ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ: ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ; ನಾಗರಿಕರೇ... ಈ ಮಾರ್ಗಗಳಲ್ಲಿ ಸಂಚಾರ ತಪ್ಪಿಸಿ

ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 8.30 ರಿಂದ 12 ಗಂಟೆವರೆಗೆ ಕೆಲವೊಂದು ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
Yellow Line Metro Rail
ಹಳದಿ ಮೆಟ್ರೋ ರೈಲುBMRCL
Updated on

ಬೆಂಗಳೂರು: ಬೆಂಗಳೂರು ಮೆಟ್ರೋ 3ನೇ ಹಂತದ ಯೋಜನೆಗೆ ಶಂಕುಸ್ಥಾಪನೆ, ಹಳದಿ ಮೆಟ್ರೋ ಮಾರ್ಗ ಉದ್ಘಾಟನೆ ಹಾಗೂ ಮೂರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರುವ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಸುಮಾರು 4 ಗಂಟೆಗಳ ನಗರ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿಯವರು 3 ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಮೋದಿಯವರು, ಹೆಲಿಕಾಪ್ಟರ್ ಮತ್ತು ರಸ್ತೆಯ ಮೂಲಕ ಕೆಎಸ್‌ಆರ್ ಬೆಂಗಳೂರು (ನಗರ) ರೈಲು ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ, ಅಲ್ಲಿ ಕೆಎಸ್‌ಆರ್ ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.

ಅಮೃತಸರ-ಶ್ರೀ ಮಾತಾ ವೈಷ್ಣೋದೇವಿ ಕತ್ರಿ ಮತ್ತು ಅಜ್ನಿ (ನಾಗ್ಪುರ)-ಪುಣೆ ನಡುವಿನ ಇನ್ನೂ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ.

ನಂತರ ಹಳದಿ ಮಾರ್ಗದಲ್ಲಿರುವ ಆರ್‌ವಿ ರಸ್ತೆ (ರಾಗಿಗುಡ್ಡ) ಮೆಟ್ರೋ ನಿಲ್ದಾಣಕ್ಕೆ ರಸ್ತೆ ಮೂಲಕ ಪ್ರಯಾಣಿಸಲಿದ್ದಾರೆ.

11:45 ರಿಂದ 12:50 ರ ನಡುವೆ ಹಳದಿ ಮಾರ್ಗಕ್ಕೆ (5 ತಲುಪುವ) ಹಸಿರು ನಿಶಾನೆ ತೋರಿ, ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣಕ್ಕೆ ಮೆಟ್ರೋ ಮೂಲಕ ಸಂಚರಿಸಲಿದ್ದಾರೆ.

ಅಲ್ಲಿಂದ ಬೆಂಗಳೂರಿನ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT) ಗೆ ಪ್ರಯಾಣಿಸಲಿದ್ದಾರೆ, ಅಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ಬೆಂಗಳೂರು ಮೆಟ್ರೋ ಹಂತ-3ಕ್ಕೆ ಅಡಿಪಾಯ ಹಾಕಲಿದ್ದಾರೆ. ಬಳಿಕ ಆರ್‌ವಿ ರಸ್ತೆ (ರಾಗಿಗುಡ್ಡ)ಯಿಂದ ಬೊಮ್ಮಸಂದ್ರ ನಿಲ್ದಾಣದವರೆಗಿನ ಹಳದಿ ಮಾರ್ಗವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.

ನಂತರ ಹೆಲಿಕಾಪ್ಟರ್‌ನಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿ ಮಧ್ಯಾಹ್ನ 2.45 ಕ್ಕೆ ದೆಹಲಿಗೆ ಹಿಂತಿರುಗಲಿದ್ದಾರೆ.

ಬೆಂಗಳೂರು ಮೆಟ್ರೋದ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ 19.15 ಕಿ.ಮೀ ಹಳದಿ ಮಾರ್ಗವನ್ನು 16 ನಿಲ್ದಾಣಗಳೊಂದಿಗೆ 5,056.99 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಈ ಮಾರ್ಗವು ಹೊಸೂರು ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಮೆಟ್ರೋ ಹಂತ 3 44.65 ಕಿ.ಮೀ. ಉದ್ದವಿದ್ದು, ಅಂದಾಜು 15,611 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತದೆ ಎಂದು ತಿಳಿದುಬಂದಿದೆ.

