
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರಿ ಮೋದಿಯವರ ಭೇಟಿ ಹಾಗೂ ಭಾರೀ ಮಳೆಯಿಂದಾಗಿ ನಗರದಲ್ಲಿ ಭಾನುವಾರ ಎದುರಾದ ಸಂಚಾರ ದಟ್ಟಣೆ ಸಮಸ್ಯೆಗೆ ಸವಾರರು ಹೈರಾಣಾದರು.
ಮೋದಿ ಭೇಟಿ ಹಿನ್ನೆಲೆಯಲ್ಲಿ ನಿನ್ನೆ ಬೆಳಿಗ್ಗೆ ನಗರದ ನಗರದ ಮಧ್ಯ ಮತ್ತು ದಕ್ಷಿಣ ವಿಭಾಗಗಳಲ್ಲಿ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಭದ್ರತಾ ದೃಷ್ಟಿಯಿಂದ ನಗರದ ಹಲವು ರಸ್ತೆಗಳಲ್ಲಿ ನಿರ್ಬಂಧ ಹೇರಲಾಗಿತ್ತು. ಮಧ್ಯಾಹ್ನದ ನಂತರ ಭಾರೀ ಮಳೆಯಿದಾಗಿ ಸಂಚಾರ ನಿಧಾನಗತಿಯಾಗಿದ್ದು, ಈ ವೇಳೆ ಎದುರಾದ ಸಂಚಾರ ದಟ್ಟಣೆಯಿಂದ ಜನರು ಸಾಕಷ್ಟು ಸಮಸ್ಯೆ ಎದುರಿಸುವಂತಾಯಿತು.
ಪ್ರಧಾನಿಯವರ ಬೆಂಗಾವಲು ಪಡೆಯ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮತ್ತು ಇತರ ಪ್ರದೇಶಗಳನ್ನು ಬಂದ್ ಮಾಡಲಾಗಿತ್ತು. ಇದರಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭಾರೀ ಸಂಚಾರ ದಟ್ಟಣೆ ಎದುರಾಗಿತ್ತು.
ಪರಿಸ್ಥಿತಿ ನಿಭಾಯಿಸಲು ಪರ್ಯಾಯ ಮಾರ್ಗಗಳಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿತ್ತು. ಸಹಾಯಕ್ಕಾಗಿ ಸಂಚಾರ ವಾರ್ಡನ್‌ಗಳನ್ನು ಕೂಡ ನಿಯೋಜಿಸಲಾಗಿತ್ತು.
ಏತನ್ಮಧ್ಯೆ, ಮಧ್ಯಾಹ್ನದ ವೇಳೆ ಸುರಿದ ಧಾರಾಕಾರ ಮಳೆಯಿಂದಾಗಿ ಹಲವಾರು ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿಕೊಂಡು, ನಗರದಾದ್ಯಂತ ಸಂಚಾರ ನಿಧಾನವಾಯಿತು.
ಹಲವಾರು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿದ್ದ ಹಿನ್ನೆಲೆಯಲ್ಲಿ ನಾಗವಾರ ಜಂಕ್ಷನ್, ಥಣಿಸಂದ್ರ, ಸಿಟಿ ಮಾರ್ಕೆಟ್ ಸರ್ಕಲ್, ಹೆಬ್ಬಾಳ ರಸ್ತೆ, ವಿಮಾನ ನಿಲ್ದಾಣ ರಸ್ತೆ, ಹೆಣ್ಣೂರು ರಸ್ತೆ, ಕುವೆಂಪು ಸರ್ಕಲ್, ದೇವಿನಗರ, ರಾಮಮೂರ್ತಿ ನಗರ ಸಿಗ್ನಲ್ ಮತ್ತು ಹಳೆ ಮದ್ರಾಸ್ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
Advertisement