ ಪೀಠವು ಸರ್ಕಾರ ಮತ್ತು ಕಾರ್ಮಿಕರ ನಡುವೆ ಸಂಧಾನ ಮುಂದುವರಿಯಲಿ. ಸದ್ಯ ಮುಷ್ಕರ ಹಿಂಪಡೆಯಲಾಗಿದೆ. ಆದ್ದರಿಂದ, ಪಿಐಎಲ್ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿ, ಅರ್ಜಿ ವಿಲೇವಾರಿ ಮಾಡಿತು.
Advertisement