Yellow Line Metro Rail
Yellow Line: ಕ್ರಿಕೆಟ್ ಮ್ಯಾಚ್ Credit ತಗೋಳಕೆ ಮುಂದಾಗೋರು ಈಗ ಮೆಟ್ರೋ ಕ್ರೆಡಿಟ್ ಗೆ ಬರದೇ ಇರ್ತಾರ?- ತೇಜಸ್ವಿ ಸೂರ್ಯ

ಕೆಲ ರಸ್ತೆಗಳಲ್ಲಿ ಸಂಚಾರ ಬಂದ್

ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 8.30 ರಿಂದ 12 ಗಂಟೆವರೆಗೆ ಕೆಲವೊಂದು ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಮಾರೇನಹಳ್ಳಿ ರಾಜಲಕ್ಷ್ಮೀ ಜಂಕ್ಷನ್ ನಿಂದ 18ನೇ ಮುಖ್ಯರಸ್ತೆ, ಈಸ್ಟ್ ಎಂಡ್ ಜಂಕ್ಷನ್ ನಿಂದ ಅರವಿಂದ ಜಂಕ್ಷನ್ ವರೆಗೆ ಹಾಗೂ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈ ಓವರ್, ಹೊಸೂರು ಕಡೆಯಿಂದ ನಗರದ ಕಡೆಗೆ ಬರುವ ಮಾರ್ಗ, ಇನ್‌ಫೋಸಿಸ್ ಅವೆನ್ಯೂ, ವೇಲಾಂಕಣಿ ರಸ್ತೆಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ಅದೇ ಸಮಯದಲ್ಲಿ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 2:30 ರವರೆಗೆ ಈ ನಿರ್ಬಂಧಗಳನ್ನ ಅನುಸರಿಸಲಾಗುವುದು.

ಬೆಳಿಗ್ಗೆ 11.30ರಿಂದ ಮಧ್ಯಾಹ್ನ 2.30ರ ವರೆಗೆ ಸಿಲ್ಕ್ ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮತ್ತು ಹೊಸೂರು ರಸ್ತೆಯ ಮೂಲಕ ಹೊಸೂರು ಕಡೆಗೆ ಹಾಗೂ ಹೊಸೂರು ಕಡೆಯಿಂದ ಬೆಂಗಳೂರು ನಗರದ ಕಡೆಗೆ, ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದ ಇನ್ಫೊಸಿಸ್‌ ಅವೆನ್ಯೂ, ವೇಲಾಂಕಣಿ ರಸ್ತೆ, ಎಚ್‌.ಪಿ ಅವೆನ್ಯೂ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

Yellow Line Metro Rail
ಬೆಂಗಳೂರು ಮೆಟ್ರೋ ಹಳದಿ ಮಾರ್ಗ: ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ
  • ಮಾರೇನಹಳ್ಳಿ ಮುಖ್ಯ ರಸ್ತೆಯ ರಾಜಲಕ್ಷ್ಮಿ ಜಂಕ್ಷನ್‌ನಿಂದ ಮಾರೇನಹಳ್ಳಿ 18ನೇ ಮುಖ್ಯ ರಸ್ತೆಯ ಮಾರ್ಗವಾಗಿ ಜಯದೇವ ಕಡೆಗೆ ಸಂಚರಿಸುವ ವಾಹನ ಸವಾರರು ಬನಶಂಕರಿ ಬಸ್ ನಿಲ್ದಾಣದ ಕಡೆಯಿಂದ ಸಾರಕ್ಕಿ ಮಾರ್ಕೆಟ್ ರಸ್ತೆ/9ನೇ ಕ್ರಾಸ್ ರಸ್ತೆಯಲ್ಲಿ ಎಡ ತಿರುವು ಪಡೆದು ಐ.ಜಿ ಸರ್ಕಲ್, ಆರ್.ವಿ. ಡೆಂಟಲ್ ಜಂಕ್ಷನ್ ಮಾರ್ಗವಾಗಿ 8ನೇ ಮುಖ್ಯ ರಸ್ತೆ 9ನೇ ಕ್ರಾಸ್ ರಸ್ತೆ ಜಂಕ್ಷನ್ ಮೂಲಕ ಜಯದೇವ ಕಡೆಗೆ ಸಂಚರಿಸಬಹುದಾಗಿರುತ್ತದೆ ಹಾಗೂ ಸಾರಕ್ಕಿ ಜಂಕ್ಷನ್ ಔಟರ್ ರಿಂಗ್ ರಸ್ತೆಯ ಮೂಲಕ ಸಹ ಬನ್ನೇರುಘಟ್ಟ ರಸ್ತೆ ಕಡೆಗೆ ಚಲಿಸಬಹುದು.

  • 4ನೇ ಮುಖ್ಯ ರಸ್ತೆ ಕಡೆಯಿಂದ ಜಯದೇವ ಕಡೆಗೆ ಸಂಚರಿಸುವ ವಾಹನ ಸವಾರರು ರಾಜಲಕ್ಷ್ಮೀ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಸಾರಕ್ಕಿ ಮುಖ್ಯರಸ್ತೆಯಲ್ಲಿ ಎಡ ತಿರುವು ಪಡೆದುಕೊಂಡು ಐ.ಜಿ ಸರ್ಕಲ್ ಆರ್.ವಿ. ಡೆಂಟಲ್ ಮಾರ್ಗವಾಗಿ 8ನೇ ಮುಖ್ಯ ರಸ್ತೆ 9ನೇ ಕ್ರಾಸ್ ರಸ್ತೆ ಜಂಕ್ಷನ್ ಮೂಲಕ ಜಯದೇವ ಕಡೆಗೆ/ಬನ್ನೇರುಘಟ್ಟ ರಸ್ತೆ ಕಡೆಗೆ ಸಂಚರಿಸಬಹುದು.

  • ಈಸ್ಟ್ ಎಂಡ್ ಸರ್ಕಲ್ ಕಡೆಯಿಂದ ಬನಶಂಕರಿ ಕಡೆಗೆ ಸಂಚರಿಸುವ ವಾಹನ ಸವಾರರು 29ನೇ ಮುಖ್ಯ ರಸ್ತೆಯಲ್ಲಿ 28ನೇ ಮುಖ್ಯ ರಸ್ತೆಯಲ್ಲಿ ಎಡ ತಿರುವು ಪಡೆದು 8ನೇ ಮುಖ್ಯ ರಸ್ತೆ 9ನೇ ಕ್ರಾಸ್ ಜಂಕ್ಷನ್ ಮೂಲಕ ಡಾಲಿಯಾ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಔಟರ್ ರಿಂಗ್ ರಸ್ತೆಯ ಮೂಲಕ ಸಾರಕ್ಕಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಕನಕಪುರ ರಸ್ತೆ ಹಾಗೂ ಬನಶಂಕರಿ ಕಡೆಗೆ ಚಲಿಸಬಹುದು.

  • ಹೊಸೂರು ರಸ್ತೆಯಿಂದ ಕನಕಪುರ ರಸ್ತೆ, ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಹೊಸೂರು ರಸ್ತೆ ಬೊಮ್ಮಸಂದ್ರ ಜಂಕ್ಷನ್‌ನಿಂದ ಜಿಗಣಿ ರಸ್ತೆ ಮುಖಾಂತರ ಬನ್ನೇರುಘಟ್ಟ ರಸ್ತೆಯಲ್ಲಿ ನೈಸ್ ರಸ್ತೆಯನ್ನು ತಲುಪಿ ಸಂಚರಿಸಬಹುದು.

  • ನೈಸ್ ರಸ್ತೆಯಿಂದ ಹೊಸೂರು ಕಡೆಗೆ ಸಂಚರಿಸುವ ವಾಹನಗಳು ಬನ್ನೇರುಘಟ್ಟ ಜಂಕ್ಷನ್‌ನಲ್ಲಿ ಇಳಿದು ಜಿಗಣಿ ರಸ್ತೆ ಮುಖಾಂತರ ಬೊಮ್ಮಸಂದ್ರ ಜಂಕ್ಷನ್ ಹೊಸೂರು ರಸ್ತೆಯನ್ನು ತಲುಪಿ ಸಂಚರಿಸಬಹುದು.

  • ಹೊಸೂರು ರಸ್ತೆಯಿಂದ ಸರ್ಜಾಪುರ ರಸ್ತೆ, ವರ್ತೂರು, ವೈಟ್ ಫೀಲ್ಡ್ ಹೊಸಕೋಟೆ ಕಡೆಗೆ ಸಂಚರಿಸುವ ವಾಹನಗಳು ಚಂದಾಪುರ ಜಂಕ್ಷನ್‌ನಿಂದ ದೊಮ್ಮಸಂದ್ರ ರಸ್ತೆ ಮುಖಾಂತರ ಸರ್ಜಾಪುರ ರಸ್ತೆಯನ್ನು ತಲುಪಿ ಸಂಚರಿಸಬಹುದು.

  • ಹೆಚ್.ಎಸ್.ಆರ್.ಲೇಔಟ್, ಕೋರಮಂಗಲ, ಬೆಳ್ಳಂದೂರು, ವೈಟ್ ಫೀಲ್ಡ್ ಹಾಗೂ ನಗರದ ಕಡೆಯಿಂದ ಹೊಸೂರು ಕಡೆಗೆ ಸಂಚರಿಸುವ ವಾಹನಗಳು ಸರ್ಜಾಪುರ ರಸ್ತೆ ಮೂಲಕ ಚಂದಾಪುರ ತಲುಪಿ ಹೊಸೂರು ಕಡೆ ಸಂಚರಿಸಬಹುದು.

  • ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದಲ್ಲಿ ಸಂಚರಿಸುವ ವಾಹನಗಳು 2ನೇ ಕ್ರಾಸ್ ರಸ್ತೆ, ಶಿಕಾರಿಪಾಳ್ಯರಸ್ತೆ, ಹುಲಿಮಂಗಲ ರಸ್ತೆ, ಗೊಲ್ಲಹಳ್ಳಿ ರಸ್ತೆಗಳಲ್ಲಿ ಸಂಚರಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com